Advertisement

ಒಳನಾಡು ಜಲಮಾರ್ಗ: ಭವಿಷ್ಯದ ಸಂಚಾರ ಮಾಧ್ಯಮ 

08:01 AM Nov 15, 2018 | |

ಜಲ ಸಾರಿಗೆ ಭಾರತಕ್ಕೆ ಹೊಸತಲ್ಲ. ಆಧುನಿಕ ಸಾರಿಗೆಯ ಆವಿಷ್ಕಾರಕ್ಕೂ ಮೊದಲು ಜನರು ಪ್ರಯಾಣಕ್ಕೆ ಮತ್ತು ಸರಕು ಸಾಗಾಟಕ್ಕೆ ಜಲ ಮಾರ್ಗವನ್ನೇ ಅವ ಲಂಬಿಸಿದ್ದರು. ಗಂಗೆಯಂಥ ನದಿಗಳು ಒಳನಾಡು ಸಾರಿಗೆಯ ಮುಖ್ಯ ಮಾಧ್ಯಮಗಳಾಗಿದ್ದವು. ಆದರೆ ರೈಲ್ವೇ ರಸ್ತೆ ಜಾಲ ಆಧುನೀಕರಣಗೊಂಡು ಅಭಿವೃದ್ಧಿಯಾದಂತೆಲ್ಲ ಜಲ ಸಾರಿಗೆ ಮೂಲೆಗುಂಪಾಯಿತು.

Advertisement

ದೇಶದ ಮೊದಲ ಒಳನಾಡು ಜಲಮಾರ್ಗ ಟರ್ಮಿನಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಸೋಮವಾರ ಉದ್ಘಾಟಿಸಿದರು. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ಒಂದು ಮೈಲುಗಲ್ಲಾಗುವಂಥ ಸಾಧನೆ. ಪಶ್ಚಿಮ ಬಂಗಾಳದ ಹಲ್ದಿಯಾ ಬಂದರಿನಿಂದ ವಾರಣಾಸಿ ತನಕ ಸುಮಾರು 1360 ಕಿ. ಮೀ. ದೀರ್ಘ‌ವಾಗಿರುವ ರಾಷ್ಟ್ರೀಯ ಜಲಮಾರ್ಗ 1 ಯೋಜನೆಯ ಮೊದಲ ಹಂತವಿದು. ಈ ಜಲಮಾರ್ಗದಲ್ಲಿ ಮೊದಲ ಸರಕು ಸಾಗಾಟವೂ ಆಗಿದೆ. 

ಜಲ ಸಾರಿಗೆ ಭಾರತಕ್ಕೆ ಹೊಸತಲ್ಲ. ಆಧುನಿಕ ಸಾರಿಗೆ ಮಾಧ್ಯಮಗಳ ಆವಿಷ್ಕಾರವಾಗುವ ಮೊದಲು ಜನರು ಪ್ರಯಾಣಕ್ಕೆ ಮತ್ತು ಸರಕು ಸಾಗಾಟಕ್ಕೆ ಜಲ ಮಾರ್ಗವನ್ನೇ ಅವಲಂಬಿಸಿದ್ದರು. ಗಂಗೆಯಂಥ ದೊಡ್ಡ ನದಿಗಳು ಒಳನಾಡು ಸಾರಿಗೆಯ ಮುಖ್ಯ ಮಾಧ್ಯಮಗಳಾಗಿದ್ದವು. ಆದರೆ ರೈಲ್ವೇ ಮತ್ತು ರಸ್ತೆ ಜಾಲ ಆಧುನೀಕರಣಗೊಂಡು ಅಭಿವೃದ್ಧಿಯಾದಂತೆಲ್ಲ ಜಲ ಸಾರಿಗೆ ಮೂಲೆಗುಂಪಾಯಿತು. ಒಳನಾಡು ಜಲಸಾರಿಗೆಗೆ ವಿಪುಲ ಅವಕಾಶ ಇದ್ದರೂ ಅದನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ ಇಲ್ಲದ ಕಾರಣ ಈ ಕ್ಷೇತ್ರದಲ್ಲಿ ನಾವಿಂದು ಬಹಳ ಹಿಂದುಳಿದಿದ್ದೇವೆ. ಹಲವು ರಾಷ್ಟ್ರಗಳು ಇಂದು ಈ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿ ಅದನ್ನು ತಮ್ಮ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಂಡಿವೆ. ಈ ಅವಕಾಶ ನಮಗೆ ಧಾರಾಳ ಇದ್ದರೂ ನಾವಿನ್ನೂ ಆರಂಭದ ಹಂತದಲ್ಲಷ್ಟೇ ಇದ್ದೇವೆ. 

ಒಳನಾಡು ಜಲಸಾರಿಗೆಯಿಂದ ಇರುವ ಅನುಕೂಲಗಳು ಅನೇಕ. ಸರಕು ಸಾಗಣೆ ಅಗ್ಗ ಮತ್ತು ಹೆಚ್ಚು ಸುರಕ್ಷಿತ ಮಾತ್ರವಲ್ಲದೆ ಕ್ಷಿಪ್ರವೂ ಹೌದು. ವಿಶ್ವಬ್ಯಾಂಕಿನ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಈಗಲೂ ಸರಕು ಸಾಗಿಸಲು ಹೆಚ್ಚಾಗಿ ಅವಲಂಬಿಸಿರುವುದು ರಸ್ತೆ ಸಾರಿಗೆಯನ್ನೇ. ರಸ್ತೆ ಮೂಲಕ ಶೇ. 65, ರೈಲ್ವೇಯಲ್ಲಿ ಶೇ. 27 ಮತ್ತು ಜಲಮಾರ್ಗದಲ್ಲಿ ಬರೀ ಶೇ. 0.5 ಸರಕು ಸಾಗಾಟವಾಗುತ್ತದೆ. ಚೀನಾ, ಅಮೆರಿಕ, ಯುರೋಪ್‌ ಸೇರಿದಂತೆ ಯುರೋಪ್‌ ಹಾಗೂ ಏಷ್ಯಾದ ಹಲವು ದೇಶಗಳು ಈ ವಿಚಾರದಲ್ಲಿ ನಮ್ಮಿಂದ ಎಷ್ಟೋ ಮುಂದಿವೆ. 

ಭೂಸಾರಿಗೆಯ ಅತಿಯಾದ ಅವಲಂಬನೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ನಾವೀಗಲೇ ಅನುಭವಿಸುತ್ತಿದ್ದೇವೆ. ರಾಷ್ಟ್ರೀಯ ಹೆದ್ದಾರಿಗಳ ಮೇಲಿನ ವಿಪರೀತ ಒತ್ತಡ, ಅತಿಯಾದ ಸಾರಿಗೆ ವೆಚ್ಚ, ಇಂಧನ ಬಳಕೆ ಅಧಿಕ ಮಾತ್ರವಲ್ಲದೆ ಕಾರ್ಬನ್‌ ಡೈ ಆಕ್ಸೆ„ಡ್‌ ಕೂಡಾ ಹೆಚ್ಚು ಬಿಡುಗಡೆಯಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಹೀಗಿದ್ದರೂ ಪರ್ಯಾಯ ಮಾರ್ಗದ ಕುರಿತು ನಾವು ಚಿಂತಿಸದಿರುವುದು ನಮ್ಮ ಇಚ್ಛಾಶಕ್ತಿಯ ಕೊರತೆಯಲ್ಲದೇ ಮತ್ತೇನೂ ಅಲ್ಲ. ಇದೀಗ ಈ ನಿಟ್ಟಿನಲ್ಲಿ ತುಸು ಸುಧಾರಣೆ ಕಂಡಿರುವುದು ಸ್ವಾಗತಾರ್ಹ.

Advertisement

ಇದಲ್ಲದೆ ಒಳನಾಡು ಜಲಮಾರ್ಗಗಳನ್ನು ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಯ ದೃಷ್ಟಿಕೋನದಿಂದಲೂ ನೋಡುವ ಅಗತ್ಯವಿದೆ. ಕೇರಳ, ಗುಜರಾತ್‌ನಂಥ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಹಿನ್ನೀರು ಮತ್ತು ನಾಲೆಗಳನ್ನು ಆರ್ಥಿಕ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಿಕೊಂಡ ರಾಜ್ಯಗಳಿಲ್ಲ. ನಮ್ಮ ರಾಜ್ಯವನ್ನೇ ತೆಗೆದುಕೊಂಡರೆ, ಇಲ್ಲಿ ಜಲ ಸಾರಿಗೆ ಮತ್ತು ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಅಗತ್ಯವಿರುವ ಕರಾವಳಿ ಮತ್ತು ನದಿಗಳು ಸಾಕಷ್ಟಿದ್ದರೂ ಅವುಗಳನ್ನು ಸಮಗ್ರವಾಗಿ ಬಳಸಿಕೊಳ್ಳುವ ಕೆಲಸ ಇನ್ನೂ ಆಗಿಲ್ಲ.

ದೇಶದಲ್ಲಿರುವ ಹಿನ್ನೀರು, ಕರಾವಳಿ, ನದಿಗಳು ಮತ್ತು ಕಾಲುವೆಗಳನ್ನು ಯೋಜನಾಬದ್ಧವಾಗಿ ಬಳಸಿಕೊಂಡರೆ ಅದ್ಭುತವಾದ ಒಳನಾಡು ಜಲಸಾರಿಗೆ ಜಾಲವನ್ನು ನಿರ್ಮಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಕಾರ್ಯೋನ್ಮುಖವಾಗಿದ್ದರೂ ಇಷ್ಟರ ತನಕ ಆಗಿರುವ ಪ್ರಗತಿ ತೃಪ್ತಿದಾಯಕವಲ್ಲ. 111 ರಾಷ್ಟ್ರೀಯ ಒಳನಾಡು ಜಲಸಾರಿಗೆ ಮಾರ್ಗಗಳನ್ನು ನಿರ್ಮಿಸುವ ಯೋಜನೆ ರೂಪುಗೊಂಡು ಮತ್ತು ಮಸೂದೆ ಮಂಜೂರಾಗಿ ನಾಲ್ಕು ವರ್ಷವಾದ ಬಳಿಕ ಜಲಮಾರ್ಗದ ಮೊದಲ ಹಂತವಷ್ಟೇ ಉದ್ಘಾಟನೆಯಾಗಿದೆ ಎನ್ನುವುದು ನಮ್ಮ ಅಧಿಕಾರಶಾಹಿಯ ನಿಧಾನಗತಿಯ ನಡೆಯನ್ನು ಸೂಚಿಸುತ್ತದೆ. ಇಂಥದ್ದಕ್ಕೆ ಕಡಿವಾಣ ಹಾಕಿ, ಇನ್ನಾದರೂ ವೇಗವನ್ನು ಹೆಚ್ಚಿಸುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next