Advertisement
ಕೋವಿಡ್ 19 ವೈರಸ್ ಸೋಂಕಿನ ವಿರುದ್ಧ ಮುನ್ನೆಲೆಯಲ್ಲಿ ನಿಂತು ಹಗಲಿರುಳೆನ್ನದೆ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಸ್ವತ್ಛತಾ ಕಾರ್ಯಕರ್ತರು, ಪೊಲೀಸರು, ಗೃಹರಕ್ಷಕರು ಸೇರಿ ಎಲ್ಲ ಆರೋಗ್ಯ ವೀರರಿಗೆ ಭಾರತದ ಭೂಸೇನೆ, ವಾಯುಸೇನೆ ಮತ್ತು ನೌಕಾ ಪಡೆಗಳು (ಸಶಸ್ತ್ರ ಪಡೆಗಳು) ಸಲ್ಲಿಸಿದ ಕೃತಜ್ಞತಾ ಗೌರವದ ಪರಿಯಿದು.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಮೇಲೆ ಹಾರಿದ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್, ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ವೈದ್ಯರು ಮತ್ತು ಆರೋಗ್ಯ ಸಿಬಂದಿ ಮೇಲೆ ಹೂ ಮಳೆ ಸುರಿಸಿದ್ದು ವಿಶೇಷವಾಗಿತ್ತು.
ಜತೆಗೆ ನವಮಂಗಳೂರು ಹಾಗೂ ಕಾರವಾರ ಬಂದರುಗಳಲ್ಲಿ ನಿಂತ ಹಡಗುಗಳಲ್ಲಿ ಸಂಜೆ ಬಳಿಕ ದೀಪಗಳು ಪ್ರಜ್ವಲಿಸಿದವು. ಈ ಮೂಲಕ ಕರ್ನಾಟಕದ ಕೋವಿಡ್ ವಾರಿಯರ್‌ಗಳಿಗೂ ಸಶಸ್ತ್ರ ಪಡೆಗಳು ಗೌರವ ಸಲ್ಲಿಸಿದವು.
ನೌಕಾ ಪಡೆಯ ವಿಶೇಷ ಸೆಲ್ಯೂಟ್
ಅರಬಿ ಸಮುದ್ರದಲ್ಲಿ ತೇಲಿದ ಭಾರತೀಯ ನೌಕಾ ಪಡೆಯ ಎರಡು ಹಡಗುಗಳಲ್ಲಿ ನಿಂತಿದ್ದ ನೂರಾರು ಸಿಬಂದಿ ಶಿಸ್ತಿನಿಂದ ಸೆಲ್ಯೂಟ್ ಹೊಡೆಯುವ ಮೂಲಕ ಆರೋಗ್ಯ ವೀರರಿಗೆ ಗೌರವ ಸಲ್ಲಿಸಿದರು.
Related Articles
ಇನ್ನು ಏರ್‌ಕ್ರಾಫ್ಟ್ ಕ್ಯಾರಿಯರ್ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಸಿಬಂದಿ ಮಾನವ ಸರಪಳಿ ನಿರ್ಮಿಸಿರುವ ಮೂಲಕ ಆರೋಗ್ಯ ವೀರರಿಗೆ ಧನ್ಯವಾದ ಹೇಳಿದರು.
Advertisement
ಇದರೊಂದಿಗೆ ಬಂಗಾಲಕೊಲ್ಲಿಯಲ್ಲಿ ಐಎನ್‌ಎಸ್ ಜಲಾಶ್ವ ಹಡಗಿನ ಸಿಬಂದಿ ‘ಥ್ಯಾಂಕ್ ಯು’ ಎಂದು ಬರೆದಂತೆ ನಿಂತು ಕೋವಿಡ್ ವಾರಿಯರ್‌ಗಳ ಸೇವೆಗೆ ಗೌರವ ಸಲ್ಲಿಸಿದರು. ಸಂಜೆ ಬಳಿಕ ಕರ್ನಾಟಕದ ಮಂಗಳೂರು, ಕಾರವಾರ ಸೇರಿ ದೇಶದ ಕರಾವಳಿ ತೀರದುದ್ದಕ್ಕೂ ನಿಂತ ಹಡಗುಗಳಲ್ಲಿ ದೀಪಗಳ ಬೆಳಕು ಪ್ರಜ್ವಲಿಸಿತು.
ಹೆಲಿಕಾಪ್ಟರ್‌ಗಳಿಂದ ಪುಷ್ಪನಮನ
ಬೆಂಗಳೂರಿನ ಯಲಹಂಕ ಸೇರಿ ದೇಶಾದ್ಯಂತ ಇರುವ ಭಾರತೀಯ ವಾಯುಪಡೆಯ ನೆಲೆಗಳಲ್ಲಿನ ಹೆಲಿಕಾಪ್ಟರ್‌ಗಳು ದೇಶದ ಹಲವು ಪ್ರಮುಖ ನಗರ ಹಾಗೂ ಪಟ್ಟಣಗಳ ಮೇಲೆ ಹಾರಾಟ ನಡೆಸಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಹೂಮಳೆ ಸುರಿಸಿದವು. ಸುಖೋಯ್, ಮಿಗ್ ಸಂಚಲನ
ರವಿವಾರ ಬೆಳಗ್ಗೆ 11 ಗಂಟೆಗೆ ದಿಲ್ಲಿಯ ರಾಜಪಥದ ಮೇಲೆ ಹಾರಿದ ಸುಖೋಯ್-30 ಎಂಕೆಐ, ಮಿಗ್-29 ಮತ್ತು ಜಾಗ್ವಾರ್ ಮಿಲಿಟರಿ ವಿಮಾನಗಳು, ಬಳಿಕ ಸುಮಾರು 30 ನಿಮಿಷಗಳ ಕಾಲ ರಾಜಧಾನಿಯ ಬಾನಂಗಳದಲ್ಲಿ ಸುತ್ತಾಡಿ ದಿಲ್ಲಿಯ ಆರೋಗ್ಯ ವೀರರಿಗೆ ಕೃತಜ್ಞತಾ ಗೌರವ ಅರ್ಪಿಸಿದವು.
ಇದರೊಂದಿಗೆ ಪ್ರಮುಖ ಸೇನಾ ವಿಮಾನ ಸಿ-130 ಕೇವಲ 500ರಿಂದ 1000 ಮೀಟರ್ ಎತ್ತರದಲ್ಲಿ ಹಾರಾಟ ನಡೆಸಿತು. ಲಾಕ್‌ಡೌನ್ ವೇಳೆ ಭದ್ರತಾ ಕಾರ್ಯಕ್ಕೆ ನಿಯೋಜನೆ ಗೊಂಡಿರುವ ದೇಶದ ಎಲ್ಲ ಪೊಲೀಸರಿಗೆ ಗೌರವ ಧನ್ಯವಾದ ಅರ್ಪಿಸುವ ಉದ್ದೇಶದಿಂದ ದಿಲ್ಲಿಯ ಪೊಲೀಸ್ ಸ್ಮಾರಕಕ್ಕೆ ಹೂಮಾಲೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. 3ನೇ ಬಾರಿ ನಮನ
ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ ಇಡೀ ಭಾರತವೇ ಮಾ.22ರಂದು ಮನೆಯ ಬಾಲ್ಕನಿ, ಕಿಟಿಕಿಗಳ ಬಳಿ ನಿಂತು ಚಪ್ಪಾಳೆ ತಟ್ಟುವ ಮೂಲಕ ವೈದ್ಯರು, ಆರೋಗ್ಯ ಸಿಬಂದಿಗೆ ಗೌರವ ಸಲ್ಲಿಸಿತ್ತು. ಬಳಿಕ ಎ.5ರಂದು ರಾತ್ರಿ 9 ಗಂಟೆಗೆ ಮನೆಯ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ ಮನೆ ಬಾಗಿಲು, ಟೆರೇಸ್ ಮೇಲೆ ನಿಂತು 9 ನಿಮಿಷಗಳ ಕಾಲ ದೀಪ, ಕ್ಯಾಂಡಲ್ ಬೆಳಗಿದ ಭಾರತ, ಸಂಘಟಿತ ಶಕ್ತಿ ಪ್ರದರ್ಶಿಸುವ ಮೂಲಕ ಆರೋಗ್ಯವೀರರಿಗೆ ತನ್ನ ಧನ್ಯವಾದ ತಿಳಿಸಿತ್ತು. ಪ್ರಸ್ತುತ ಭಾರತದ ಸಶಸ್ತ್ರ ಪಡೆಗಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕೃತಜ್ಞತಾ ಗೌರವ ಸಲ್ಲಿಸಿವೆ.
ಅಮೆರಿಕದ ವಾಯು ಸೇನೆ ಕೂಡ ಕೋವಿಡ್ ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬಂದಿಗೆ ಶನಿವಾರ ಗೌರವ ಸಲ್ಲಿಸಿದೆ. ಬ್ಲೂ ಏಂಜೆಲ್ಸ್ ಮತ್ತು ಥಂಡರ್‌ಬರ್ಡ್ ಯುದ್ಧ ವಿಮಾನಗಳು ವಾಷಿಂಗ್ಟನ್, ಬಾಲ್ಟಿಮೋರ್ ಮತ್ತು ಅಟ್ಲಾಂಟ ನಗರಗಳ ಮೇಲೆ ಹಾರಾಟ ನಡೆಸಿ, ಕೋವಿಡ್ ವಿರುದ್ಧ ಮುನ್ನೆಲೆಯಲ್ಲಿ ನಿಂತು ಹೋರಾಡಿ ಪ್ರಾಣ ತ್ಯಾಗ ಮಾಡಿದವರಿಗೂ ಗೌರವ ಸಮರ್ಪಿಸಿವೆ.