ಇಸ್ಲಾಮಾಬಾದ್: ”370 ನೇ ವಿಧಿಯ ರದ್ದತಿಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ತೀರ್ಪು ಯಾವುದೇ ಕಾನೂನು ಮೌಲ್ಯವನ್ನು ಹೊಂದಿಲ್ಲ” ಎಂದು ಪಾಕಿಸ್ಥಾನ ಸೋಮವಾರ ಪ್ರತಿಕ್ರಿಯೆ ನೀಡಿದೆ.
2019 ರ ಆಗಸ್ಟ್ 5 ರಂದು ಕೇಂದ್ರ ಸರಕಾರ ಕೈಗೊಂಡ ನಿರ್ಧಾರ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮ. ಅಂತಾರಾಷ್ಟ್ರೀಯ ಕಾನೂನು ಇದನ್ನು ಗುರುತಿಸುವುದಿಲ್ಲ ಎಂದು ಪ್ರತಿಪಾದಿಸಿದೆ.
“ಅಂತಾರಾಷ್ಟ್ರೀಯ ಕಾನೂನು ಭಾರತದ ಏಕಪಕ್ಷೀಯ ಮತ್ತು ಕಾನೂನುಬಾಹಿರ ಕ್ರಮಗಳನ್ನು ಗುರುತಿಸುವುದಿಲ್ಲ. ಭಾರತೀಯ ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ಅನುಮೋದನೆಯು ಯಾವುದೇ ಕಾನೂನು ಮೌಲ್ಯವನ್ನು ಹೊಂದಿಲ್ಲ. ಸಂಬಂಧಿತ UN SC ನಿರ್ಣಯಗಳಿಗೆ ಅನುಸಾರವಾಗಿ ಕಾಶ್ಮೀರಿಗಳಿಗೆ ಸ್ವಯಂ ನಿರ್ಣಯದ ಅವಿನಾಭಾವ ಹಕ್ಕನ್ನು ಹೊಂದಿದೆ, ”ಎಂದು ಪಾಕಿಸ್ಥಾನದ ಉಸ್ತುವಾರಿ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ್ ಜಿಲಾನಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಜಿ ಪ್ರಧಾನಿ ಮತ್ತು ಪಾಕಿಸ್ಥಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಟೀಕಿಸಿ ”ಇದು ಪಕ್ಷಪಾತದ ನಿರ್ಧಾರ ಎಂದಿದ್ದಾರೆ.
”ಭಾರತದ ಸುಪ್ರೀಂ ಕೋರ್ಟ್ ವಿಶ್ವಸಂಸ್ಥೆಯ ನಿರ್ಣಯಗಳಿಗೆ ವಿರುದ್ಧವಾಗಿ ನಿರ್ಧಾರವನ್ನು ನೀಡುವ ಮೂಲಕ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸಿದೆ. ಭಾರತದ ಸುಪ್ರೀಂ ಕೋರ್ಟ್ ಲಕ್ಷಾಂತರ ಕಾಶ್ಮೀರಿಗಳ ತ್ಯಾಗಕ್ಕೆ ದ್ರೋಹ ಬಗೆದಿದೆ” ಎಂದು ಎಪ್ರಿಲ್ 2022-ಆಗಸ್ಟ್ 2023 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಷರೀಫ್ ಪ್ರತಿಕ್ರಿಯಿಸಿದ್ದಾರೆ.