Advertisement

ಹೊಸ ಎತ್ತರಕ್ಕೆ ಭಾರತದ ರಾಜತಾಂತ್ರಿಕತೆ: G-20 ಯುನಿವರ್ಸಿಟಿ ಕನೆಕ್ಟ್‌ನಲ್ಲಿ ಪ್ರಧಾನಿ ಮೋದಿ

09:41 PM Sep 26, 2023 | Pranav MS |

ನವದೆಹಲಿ: “ಕಳೆದ 30 ದಿನಗಳಲ್ಲಿ ಭಾರತದ ರಾಜತಾಂತ್ರಿಕತೆಯು ಹೊಸ ಎತ್ತರವನ್ನು ಮುಟ್ಟಿದೆ. ಜಿ20 ಶೃಂಗಸಭೆಯಲ್ಲಿ ತೆಗೆದುಕೊಂಡ ಕೆಲವು ನಿರ್ಧಾರಗಳು 21ನೇ ಶತಮಾನದಲ್ಲಿ ಜಗತ್ತಿನ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ನವದೆಹಲಿಯಲ್ಲಿ ಮಂಗಳವಾರ ನಡೆದ “ಜಿ20 ಯುನಿವರ್ಸಿಟಿ ಕನೆಕ್ಟ್’ನ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

“ಕಳೆದ 30 ದಿನಗಳಲ್ಲಿ ನಾನು 85 ವಿಶ್ವ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಇಂದಿನ ಧ್ರುವೀಕೃತ ಅಂತಾರಾಷ್ಟ್ರೀಯ ಪರಿಸ್ಥಿತಿಯಲ್ಲಿ, ಒಂದೇ ವೇದಿಕೆಯಲ್ಲಿ ಹಲವು ರಾಷ್ಟ್ರಗಳನ್ನು ಒಂದುಗೂಡಿಸುವುದು ಸಣ್ಣ ವಿಷಯವಲ್ಲ. ದೆಹಲಿಯಲ್ಲಿ ನಡೆದ ಜಿ20 ಶೃಂಗದಲ್ಲಿ ಇದನ್ನು ಸಾಧಿಸಲಾಗಿದೆ’ ಎಂದರು.
“ದೇಶದ ಅಭಿವೃದ್ಧಿ ಪರ್ವ ಮುಂದುವರಿಯಲು ಸ್ವತ್ಛ, ಸ್ಪಷ್ಟ ಮತ್ತು ಸ್ಥಿರ ಆಡಳಿತವು ಅಗತ್ಯವಾಗಿದೆ’ ಎಂದು ಒತ್ತಿ ಹೇಳಿದರು.

“ಚಂದ್ರಯಾನ-3 ಯೋಜನೆಯ ಯಶಸ್ವಿ, ಜಿ20 ಶೃಂಗಸಭೆ, ಬ್ರಿಕ್ಸ್‌ಗೆ ಹೊಸದಾಗಿ 6 ದೇಶಗಳ ಸೇರ್ಪಡೆ, ಪ್ರಧಾನಿಮಂತ್ರಿ ವಿಶ್ವಕರ್ಮ ಯೋಜನೆ, ಉದ್ಯೋಗ ಮೇಳದ ಮೂಲಕ 1 ಲಕ್ಷ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರಿ ಉದ್ಯೋಗ, ಹೀಗೆ ಕಳೆದ 30 ದಿನಗಳಲ್ಲಿ ಹಲವು ಸಾಧನೆಗಳನ್ನು ಸರ್ಕಾರ ಮಾಡಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಹೊಸ ಭವಿಷ್ಯಕ್ಕೆ ನಾಂದಿ:
ಇದಕ್ಕೂ ಮುನ್ನ, ನವದೆಹಲಿಯಲ್ಲಿ ನಡೆದ ರೋಜ್‌ಗಾರ್‌ ಮೇಳದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಆಯ್ಕೆಯಾದ 51,000 ಅಭ್ಯರ್ಥಿಗಳಿಗೆ ಪ್ರಧಾನಿ ಮೋದಿಯವರು ವರ್ಚುವಲ್‌ ಆಗಿ ಉದ್ಯೋಗ ನೇಮಕ ಪತ್ರ ವಿತರಣೆ ಮಾಡಿದರು. ಇಲ್ಲಿ ಮಾತನಾಡಿದ ಅವರು, “ನೂತನ ಸಂಸತ್‌ ಭವನದಲ್ಲಿ ಮಹಿಳಾ ಮೀಸಲು ವಿಧೇಯಕ ಅಂಗೀಕಾರವು ದೇಶದ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದೆ. ಹೆಣ್ಣು ಮಕ್ಕಳಿಗೆ ಅವಕಾಶಗಳ ಹೊಸ ಹೊಸ ಬಾಗಿಲು ತೆರೆಯುವುದು ನಮ್ಮ ಸರ್ಕಾರದ ನೀತಿಯಾಗಿದೆ’ ಎಂದು ಪ್ರತಿಪಾದಿಸಿದರು.
“ಸರ್ಕಾರಿ ಯೋಜನೆಗಳಲ್ಲಿ ತಂತ್ರಜ್ಞಾನದ ಬಳಕೆಯು ಭ್ರಷ್ಟಾಚಾರವನ್ನು ತಡೆಗಟ್ಟಿದೆ. ಸಂಕೀರ್ಣತೆಯನ್ನು ಕಡಿಮೆ ಮಾಡಿದೆ ಹಾಗೂ ವಿಶ್ವಾಸರ್ಹತೆ ಮತ್ತು ಸೌಕರ್ಯವನ್ನು ಹೆಚ್ಚಿಸಿದೆ’ ಎಂದದರು. “ನಾಗರಿಕರು ಮೊದಲು ಎಂಬ ಧ್ಯೇಯದೊಂದಿಗೆ ಕರ್ತವ್ಯ ನಿರ್ವಹಿಸಿ ಹಾಗೂ ಆಡಳಿತದಲ್ಲಿ ಸುಧಾರಣೆ ತರಲು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿ’ ಎಂದು ಇದೇ ವೇಳೆ ನೂತನ ಸರ್ಕಾರಿ ಉದ್ಯೋಗಿಗಳಿಗೆ ಪ್ರಧಾನಿ ಮೋದಿ ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next