ನವದೆಹಲಿ: ಭಾರತದಲ್ಲಿ ಕೋವಿಡ್ 19 ವೈರಸ್ ರಣಕೇಕೆ ಬೀರುತ್ತಿದ್ದು, ಕಳೆದ 24 ಗಂಟೆಗಳಲ್ಲಿ 22,752 ಜನರಿಗೆ ಸೊಂಕಿಗೆ ತುತ್ತಾಗಿದ್ದಾರೆ. ಆ ಮೂಲಕ ಒಟ್ಟಾರೆ ವೈರಾಣು ಪೀಡಿತರ ಸಂಖ್ಯೆ 7,42,417ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಅಂಕಿ ಅಂಶಗಳ ಮೂಲಕ ತಿಳಿಸಿದೆ.
ದೇಶದದಲ್ಲಿ 2,64,994 ಸಕ್ರೀಯ ಪ್ರಕರಣಗಳಿದ್ದು, 4,56,830 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ವೈರಸ್ ಮರಣಮೃದಂಗಕ್ಕೆ 482 ಜನರು ಬಲಿಯಾಗಿದ್ದು, ಸಾವಿನ ಸಂಖ್ಯೆ 20,642ಕ್ಕೆ ಏರಿಕೆಯಾಗಿದೆ.
ಆದಾಗ್ಯೂ, ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಸೋಂಕಿನ ವೇಗ ಮತ್ತು ಸಾವುನೋವುಗಳು ಕಡಿಮೆ ಸಂಖ್ಯೆಯಲ್ಲಿವೆ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.
ಮಹಾರಾಷ್ಟ್ರದಲ್ಲಂತೂ ಕೋವಿಡ್ ವೈರಸ್ ಅಂಕೆ ಮೀರಿದ್ದು, 2,17,121 ಜನರಿಗೆ ಸೋಂಕಿನಿಂದ ಬಳಲುತ್ತಿದ್ದಾರೆ. ಮಾತ್ರವಲ್ಲದೆ ಈ ರಾಜ್ಯವೊಂದರಲ್ಲೇ ಅತೀ ಹೆಚ್ಚು ಅಂದರೇ 9,250 ಜನರು ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ 1,18,594 ಪ್ರಕರಣಗಳಿದ್ದರೆ, ದೆಹಲಿಯಲ್ಲಿ 1,02,831 ಜನರು ಸೊಂಕಿಗೆ ಭಾದಿತರಾಗಿದ್ದಾರೆ.
ಭಾರತದಲ್ಲಿ ಕೋವಿಡ್ -19 ವೈರಸ್ 1 ಲಕ್ಷ ಗಡಿ ದಾಟಲು 110 ದಿನಗಳನ್ನು ತೆಗೆದುಕೊಂಡಿತ್ತು. ಆದರೇ 1ರಿಂದ 7ಲಕ್ಷಕ್ಕೆ ಏರಿಕೆಯಾಗಲು ಕೇವಲ 48 ದಿನಗಳನ್ನು ಮಾತ್ರ ತೆಗೆದುಕೊಂಡಿದೆ. ದುರಂತವೆಂದರೇ ಕಳೆದ 4 ದಿನಗಳಲ್ಲೇ 1 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ.