Advertisement

ಜಾಗತಿಕ ಕಂಪೆನಿಗಳಿಗೆ ಭಾರತವೀಗ ನೆಚ್ಚಿನ ತಾಣ

06:44 AM Nov 21, 2020 | mahesh |

ಜಾಗತಿಕ ಮೊಬೈಲ್‌ ದೈತ್ಯ ಆ್ಯಪಲ್‌ ಕಂಪೆನಿ ತನ್ನ ಉತ್ಪಾದನ ಅಂಗಗಳನ್ನೊಳಗೊಂಡು 9 ಘಟಕಗಳನ್ನು ಚೀನದಿಂದ ಭಾರತಕ್ಕೆ ಬದಲಿಸಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ. ಭಾರತವನ್ನು ಉತ್ಪಾದನ ಹಬ್‌ ಆಗಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರ ಕೋವಿಡ್‌ ಕಾಲಘಟ್ಟದಲ್ಲಿ ಜಾಗತಿಕ ಕಂಪೆನಿಗಳಿಗೆ ಪೂರಕವಾದಂಥ ಮಹತ್ತರ ಯೋಜನೆಗಳನ್ನು, ನೀತಿಗಳನ್ನು ಜಾರಿಗೆ ತಂದಿರುವುದು ಎಷ್ಟು ಫ‌ಲ ಕೊಡುತ್ತಿದೆ ಎನ್ನುವ ಮಾಹಿತಿ ಇಲ್ಲಿ…

Advertisement

ಜಾಗತಿಕ ಸ್ಮಾರ್ಟ್‌ಫೋನ್‌, ಎಲೆಕ್ಟ್ರಾನಿಕ್ಸ್‌ ಕಂಪೆನಿಗಳ ಸೆಳೆಯುತ್ತಿದೆ ಪಿಎಲ್‌ಐ
ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ಈಗಲೂ ಚೀನ ಹಾಗೂ ವಿಯೆಟ್ನಾಂ ಬೃಹತ್‌ ಶಕ್ತಿಗಳಾಗಿವೆಯಾದರೂ, ಭಾರತವೂ ಮುಂದಿನ ಐದು ವರ್ಷಗಳಲ್ಲಿ ಸ್ಮಾರ್ಟ್‌ ಫೋನ್‌ ಮತ್ತು ಅದರ ಪರಿಕರಗಳ ಉತ್ಪಾದನ ಕ್ಷೇತ್ರವನ್ನು 143 ಶತಕೋಟಿ ಡಾಲರ್‌ನಷ್ಟು ಬೆಳೆಸುವ ಗುರಿಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಎಪ್ರಿಲ್‌ 1ರಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ(ಪಿಎಲ್‌ಐ) ಯೋಜನೆ ಜಾರಿ ಮಾಡಿದೆ. ಇದರನ್ವಯ ಮೊಬೈಲ್‌ ಫೋನುಗಳು ಮತ್ತು ಇತರ ಎಲೆಕ್ಟ್ರಾನಿಕ್‌ ವಸ್ತುಗಳನ್ನು(ಟ್ರಾನ್ಸಿಸ್ಟರ್ಸ್‌, ಡಯೋಡ್‌, ರೆಸಿಸ್ಟರ್ಸ್‌, ಕೆಪಾಸಿಟರ್ಸ್‌ ಮತ್ತು ನ್ಯಾನೋ-ಎಲೆಕ್ಟ್ರಿಕ್‌ ಪರಿಕರಗಳನ್ನು)ಭಾರತದಲ್ಲೇ ಉತ್ಪಾದಿಸುವ ಜಾಗತಿಕ ಹಾಗೂ ದೇಶೀಯ ಕಂಪೆನಿಗಳಿಗೆ 4-6 ಪ್ರತಿಶತ ಇನ್ಸೆಂಟಿವ್‌ ಕೊಡಲಾಗುತ್ತಿದೆ. ಈಗಾಗಲೇ 22 ಮೊಬೈಲ್‌ ಉತ್ಪಾದನ ಕಂಪೆನಿಗಳು ಪಿಎಲ್‌ಐ ಯೋಜನೆಯಡಿ ಅರ್ಜಿ ಸಲ್ಲಿಸಿವೆ. ಮುಂದಿನ ಐದು ವರ್ಷಗಳಲ್ಲಿ ಈ ವಲಯದಲ್ಲಿ 2 ಲಕ್ಷ ನೇರ ಹಾಗೂ 6 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಜಾಗತಿಕ ಗಾರ್ಮೆಂಟ್ಸ್‌ ಉದ್ಯಮಗಳ ಆಸಕ್ತಿ
ಮಾರ್ಚ್‌ ತಿಂಗಳವರೆಗೂ ಚೀನದ ಮಾರಾಟಗಾರರಿಂದ ಬಟ್ಟೆ ಖರೀದಿಸುತ್ತಿದ್ದ ಜರ್ಮನ್‌ನ ವಿಶ್ವವಿಖ್ಯಾತ ಬ್ರಾಂಡ್‌ ಮಾರ್ಕೋಪೋಲೋ ಈಗ ಚೀನದಿಂದ ವಿಮುಖವಾಗಲಾರಂಭಿಸಿದ್ದು, ಇತ್ತೀಚೆಗಷ್ಟೇ ಭಾರತದ ಮಾರಾಟಗಾರ ಸಂಸ್ಥೆ ವಾರ್ಸಾ ಇಂಟರ್‌ನ್ಯಾಷನಲ್‌ಗೆ ಬೃಹತ್‌ ಪ್ರಮಾಣದ ಉತ್ಪಾದನ ಆರ್ಡರ್‌ ಮಾಡಿದೆ. ಇನ್ನು ಅಮೆರಿಕದ ಪ್ರಖ್ಯಾತ ಮಕ್ಕಳ ಉಡುಪು ತಯಾರಕ ಬ್ರಾಂಡ್‌ ಕಾರ್ಟರ್‌, ತನ್ನ ನೆಲೆಯನ್ನು ಚೀನದಿಂದ ಭಾರತಕ್ಕೆ ಬದಲಿಸಲು ಕ್ರಮ ಕೈಗೊಳ್ಳುತ್ತಿದ್ದು, ಮುಂದಿನ ಫೆಬ್ರವರಿ ತಿಂಗಳೊಳಗೆ ಅದರ ಪ್ರಮುಖ ಉತ್ಪಾದನ ಘಟಕ ತಮಿಳುನಾಡಿನಲ್ಲಿ ತಲೆಯೆತ್ತಲಿದೆ.

ಮೊಬೈಲ್‌ ಫೋನ್‌ ವಲಯದಲ್ಲಿ ಸಂಚಲನ 
ಶಾರ್ಪ್‌ಕಾರ್ಪ್‌, ನಿಂಟೆಂಡೋ
ಜಪಾನ್‌ನ ಎಲೆಕ್ಟ್ರಾನಿಕ್‌ ಉತ್ಪಾದನ ಕಂಪೆನಿಗಳಾದ ಶಾರ್ಪ್‌ ಕಾರ್ಪ್‌, ಗೋ ಪ್ರೋ, ರಿಕೋ ಕೋ. ಲಿಮಿಟೆಡ್‌ ಚೀನದಲ್ಲಿನ ತಮ್ಮ ಉತ್ಪಾದನ ಘಟಕಗಳನ್ನು ಭಾರತಕ್ಕೆ ನೆಲೆ ಬದಲಿಸಲು ಯೋಚಿಸುತ್ತಿದ್ದು, ಈ ನಿಟ್ಟಿನಲ್ಲಿ ಜಪಾನ್‌ ಹಾಗೂ ಭಾರತ ಸರಕಾರದ ಜತೆಗೂ ಚರ್ಚಿಸುತ್ತಿವೆ. ಇನ್ನು ವಿಶ್ವವಿಖ್ಯಾತ ನಿಂಟೆಂಡೋ
ಎಲೆಕ್ಟ್ರಾನಿಕ್ಸ್‌ ಮತ್ತು ವೀಡಿಯೋ ಗೇಮ್‌ ಕಂಪೆನಿಯು ಈಗಾಗಲೇ ಚೀನದಲ್ಲಿನ ತನ್ನ ಹಲವು ಉತ್ಪಾದನ ಘಟಕಗಳನ್ನು ವಿಯೆಟ್ನಾಂಗೆ ಸ್ಥಳಾಂತರಿಸಿದ್ದು, ಉಳಿದದ್ದನ್ನು ಭಾರತಕ್ಕೆ ಸ್ಥಳಾಂತರಿಸಲು ಮಾತುಕತೆ ನಡೆಸುತ್ತಿದೆ.

ಭಾರತದ ಕಂಪೆನಿಗಳಿಗೂ ಬಲ
ಪಿಎಲ್‌ಐ ಯೋಜನೆಯ ಪ್ರೋತ್ಸಾಹ ಪಡೆಯಲು ಲಾವಾ, ಭಗವತಿ(ಮೈಕ್ರೋಮ್ಯಾಕ್ಸ್‌), ಪ್ಯಾಡ್ಜಟ್‌ ಎಲೆಕ್ಟ್ರಾನಿಕ್ಸ್‌, ಯುಟಿಎಲ್‌ ನಿಯೋಲಿಂಕ್ಸ್‌ ಮತ್ತು ಆಪ್ಟಿಮಸ್‌ ಎಲೆಕ್ಟ್ರಾನಿಕ್ಸ್‌ನಂಥ ದೇಶೀಯ ಕಂಪೆನಿಗಳೂ ಅನುಮತಿ ಪಡೆದಿವೆ.

Advertisement

ಆ್ಯಪಲ್‌ ಚಿತ್ತ ಭಾರತದತ್ತ
ಸ್ಯಾಮ್ಸಂಗ್‌ ಕಂಪೆನಿಯ ಪ್ರಮುಖ ಎದುರಾಳಿಯಾಗಿರುವ ಕುಪರ್ಟಿನೋ ಮೂಲದ ಆ್ಯಪಲ್‌ ಸಹ ಈಗಾಗಲೇ ಭಾರತದಲ್ಲಿ ಉತ್ಪಾದನ ಘಟಕಗಳನ್ನು ಹೊಂದಿದ್ದು, ಅದರ ಒಪ್ಪಂದದಾರ ಸಂಸ್ಥೆಗಳಾದ ವಿಸ್ಟ್ರಾನ್‌(ಬೆಂಗಳೂರು ಮತ್ತು ನರಸಾಪುರದಲ್ಲಿ ) ಮತ್ತು ಫಾಕ್ಸ್‌ಕಾನ್‌(ಶ್ರೀಪೆರಂಬದೂರ್‌, ತಮಿಳುನಾಡಿನಲ್ಲಿ) ಮೊಬೈಲ್‌ ಫೋನ್‌ಗಳನ್ನು ಉತ್ಪಾದಿಸುತ್ತಿವೆ. ಈಗ ಆ್ಯಪಲ್‌ನ ಮತ್ತೂಂದು ಗುತ್ತಿಗೆ ಆಧಾರಿತ ಉತ್ಪಾದಕ ಸಂಸ್ಥೆ ತೈವಾನ್‌ ಮೂಲದ ಪೆಗಾಟ್ರಾನ್‌ ಕೂಡ ಭಾರತದಲ್ಲಿ ಘಟಕ ಸ್ಥಾಪಿಸಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಘಟಕ ಸ್ಥಾಪಿಸಲು ರಾಜ್ಯ ಸರಕಾರದ ಜತೆ ಮಾತುಕತೆ ನಡೆಸಿದೆ.

ಸ್ಯಾಮ್ಸಂಗ್‌ ದಾಪುಗಾಲು
ಪ್ರಸಕ್ತ ಸ್ಯಾಮ್ಸಂಗ್‌ನ 50 ಪ್ರತಿಶತದಷ್ಟು ಉತ್ಪಾದನೆ ವಿಯೆಟ್ನಾಂನಲ್ಲೇ ಆಗುತ್ತಿದ್ದು ಈಗ ಸ್ಯಾಮ್ಸಂಗ್‌ ಮೊಬೈಲ್ಸ್‌ ವಿಯೆಟ್ನಾಂ ಮತ್ತು ಇತರ ಕೆಲವು ರಾಷ್ಟ್ರಗಳಲ್ಲಿನ ತನ್ನ ಉತ್ಪಾದನೆಯ ಬಹುದೊಡ್ಡ ಭಾಗವನ್ನು ಭಾರತಕ್ಕೆ ಸ್ಥಳಾಂತರಿಸಲು ಯೋಚಿಸುತ್ತಿದೆ. ಈಗಾಗಲೇ ಸ್ಯಾಮ್ಸಂಗ್‌ ನೋಯ್ಡಾದಲ್ಲಿ ಬೃಹತ್‌ ಉತ್ಪಾದನ ಘಟಕಗಳನ್ನು ಹೊಂದಿದೆಯಾದರೂ, ಪಿಎಲ್‌ಐ ಯೋಜನೆಯ ಪ್ರಯೋಜನ ಪಡೆದು ಸುಮಾರು 40 ಶತಕೋಟಿ ಡಾಲರ್‌ ಮೌಲ್ಯದ ಪರಿಕರಗಳನ್ನು ಭಾರತದಲ್ಲಿ ಉತ್ಪಾದಿಸಲು ಆಸಕ್ತಿ ತೋರಿದೆ. ಭಾರತ ಸರಕಾರ ಮತ್ತು ಸ್ಯಾಮ್ಸಂಗ್‌ ನಡುವೆ ಈ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳು ನಡೆದಿವೆ.

 

Advertisement

Udayavani is now on Telegram. Click here to join our channel and stay updated with the latest news.

Next