Advertisement

ಪಬ್ಲಿಕ್ ಟ್ರಾನ್ಸ್ ಪೋರ್ಟ್ ಅಂದ್ರೆ ಭಾರತೀಯರಿಗೆ ಅಲರ್ಜಿ!

09:26 AM May 10, 2019 | Hari Prasad |

ಮೆಲ್ಬೋರ್ನ್: ಭಾರತೀಯರು ಸಾರ್ವಜನಿಕ ಸಾರಿಗೆಯನ್ನು ತಮ್ಮ ಪ್ರಮುಖ ಸಂಚಾರ ಮಾಧ್ಯಮವಾಗಿ ಬಳಸಿಕೊಳ್ಳುತ್ತಿಲ್ಲ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆಯನ್ನೇ ಹೆಚ್ಚೆಚ್ಚು ಅವಲಂಬಿಸಿದ್ದಾರೆಎನ್ನುವ ಮಾತಿಗೆ ಪುಷ್ಠಿ ನೀಡುವ ಅಧ್ಯಯನ ವರದಿಯೊಂದು ಇದೀಗ ಹೊರಬಿದ್ದಿದೆ.

Advertisement

ಭಾರತ ಮಾತ್ರವಲ್ಲದೇ ಚೀನಾ ಸೇರಿದಂತೆ ಏಷ್ಯಾದ ಬಹುತೇಕ ರಾಷ್ಟ್ರಗಳ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತಾಗಿ ನಿರ್ಲಿಪ್ತ ಭಾವನೆ ಹೊಂದಿದ್ದಾರೆ ಎಂಬ ಅಂಶ ಈ ಅಧ್ಯಯನದಿಂದ ಬಹಿರಂಗವಾಗಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತಾಗಿ ಜನರಲ್ಲಿ ಇರಬಹುದಾದ ಈ ಭಾವನೆಯನ್ನು ಹೋಗಲಾಡಿಸಲು ನಗರ ಯೋಜನೆ ರೂಪಕರು ಗಂಭೀರವಾಗಿ ಚಿಂತಿಸಬೇಕಾದ ಅಗತ್ಯತೆಯನ್ನೂ ಸಹ ಈ ಅಧ್ಯಯನವು ಬಲವಾಗಿ ಪ್ರತಿಪಾದಿಸಿದೆ.

‘ಟ್ರಾನ್ಸ್ ಪೋರ್ಟ್ ಜಿಯೋಗ್ರಾಫಿ’ ಎಂಬ ಪತ್ರಿಕೆಯೊಂದರಲ್ಲಿ ಈ ಅಧ್ಯಯನ ವರದಿ ಪ್ರಕಟಗೊಂಡಿದೆ. ಇದರ ಪ್ರಕಾರ ಭಾರತ ಮತ್ತು ಚೀನಾದ ಜನರಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತಾದಂತೆ ಬಲವಾದ ನೆಗೆಟಿವ್ ಭಾವನೆ ಬೇರುಬಿಟ್ಟಿದೆ.

ಇಂಗ್ಲಂಡ್ ಮತ್ತು ಉತ್ತರ ಯುರೋಪಿಯನ್ ದೇಶಗಳಲ್ಲಿ ಶ್ರೀಮಂತ ವರ್ಗದ ಬಹುಸಂಖ್ಯೆಯ ಜನರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ತಮ್ಮ ಪ್ರಯಾಣ ಮೂಲವನ್ನಾಗಿ ಮಾಡಿಕೊಂಡಿರುತ್ತಾರೆ. ತಮ್ಮದೇ ಆದ ಸ್ವಂತ ವಾಹನಗಳನ್ನು ಬಳಸುವ ಸಾಮರ್ಥ್ಯ ಮತ್ತು ಸಾಧ್ಯತೆ ಅವರಿಗಿದ್ದರೂ ಸಹ ಆ ದೇಶಗಳ ಜನರಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತಾಗಿ ಉತ್ತಮ ಅಭಿಪ್ರಾಯವಿದೆ ಎಂಬುದು ಈ ಅಧ್ಯಯನ ವರದಿಯಲ್ಲಿ ಉಲ್ಲೇಖಗೊಂಡಿದೆ.

Advertisement

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಭಾರತ ಮತ್ತು ಚೀನಾದಲ್ಲಿ ಇನ್ನೂ ಸ್ವಂತ ವಾಹನದ ಮಾಲಿಕರಲ್ಲದ ವೃತ್ತಿಪರರು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಸಂಬಂ‍ಧಿಸಿದಂತೆ ಬಹಳ ನೆಗೆಟಿವ್ ಅಭಿಪ್ರಾಯವನ್ನೇ ಹೊಂದಿದ್ದಾರೆ.

ಇಷ್ಟು ಮಾತ್ರವಲ್ಲದೇ ಸಾರ್ವಜನಿಕ ಸಾರಿಗೆ ಬಸ್ಸುಗಳಲ್ಲಿ ಸಂಚರಿಸುವುದರಿಂದ ವ್ಯವಹಾರ ಸಂಬಂಧಗಳಿಗೆ ಧಕ್ಕೆಯಾಗುವ ಮಾತ್ರವಲ್ಲದೇ ಮದುವೆ ಸಂಬಂಧಗಳಿಗೂ ಸಮಸ್ಯೆಯಾಗಬಹುದೆನ್ನುವ ಅಭಿಪ್ರಾಯ ಬಹುತೇಕ ಭಾರತೀಯರಲ್ಲಿ ಮತ್ತು ಚೀನೀಯರಲ್ಲಿ ಇದೆಯೆಂಬ ಅಂಶವನ್ನೂ ಈ ಅಧ್ಯಯನವು ಕಂಡುಕೊಂಡಿದೆ.

ಬೀಜಿಂಗ್ ಮತ್ತು ಚೆನ್ನೈಗಳಂತಹ ಮಹಾನಗರಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಜನಸ್ನೇಹಿಗೊಳಿಸುವ ಅಗತ್ಯತೆಯನ್ನೂ ಸಹ ಈ ಅಧ್ಯಯನ ವರದಿಯು ಪ್ರತಿಪಾದಿಸಿದೆ. ಇದರಿಂದ ಮಹಾನಗರಗಳನ್ನು ಪ್ರಮುಖವಾಗಿ ಕಾಡುತ್ತಿರುವ ವಾಯು ಮಾಲಿನ್ಯ ಸಮಸ್ಯೆಗೂ ಪರಿಹಾರ ಕಂಡುಕೊಂಡಂತಾಗುವುದು ಎನ್ನುವುದು ಈ ವರದಿಯ ಆಶಯವಾಗಿದೆ.

ಜಗತ್ತಿನಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತಾಗಿ ಒಂದು ಧನಾತ್ಮಕ ಭಾವನೆಯನ್ನು ಬೆಳೆಸುವಂತೆ ಮಾಡುವುದರಿಂದ ಉತ್ತಮ ಭವಿಷ್ಯಕ್ಕೆ ಸಹಕಾರ ನೀಡಿದಂತೆ ಎನ್ನುವ ಆಶಾವಾದವನ್ನು ಈ ಅಧ್ಯಯನವು ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next