Advertisement

ಒಲಿಂಪಿಕ್ಸ್‌ನಲ್ಲಿ ಭಾರತೀಯರ ಗಣನೀಯ ಸಾಧನೆ

10:02 PM Aug 08, 2021 | Team Udayavani |

ಒಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತ ಹಿಂದೆಂದೂ ಕಂಡರಿಯದ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ದೇಶಕ್ಕೆ ಏಳು ಪದಕಗಳು ಲಭಿಸಿದ್ದು, ಮುಂದಿನ ದಿನಗಳಲ್ಲಿ ದೇಶ ಇನ್ನಷ್ಟು ಪದಕಗಳನ್ನು ತರಬಹುದು ಎಂಬ ನಿರೀಕ್ಷೆ ದೊಡ್ಡ ಮಟ್ಟದಲ್ಲಿ ಮೂಡಿದೆ. ಒಲಿಂಪಿಕ್ಸ್‌ ಕೂಟದ ಆರಂಭದ ದಿನವೇ ಮೀರಾಬಾಯಿ ಚಾನು ಅವರು ವೇಟ್‌ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಬೆಳ್ಳಿ ತಂದು ಕೊಟ್ಟಿದ್ದರು. ಈ ಮೂಲಕ ಭಾರತ ಶುಭಾರಂಭವನ್ನೇ ಮಾಡಿತ್ತು. ಜತೆಗೆ, ನಂತರದ ದಿನಗಳಲ್ಲೂ ಭಾರತೀಯ ಕ್ರೀಡಾಳುಗಳು ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದರು.

Advertisement

ಈ ಬಾರಿ ಶೂಟಿಂಗ್‌ನಲ್ಲಿ ಪದಕ ತಂದೇ ತರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಮನು ಭಾಕರ್‌, ತಾಂತ್ರಿಕ ಸಮಸ್ಯೆಯಿಂದ ಪದಕ ವಂಚಿತರಾದರು. ಈ ನಿರಾಸೆಯ ಬೆನ್ನಲ್ಲೇ ಬಿಲ್ಲುಗಾರಿಕೆ ಸ್ಪರ್ಧಾಳುಗಳೂ ಪದಕ ಗೆಲ್ಲುವಲ್ಲಿ ವಿಫ‌ಲರಾದರು. ಆದರೂ, ಬಾಕ್ಸಿಂಗ್‌, ಕುಸ್ತಿ, ಬ್ಯಾಡ್ಮಿಂಟನ್‌ನಲ್ಲಿ ಎಂದಿನಂತೆಯೇ ಉತ್ತಮ ಪ್ರದರ್ಶನ ತೋರುವಲ್ಲಿ ಭಾರತೀಯರು ಯಶಸ್ವಿಯಾದರು.

ಇನ್ನೇನು ಕೂಟ ಮುಗಿಯಲು ಒಂದು ದಿನ ಬಾಕಿ ಇದೆ ಎನ್ನುವಾಗ, ಜಾವೆಲಿನ್‌ ಥ್ರೋ ಸ್ಪರ್ಧಿ ನೀರಜ್‌ ಚೋಪ್ರಾ ಭಾರತಕ್ಕೆ ಬಂಗಾರ ತಂದುಕೊಟ್ಟರು. ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಇದು ಭಾರತಕ್ಕೆ ಶತಮಾನದ ಪದಕವಾಯಿತು. ಸ್ವಾತಂತ್ರಾéನಂತರದಲ್ಲಿ ಇದೇ ಮೊದಲ ಬಾರಿಗೆ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಪದಕವೊಂದು ಬಂತು ಎನ್ನುವುದೂ ಸಂತಸದ ವಿಚಾರವೇ.

ನೀರಜ್‌ ಚೋಪ್ರಾ ಅವರ ಈ ಬಂಗಾರದ ಸಾಧನೆ ಅಂತಿಂಥದ್ದಲ್ಲ. ಇದೊಂದು ರೀತಿ ಸ್ವರ್ಣಯುಗಕ್ಕೆ ಭಾರತ ದಾಪುಗಾಲಿಟ್ಟ ಕ್ಷಣ ಎಂದೂ ಕರೆಯಬಹುದು. ಕುಸ್ತಿ, ವೇಟ್‌ಲಿಫ್ಟಿಂಗ್‌ನಲ್ಲಿ ಗೆದ್ದು ಪದಕ ತರುವಂಥ ಭಾರತೀಯರು ಆ್ಯತ್ಲೆಟಿಕ್ಸ್‌ನಲ್ಲಿ ಏಕೆ ಪದಕ ಗೆಲ್ಲಲಾಗುತ್ತಿಲ್ಲ ಎಂಬ ವರ್ಷಗಳ ಪ್ರಶ್ನೆಗೆ ನೀರಜ್‌ ಉತ್ತರ ಕೊಟ್ಟರು. ನೀರಜ್‌ ಇವರ ಈ ಸಾಧನೆ ಭವಿಷ್ಯದಲ್ಲಿ ಮತ್ತಷ್ಟು ಕ್ರೀಡಾಳುಗಳನ್ನು ಸೃಷ್ಟಿಸಲು ಉತ್ತೇಜನ ಸಿಕ್ಕಂತಾಗಿದೆ ಎಂಬುದೂ ಸುಳ್ಳಲ್ಲ.

ಹಾಕಿಯಲ್ಲಂತೂ ಭಾರತ ಈ ಬಾರಿ ಶ್ರೇಷ್ಠ ಪ್ರದರ್ಶನ ನೀಡಿದೆ. ಪುರುಷರು ಕಂಚು ಗೆದ್ದರಾದರೂ, ಮಹಿಳೆಯರು ಕಂಚಿನ ಪಂದ್ಯದಲ್ಲಿ ಸೋತರೂ, ಇಡೀ ಭಾರತೀಯರ ಹೃದಯ ಗೆದ್ದರು. ಪುರುಷರ ಹಾಕಿ ತಂಡ ಕಂಚು ಗೆದ್ದಿದ್ದೂ ನಾಲ್ಕು ದಶಕಗಳ ಸಾಧನೆ. ಹಾಗೆಯೇ ಮೂರನೇ ಬಾರಿಗೆ ಒಲಿಂಪಿಕ್ಸ್‌ ಪ್ರವೇಶ ಮಾಡಿದ್ದ ಮಹಿಳಾ ತಂಡವೂ ಸೆಮಿಫೈನಲ್‌ಗೆ ಹೋಗಿ ಸ್ಪರ್ಧಾತ್ಮಕವಾಗಿಯೇ ಹೋರಾಟ ಮಾಡಿತು. ಅಲ್ಲದೆ, ಬ್ರಿಟನ್‌ ವಿರುದ್ಧ ಕಂಚಿನ ಪಂದ್ಯಕ್ಕಾಗಿ ನಡೆದ ಪಂದ್ಯದಲ್ಲಿ ವೀರೋಚಿತವಾಗಿ ಆಟವಾಡಿ ಸೋತಿತು. ಇನ್ನು ಕುಸ್ತಿ, ಬ್ಯಾಡ್ಮಿಂಟನ್‌, ವೇಟ್‌ ಲಿಫ್ಟಿಂಗ್‌ ವಿಭಾಗದಲ್ಲಿ ನಿರೀಕ್ಷೆಯಂತೆಯೇ ಭಾರತ ಸಾಧನೆ ಮಾಡಿದೆ. ಅಂದ ಹಾಗೆ, ಈ ಬಾರಿ ಹಿಂದೆಂದಿಗಿಂತ ಅತೀ ಹೆಚ್ಚು, ಅಂದರೆ ಏಳು ಪದಕಗಳನ್ನು ಗೆದ್ದಿದೆ. ಆದರೆ, 136 ಕೋಟಿ ಜನಸಂಖ್ಯೆ ಇರುವ ಭಾರತಕ್ಕೆ ಇಷ್ಟು ಪದಕ ಸಾಕೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.

Advertisement

ಹಾಗಾದರೆ, ಮುಂದಿನ ದಿನಗಳಲ್ಲಿ ಭಾರತ ಹೆಚ್ಚು ಪದಕ ಗೆಲ್ಲಲು ಏನು ಮಾಡಬೇಕು ಎಂಬ ಬಗ್ಗೆ ಈಗಿನಿಂದಲೇ ಸರಕಾರಗಳು ಯೋಚನೆ ಮಾಡಬೇಕು. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟಗಳಲ್ಲೂ ಕ್ರೀಡಾ ಮೂಲಸೌಕರ್ಯಗಳನ್ನು ಏರ್ಪಡಿಸಿ, ಉತ್ತಮ ವೇದಿಕೆ ಕಲ್ಪಿಸಬೇಕು. ಆಗ ಮಾತ್ರ ಇನ್ನಷ್ಟು ಪ್ರತಿಭೆಗಳು ಹೊರಬಂದು ಅಂತಾರಾಷ್ಟ್ರೀಯ ಕೂಟಗಳಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next