Advertisement

ಭಾರತದಲ್ಲಿ ಚಿನ್ನದ ಬೇಡಿಕೆ ಶೇ. 70ರಷ್ಟು ಕುಸಿತ

06:20 PM Jul 30, 2020 | Karthik A |

ಮುಂಬಯಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಗುರುವಾರ 10 ಗ್ರಾಂ.ಗೆ 118 ರೂ.ಗಳ ಏರಿಕೆಯಾಗುವ ಮೂಲಕ 53,860 ರೂ.ಗೆ ವಹಿವಾಟು ನಡೆಸಿದೆ.

Advertisement

ಬುಧವಾರದ ವಹಿವಾಟಿನಲ್ಲಿ ಹಳದಿ ಲೋಹವು 10 ಗ್ರಾಂ.ಗೆ 53,742 ರೂ.ನಲ್ಲಿತ್ತು. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 4 ಪೈಸೆ ಕುಸಿತ ಕಂಡಿದ್ದು, 74.84ಕ್ಕೆ ತಲುಪಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನವು ಟನ್‌ಗೆ 1,956 ಡಾಲರ್‌ನಷ್ಟು ಕಡಿಮೆಯಾಗಿದೆ.

ಹಳದಿ ಲೋಹದ ಬೆಲೆಯಲ್ಲಿ ಹಾವು ಏಣಿ ಆಟ ಇದೆ. ಬೆಳ್ಳಿದರವೂ ಏರಿಳಿತ ಕಾಣುತ್ತಿದೆ. ಅಂತಾರಾಷ್ಟ್ರೀಯ ಟ್ರೆಂಡ್‌, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

2020ರಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ 26 ವರ್ಷಗಳ ಬಳಿಕ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ. ದೇಶೀಯ ಬುಲಿಯನ್‌ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಲಿವೆ. ಜನರ ಆದಾಯವು ಚಿನ್ನ ಖರೀದಿಯನ್ನು ಮೊಟಕುಗೊಳಿಸಬಹುದು ಎಂದು ವಿಶ್ವ ಚಿನ್ನದ ಮಂಡಳಿ (ಡಬ್ಲ್ಯುಜಿಸಿ) ಗುರುವಾರ ಹೇಳಿದೆ.

Advertisement

2019ರಲ್ಲಿ ಸ್ಥಳೀಯ ಮಾರುಕಟ್ಟೆಗೆ ಹೋಲಿಸಿದರೆ ಈ ವರ್ಷ ಶೇ. 35ರಷ್ಟು ಏರಿಕೆಯಾಗಿತ್ತು. 2020ರ ಮೊದಲಾರ್ಧದಲ್ಲಿ ದೇಶದಲ್ಲಿ ಚಿನ್ನದ ಬಳಕೆ ಶೇ. 56ರಷ್ಟು ಕುಸಿದು 165.6 ಟನ್‌ಗಳಿಗೆ ತಲುಪಿದೆ. ಅದರ ಜತೆಗೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಜೂನ್‌ ತ್ತೈಮಾಸಿಕದಲ್ಲಿ ಶೇ. 70ರಷ್ಟು ಬೇಡಿಕೆ ಕಡಿತಗೊಂಡು 63.7 ಟನ್‌ಗಳಿಗೆ ಸೀಮಿತಗೊಂಡಿದೆ. ಇದು ದಶಕಗಳಲ್ಲೇ ಮೊದಲು ಎಂದು ಡಬ್ಲ್ಯುಜಿಸಿ ವರದಿಯಲ್ಲಿ ತಿಳಿಸಿದೆ.

ವೈರಸ್‌ ಹರಡುವುದನ್ನು ತಡೆಯಲು ದೇಶದಲ್ಲಿ ಜಾರಿಯಾದ ಲಾಕ್‌ಡೌನ್‌ ಇದಕ್ಕೆ ಕಾರಣವಾಗಿದೆ. ಇದರಿಂದಾಗಿ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರು ಮಾಸಿಕ ವೇತನದಲ್ಲಿ ಕಡಿತ ಕಂಡಿದ್ದಾರೆ. ವಿವಾಹಗಳು ಮತ್ತು ಅಕ್ಷಯ ತೃತೀಯದಂತಹ ಪ್ರಮುಖ ಹಬ್ಬಗಳ ಕಾರಣದಿಂದಾಗಿ ಜೂನ್‌ ತ್ತೈಮಾಸಿಕದಲ್ಲಿ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.

ಈ ಅವಧಿಯಲ್ಲಿ ಚಿನ್ನ ಕೊಂಡುಕೊಳ್ಳಲು ಜನರು ಮುಂದೆ ಬರುತ್ತಾರೆ. ಆದರೆ ಲಾಕ್‌ಡೌನ್‌ ಈ ವರ್ಷ ಅಂಗಡಿಯನ್ನು ತೆರೆಯಲು ಅವಕಾಶ ಮಾಡಿಕೊಡಲಿಲ್ಲ. ಈ ವರ್ಷದ ಮೊದಲಾರ್ಧದಲ್ಲಿ ದುರ್ಬಲ ಬೇಡಿಕೆಯಲ್ಲಿದ್ದ ಚಿನ್ನ ಮಾರುಕಟ್ಟೆಗೆ ಕೊರೊನಾ ಬಲವಾದ ಪೆಟ್ಟು ನೀಡಿದೆ. ಪರಿಣಾಮವಾಗಿ 2020ರಲ್ಲಿ ಭಾರತದ ಚಿನ್ನದ ಬೇಡಿಕೆಯನ್ನು 1994ರಿಂದ ಈಚೆಗೆ ಕನಿಷ್ಠ ಮಟ್ಟಕ್ಕೆ ಇಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next