ನವದೆಹಲಿ: ಯುದ್ಧ ಟ್ಯಾಂಕ್ ಗಳನ್ನು ಹೊಡೆದುರುಳಿಸಬಲ್ಲ ಮೂರನೇ ತಲೆಮಾರಿನ ಅತ್ಯಾಧುನಿಕ “ನಾಗ್ ಕ್ಷಿಪಣಿಯ” ಅಂತಿಮ ಪರೀಕ್ಷೆ ಯಶಸ್ವಿಯಾಗಿರುವುದಾಗಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ) ತಿಳಿಸಿದೆ. ಗುರುವಾರ ಬೆಳಗ್ಗೆ 6.45ಕ್ಕೆ ರಾಜಸ್ಥಾನದ ಪೋಖ್ರಾನ್ ಮರುಭೂಮಿಯಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು.
ನಾಗ್ ಕ್ಷಿಪಣಿಯನ್ನು ನಾಮಿಕಾ(NAMICA) ವಾಹಕದೊಂದಿಗೆ ಉಡ್ಡಯನಗೊಳಿಸಲಾಗಿತ್ತು. ನಾಗ್ ಕ್ಷಿಪಣಿ ನಿಖರವಾಗಿ ಗುರಿಯನ್ನು ಮುಟ್ಟಿ, ಡಮ್ಮಿ ಯುದ್ಧ ಟ್ಯಾಂಕ್ ಅನ್ನು ಧ್ವಂಸಗೊಳಿಸಿರುವುದಾಗಿ ಮೂಲಗಳು ತಿಳಿಸಿವೆ.
ಯುದ್ಧ ಟ್ಯಾಂಕ್ ಅನ್ನು ಹೊಡೆದುರುಳಿಸಬಲ್ಲ ನಾಗ್ (ATGM) ಕ್ಷಿಪಣಿಯನ್ನು ಶತ್ರುದೇಶದ ಭಾರೀ ಶಸ್ತ್ರಸಜ್ಜಿತ ಅತ್ಯಾಧುನಿಕ ಯುದ್ಧ ಟ್ಯಾಂಕ್ ಗಳನ್ನು ಹೊಡೆದುರುಳಿಸಲು( ರಾತ್ರಿ ಮತ್ತು ಹಗಲು ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ) ಡಿಆರ್ ಡಿಒ(ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ದಿ ಪಡಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ತಂದೆಯನ್ನು ಕೊಂದ 16ವರ್ಷದ ಪುತ್ರಿ, ಪೊಲೀಸರಿಗೆ ಕರೆ ಮಾಡಿ ಶರಣಾದಳು! ಏನಿದು ಘಟನೆ
ಎಲ್ಲಾ ರೀತಿಯ ರಕ್ಷಣಾ ಕವಚ ಹೊಂದಿರುವ ಮುಖ್ಯ ಯುದ್ಧ ಟ್ಯಾಂಕ್ ಗಳನ್ನು ಕೂಡಾ ನಾಗ್ ಕ್ಷಿಪಣಿ ಬೆಂಕಿ ಹೊತ್ತಿಸಿ ಉಡಾಯಿಸಬಲ್ಲ ಸಾಮರ್ಥ್ಯ ಹೊಂದಿದೆ. ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ನಾಗ್ ಕ್ಷಿಪಣಿ ಪೂರ್ವ ಲಡಾಖ್ ನಂತಹ ಪ್ರಮುಖ ಸ್ಥಳಗಳಲ್ಲಿ ಕಾರ್ಯಾಚರಿಸಲು ಸಿದ್ಧವಾಗಿರುವುದಾಗಿ ತಿಳಿಸಿದ್ದಾರೆ.