ನವದೆಹಲಿ: ಭಾರತದ ಮೊದಲ ಗೂಢಚಾರ ಉಪಗ್ರಹ “ರಿಸ್ಯಾಟ್-2′ ಭೂಮಿಗೆ ಮರಳಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಗಡಿಗಳು ಮತ್ತು ಸಮುದ್ರ ತೀರಗಳ ಸುರಕ್ಷತೆಗಾಗಿ ಕಣ್ಣಿಟ್ಟಿದ್ದ ಇಸ್ರೋದ ಈ ಉಪಗ್ರಹವು ತನ್ನ ಕೆಲಸ ಪೂರೈಸಿ ಅ.30ರಂದು ಜಕಾರ್ತದ ಬಳಿ ಹಿಂದೂ ಮಹಾಸಾಗರಕ್ಕೆ ಬಂದು ಬಿದ್ದಿದೆ.
ರಿಸ್ಯಾಟ್-2 ಕಳುಹಿಸಿದ ಚಿತ್ರಗಳ ಆಧಾರದ ಮೇಲೆ 2016ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಭಾರತೀಯ ಸೇನೆ ಸರ್ಜಿಕಲ್ ದಾಳಿ ಕೈಗೊಂಡಿತ್ತು ಹಾಗೂ 2019ರ ಫೆಬ್ರವರಿಯಲ್ಲಿ ಬಾಲಕೋಟ್‌ನ ಉಗ್ರ ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿತ್ತು.
2008ರ ಮುಂಬೈ ದಾಳಿ ನಂತರ ಎಚ್ಚೆತ್ತ ಅಂದಿನ ಸರ್ಕಾರ, ಸ್ವಲ್ಪ ದಿನಗಳಲ್ಲಿ ಗೂಢಚಾರ ಉಪಗ್ರಹ “ರಿಸ್ಯಾಟ್-2′ ಉಡಾಯಿಸಿತು.
ಆರಂಭದಲ್ಲಿ 4 ವರ್ಷಗಳಿಗೆ “ರಿಸ್ಯಾಟ್-2′ ಉಪಗ್ರಹವನ್ನು ವಿನ್ಯಾಸಗೊಳಿಸಲಾಗಿತ್ತು. ಉಡಾವಣೆ ವೇಳೆ ಅದು 30 ಕೆಜಿ ಇಂಧನವನ್ನು ಹೊತ್ತೂಯ್ದಿತು. ಆದರೆ ತನ್ನ ಜೀವಿತಾವಧಿಗೂ ಮೀರಿ 13.5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಈ ಉಪಗ್ರಹವು, ಉಗ್ರರ ಒಳನುಸುಳುವಿಕೆ ತಡೆಗಟ್ಟುವಿಕೆ ಮತ್ತು ಅನೇಕ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿತು.
ಹಗಲು ಮತ್ತು ರಾತ್ರಿ ಸೇರಿದಂತೆ ಎಲ್ಲಾ ಹವಾಮಾನಗಳಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಈ ಉಪಗ್ರಹವನ್ನು ಹಿಂದೂ ಮಹಾಸಾಗರ ಮತ್ತು ಅರಬ್ಬೀ ಸಮುದ್ರದಲ್ಲಿ ಭದ್ರತೆಗೆ ಬೆದರಿಕೆಯೊಡ್ಡುವ ಹಡುಗುಗಳನ್ನು ಪತ್ತೆಹಚ್ಚಲು ಬಳಸಲಾಗುತ್ತಿತ್ತು.