Advertisement

UAE; ಹೊಸ ನಿಯಮಗಳ ಬಳಿಕ ಹಲವು ಭಾರತೀಯರಿಗೆ ದುಬೈ ವೀಸಾ ನಿರಾಕರಣೆ

05:54 PM Dec 09, 2024 | Team Udayavani |

ದುಬೈ: ಪ್ರವಾಸಿ ವೀಸಾ ಅರ್ಜಿಗಳಿಗೆ ಯುಎಇ(United Arab Emirates) ಕಠಿನ ಅವಶ್ಯಕತೆಗಳನ್ನು ವಿಧಿಸಿ ನಿಯಮಗಳನ್ನು ಜಾರಿ ಮಾಡಿದ ಬಳಿಕ ದುಬೈಗೆ ಭೇಟಿ ನೀಡಲು ಬಯಸುವ ಭಾರತೀಯ ಪ್ರವಾಸಿಗರು ಸಾಮೂಹಿಕ ವೀಸಾ ನಿರಾಕರಣೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

Advertisement

ಗಲ್ಫ್ ರಾಷ್ಟ್ರಕ್ಕೆ ಭೇಟಿ ನೀಡಲು ಬಯಸುವವರಿಗೆ ಯುಎಇ ಇತ್ತೀಚೆಗೆ ಹೊಸ ಮತ್ತು ಕಠಿನ ಅವಶ್ಯಕತೆಗಳನ್ನು ಪರಿಚಯಿಸಿದೆ. ಈ ನಿಯಮಗಳ ಅಡಿಯಲ್ಲಿ, ಪ್ರವಾಸಿಗರು ತಮ್ಮ ಹೋಟೆಲ್ ಬುಕಿಂಗ್ ವಿವರಗಳು ಮತ್ತು ರಿಟರ್ನ್ ಟಿಕೆಟ್‌ಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ. ಮಾತ್ರವಲ್ಲದೆ ತಮ್ಮ ಸಂಬಂಧಿಕರೊಂದಿಗೆ ಉಳಿದುಕೊಂಡಿರುವವರು, ವಾಸ್ತವ್ಯದ ಪುರಾವೆ ಕೂಡ ನೀಡಬೇಕಾದ ಅಗತ್ಯವಿದೆ.

ಹಿಂದಿನ ಶೇಕಡಾ 1-2 ರ ವೀಸಾ ನಿರಾಕರಣೆ ದರಕ್ಕೆ ಹೋಲಿಸಿದರೆ, ಪ್ರವಾಸಿಗರು ಪ್ರತಿದಿನ ಸುಮಾರು 100 ಅರ್ಜಿಗಳ ಪೈಕಿ ಪ್ರತಿ ದಿನ ಕನಿಷ್ಠ 5-6 ಶೇಕಡಾ ನಿರಾಕರಣೆಗಳನ್ನು ಪಡೆಯುತ್ತಿದ್ದಾರೆ.

“ದೃಢೀಕೃತ ವಿಮಾನ ಟಿಕೆಟ್‌ಗಳು ಮತ್ತು ಹೋಟೆಲ್ ವಾಸ್ತವ್ಯದ ವಿವರಗಳನ್ನು ಲಗತ್ತಿಸಿದಾಗಲೂ, ವೀಸಾ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ” ಎಂದು ಪ್ಯಾಸಿಯೋ ಟ್ರಾವೆಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ನಿಖಿಲ್ ಕುಮಾರ್ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.

ಅನೇಕರು ವೀಸಾ ಸಮಸ್ಯೆಯಿಂದಾಗಿ ಪ್ರವಾಸವನ್ನೇ ರದ್ದು ಮಾಡಿರುವ ಬಗ್ಗೆ ವರದಿಯಾಗಿದೆ. ಈಗಾಗಲೇ ಹಣವನ್ನು ವಿನಿಯೋಗ ಮಾಡಿದವರು ನಷ್ಟ ಅನುಭವಿಸಿದ್ದಾರೆ.

Advertisement

ಯಾವುದೇ ನಕಲಿ ಟಿಕೆಟ್‌ಗಳು ಅಥವಾ ಹೋಟೆಲ್ ಬುಕಿಂಗ್‌ಗಳನ್ನು ತಪ್ಪಿಸುವುದು ದುಬೈನ ಮುಖ್ಯ ಗುರಿಯಾಗಿ ನಿಯಮಗಳನ್ನು ಇನ್ನಷ್ಟು ಬಿಗಿ ಮಾಡಲಾಗಿದೆ ಎಂದು ಹೇಳಲಾಗಿದೆ.

ದುಬೈನಲ್ಲಿ ಉಳಿಯಲು ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಅನ್ನು ಸಾಬೀತುಪಡಿಸುವ ಅಗತ್ಯವೂ ಎದುರಾಗಿದೆ.ಹೋಟೆಲ್‌ಗಳಲ್ಲಿ ಉಳಿಯಲು ಕೊನೆಯ ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು, ಕನಿಷ್ಠ 50,000 ರೂ. ಮತ್ತು ಪ್ಯಾನ್ ಕಾರ್ಡ್‌ ಕೂಡ ಒದಗಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next