ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ನೀಡಿಕೆ ಉದ್ದೇಶದಿಂದ ಕೇಂದ್ರ ಸರಕಾರ ಸರಕಾರ ಹೊಸ ಬಾಂಡ್ ಬಿಡುಗಡೆಗೆ ನಿರ್ಧರಿಸಿದೆ. ಈ ತಿಂಗಳಲ್ಲಿಯೇ ಅದು ಮಾರುಕಟ್ಟೆಗೆ ಲಭ್ಯವಾಗಲಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
‘ಭಾರತ್ ಬಾಂಡ್ ಈಕ್ವಿಟಿ ಟ್ರೇಡಿಂಗ್ ಫಂಡ್’ ಎಂದು ಕರೆಯಲಾಗುವ ಈ ಫಂಡ್ ದೇಶದ ಮೊದಲ ಕಾರ್ಪೊರೆಟ್ ಫಂಡ್ ಎಂಬ ಹೆಗ್ಗಳಿಕೆ ಈ ಫಂಡ್‌ಗೆ ಇದೆ.
ಖಾಸಗಿ ಸಂಸ್ಥೆ ಫಂಡ್ ಅನ್ನು ನಿರ್ವಹಿಸಲಿದ್ದು, ಕನಿಷ್ಠ ಯುನಿಟ್ ಮೊತ್ತವನ್ನು 1 ಸಾವಿರ ರೂ. ಎಂದು ನಿಗದಿ ಮಾಡಲಾಗಿದೆ. ಇದರಿಂದಾಗಿ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಹೆಚ್ಚಿನ ವಿತ್ತೀಯ ನೆರವು ಸಿಗಲಿದೆ. ಈಕ್ವಿಟಿ ಟ್ರೇಡೆಡ್ ಫಂಡ್ ವ್ಯಾಪ್ತಿಯಲ್ಲಿ ಹಲವು ಬಾಂಡ್‌ಗಳು ಒಳಗೊಂಡಿರಲಿವೆ. ಇದು ವಿವಿಧ ರೀತಿಯ ಹೂಡಿಕೆದಾರರಿಗೆ ಅನುಕೂಲವಾಗಲಿದೆ.
ರಾಜ್ಯ ಸರಕಾರಗಳ ಸಂಸ್ಥೆಗಳು ಮತ್ತು ಇತರ ಯಾವುದೇ ಸರಕಾರಿ ಸಂಸ್ಥೆಗಳು ಬಾಂಡ್‌ಗಳನ್ನು ಹೊರಡಿಸಲು ಅವಕಾಶ ಇದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರತಿಯೊಂದು ಬಾಂಡ್ ನಿಗದಿತ ಅವಧಿಯಲ್ಲಿ ಮೆಚ್ಯುರಿಟಿ ಪಡೆಯಲಿದೆ. ಅದನ್ನು ಮೂರು ಅಥವಾ ಹತ್ತು ವರ್ಷಗಳು ಎಂದು ನಿಗದಿ ಮಾಡಲಾಗಿದೆ.
ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಸೊತ್ತು ನಿರ್ವಹಣೆ (ಡಿಐಪಿಎಎಮ್) ಕಾರ್ಯದರ್ಶಿ ತುಹಿನ್ ಕಾಂತಾ ಮಾತನಾಡಿ ಈ ತಿಂಗಳಲ್ಲಿಯೇ ಅದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದರು. ಪ್ರತಿ ಆರು ತಿಂಗಳಿಗೆ ಒಂದು ಬಾರಿ ಅದನ್ನು ಬಿಡುಗಡೆ ಮಾಡಲಾಗುತ್ತದೆ. ಚಿಲ್ಲರೆ ಹೂಡಿಕೆದಾರರಿಗೆ ಈಕ್ವಿಟಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದರು ವಿತ್ತ ಸಚಿವೆ.
ತಿದ್ದುಪಡಿ: ಇದೇ ವೇಳೆ, ಹಿರಿಯ ನಾಗರಿಕರ ಕಲ್ಯಾಣ, ಹೆತ್ತವರ ನಿರ್ವಹಣೆ (ತಿದ್ದುಪಡಿ) ಮಸೂದೆಗೂ ಸಂಪುಟ ಅನುಮೋದನೆ ನೀಡಿದೆ. ಅದರ ಪ್ರಕಾರ ಹಿರಿಯ ನಾಗರಿಕರಿಗೆ ಅಗತ್ಯವಾಗಿರುವ ಭದ್ರತೆ, ರಕ್ಷಣೆ ನೀಡುವುದರ ಬಗ್ಗೆ ವಾಗ್ಧಾನ ಮಾಡಲಾಗಿದೆ. ಹಿರಿಯ ನಾಗರಿಕರು ಇರುವ ಕೇಂದ್ರಗಳ ಕಡ್ಡಾಯ ನೋಂದಣಿ ಮತ್ತು ಅವರಿಗೆ ಸೇವೆಗಳನ್ನು ನೀಡುವ ಸಂಸ್ಥೆಗಳನ್ನೂ ನೋಂದಾಯಿಸಬೇಕು ಎಂದು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.
ಮಾಹಿತಿ ರಕ್ಷಣೆ ಮಸೂದೆ: ಮತ್ತೂಂದು ಪ್ರಮುಖ ನಿರ್ಧಾರದಲ್ಲಿ ವೈಯಕ್ತಿಕ ಮಾಹಿತಿ ಮಸೂದೆ (ಪರ್ಸನಲ್ ಡೇಟಾ ಪ್ರೊಟೆಕ್ಷನ್ )ಗೂ ಸಮ್ಮತಿ ಸೂಚಿಸಲಾಗಿದೆ. ಅರಣ್ಯ ಸಚಿವ ಪ್ರಕಾಶ್ ಜಾವ್ಡೇಕರ್ ಮಾತನಾಡಿ, ಹಾಲಿ ಚಳಿಗಾಲದ ಅಧಿವೇಶನದಲ್ಲಿಯೇ ಅದನ್ನು ಮಂಡಿಸಲಾಗುತ್ತದೆ ಎಂದರು.