Advertisement

ಅಂದು ಅಂತಾರಾಷ್ಟ್ರೀಯ ಶೂಟರ್‌, ಇಂದು ಬೀದಿ ವ್ಯಾಪಾರಿ

10:15 PM Jun 24, 2021 | Team Udayavani |

ಡೆಹ್ರಾಡೂನ್‌: ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಬರೋಬ್ಬರಿ 28 ಚಿನ್ನದ ಪದಕ ಗೆದ್ದ ಪ್ಯಾರಾ ಶೂಟರ್‌ ಒಬ್ಬರು ಜೀವನ ನಿರ್ವಹಣೆಗಾಗಿ ಈಗ ರಸ್ತೆ ಬದಿ ಚಿಪ್ಸ್‌ ಮಾರುತ್ತಿದ್ದಾರೆ!

Advertisement

ಹೌದು, ಇದನ್ನು ನಂಬುವುದು ಕೊಂಚ ಕಷ್ಟ. ಆದರೆ ಭಾರತದಲ್ಲಿ ಇಂಥದ್ದೆಲ್ಲ ಸಾಧ್ಯ. ಜಾಗತಿಕ ವೇದಿಕೆಗಳಲ್ಲಿ 28 ಚಿನ್ನದ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿದ್ದ ವನಿತಾ ಪ್ಯಾರಾ ಶೂಟರ್‌ ದಿಲ್ರಾಜ್‌ ಕೌರ್‌ ಉತ್ತರಾಖಂಡದ ಡೆಹ್ರಾಡೂನ್‌ನ ಗಾಂಧಿಪಾರ್ಕ್‌ನ ಪುಟ್ಟ ಸ್ಟಾಲ್‌ ಒಂದರಲ್ಲಿ ತಾಯಿಯೊಂದಿಗೆ ಚಿಪ್ಸ್‌ ಮತ್ತು ಬಿಸ್ಕತ್‌ ಮಾರಾಟ ಮಾಡಿ ಜೀವನ ಸಾಗಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ!

34 ವರ್ಷದ ದಿಲ್ರಾಜ್‌ ಕೌರ್‌ ಭಾರತದ ಮೊದಲ ಅಂತಾರಾಷ್ಟ್ರೀಯ ಮಟ್ಟದ ಪ್ಯಾರಾ ಶೂಟರ್‌ಗಳಲ್ಲಿ ಒಬ್ಬರು. 2004ರಲ್ಲಿ ಶೂಟಿಂಗ್‌ ಕ್ಷೇತ್ರಕ್ಕೆ ಪ್ರವೇಶಿಸಿದ ಕೌರ್‌, 2015ರ ವರೆಗೆ ಅತ್ಯಂತ ಯಶಸ್ವಿಯಾಗಿ ಕ್ರೀಡಾ ವೃತ್ತಿಜೀವನ ಸಾಗಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ 28 ಚಿನ್ನದ ಜತೆಗೆ 8 ಬೆಳ್ಳಿ ಮತ್ತು 3 ಕಂಚಿನ ಪದಕ ಜಯಿಸಿದ್ದಾರೆ.ಆದರೆ ಈ ಪದಕಗಳಿಂದ ದಿಲ್ರಾಜ್‌ ಕೌರ್‌ ಅವರ ಆರ್ಥಿಕ ಸಂಕಷ್ಟ ನೀಗಲಿಲ್ಲ. ಸಾಕಷ್ಟು ಬಾರಿ ಸರಕಾರವನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಸಫ‌ಲವಾಗಲಿಲ್ಲ. ಹೀಗಾಗಿ ದಿಲ್ರಾಜ್‌ ಕೌರ್‌ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ಚಿಪ್ಸ್‌ ಮತ್ತು ಬಿಸ್ಕತ್‌ ವ್ಯಾಪಾರಕ್ಕೆ ಇಳಿಯಬೇಕಾಯಿತು.

ನೆರವಿಗೆ ಬಾರದ ಸರಕಾರ:

“ನಾನು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ದೇಶಕ್ಕಾಗಿ ಅನೇಕ ಪದಕಗಳನ್ನೂ ಗೆದ್ದಿದ್ದೇನೆ. ಆದರೆ ನನಗೆ ಅಗತ್ಯವಿರುವಾಗ ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ಉತ್ತರಾಖಂಡ ಸರಕಾರದಿಂದ ಯಾವುದೇ ನೆರವು ಸಿಗಲಿಲ್ಲ. ನನ್ನ ಯಶಸ್ಸಿನ ಆಧಾರದ ಮೇಲೆ ಕ್ರೀಡಾ ಕೋಟಾದಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಲೇ ಇದ್ದೇನೆ. ಆದರೆ ಪ್ರತೀ ಬಾರಿಯೂ ಈ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ’ ಎಂದು ನೋವಿನಿಂದ ನುಡಿಯುತ್ತಾರೆ ದಿಲ್ರಾಜ್‌ ಕೌರ್‌ .

Advertisement

ಆರ್ಥಿಕ ಸ್ಥಿತಿ ಚಿಂತಾಜನಕ:

“2019ರಲ್ಲಿ ನನ್ನ ತಂದೆ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದ್ದರು. ಮನೆಯ ಆಧಾರಸ್ತಂಭವಾಗಿದ್ದ ನನ್ನ ಸಹೋದರನ್ನೂ ಕಳೆದುಕೊಂಡೆ. ಅವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದೆವು. ಇದರಿಂದ ಸಾಲ ಬೆಳೆಯಿತೇ ಹೊರತು ಬೇರೇನೂ ಸಾಧ್ಯವಾಗಲಿಲ್ಲ. ಸದ್ಯ ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ರಸ್ತೆಬದಿಯಲ್ಲಿ ಚಿಪ್ಸ್‌, ಬಿಸ್ಕತ್‌ ಮಾರಾಟ ಮಾಡಿ ಬಾಡಿಗೆ ಮತ್ತು ಇತರ ವೆಚ್ಚಗಳನ್ನು ನಿಭಾಯಿಸುತ್ತಿದ್ದೇನೆ’ ಎಂದು ಕೌರ್‌ ತಮ್ಮ ಅಸಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next