ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬೃಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ದೇಶದ ಹೆಸರಾಂತ ಮಹಿಳಾ ಕುಸ್ತಿಪಟುಗಳು ಗಂಭೀರ ಆರೋಪ ಮಾಡಿ, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಕಳೆದೆರಡು ದಿನಗಳಿಂದ ನವ ದೆಹಲಿಯ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರಕರಣ ದೇಶದ ಕ್ರೀಡಾರಂಗಕ್ಕೆ ಒಂದು ಕಳಂಕವಾಗಿ ಪರಿಣಮಿಸಿದ್ದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ.
ಆರು ಬಾರಿ ಸಂಸದರಾಗಿರುವ ಬಿಜೆಪಿಯ ಬೃಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರು ವುದಲ್ಲದೆ ಒಕ್ಕೂಟದಲ್ಲಿನ ಕೆಲವೊಂದು ಪುರುಷ ತರಬೇತುದಾರರಿಂದಲೂ ಮಹಿಳಾ ತರಬೇತುದಾರರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಸ್ವತಃ ಬೃಜ್ ಭೂಷಣ್ ಅವರೇ ಈ ಎಲ್ಲ ದುಷ್ಕೃತ್ಯಗಳಿಗೆ ನೇರ ಹೊಣೆ ಗಾರರಾಗಿದ್ದು ಮಹಿಳಾ ಕುಸ್ತಿ ಪಟುಗಳು ಇನ್ನಿಲ್ಲದ ಹಿಂಸೆ ಅನುಭವಿಸು ತ್ತಿದ್ದಾರೆ. ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನ ಬಳಿಕ ಕುಸ್ತಿ ಪಟುಗಳಿಗೆ ತೀವ್ರ ತೆರನಾದ ಮಾನಸಿಕ ಕಿರುಕುಳ ನೀಡಲಾಗಿತ್ತು ಎಂದೂ ಕುಸ್ತಿಪಟು ಗಳು ಆರೋಪಿಸಿದ್ದಾರೆ. ಮಹಿಳಾ ಕುಸ್ತಿಪಟುಗಳು ಇದೀಗ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಬಹಿರಂಗವಾಗಿ ನಡೆಸುತ್ತಿರುವ ಪ್ರತಿ ಭಟನೆಗೆ ಖ್ಯಾತ ಕುಸ್ತಿಪಟುಗಳು ಬೆಂಬಲ ಘೋಷಿಸಿದ್ದು, ಹಲವರು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶದ ಕುಸ್ತಿಪಟುಗಳು ನಿರೀಕ್ಷಿತ ಸಾಧನೆಗೈಯ್ಯುವಲ್ಲಿ ವಿಫಲರಾಗಿದ್ದರು. ಈ ಕೂಟದಲ್ಲಿ ಕುಸ್ತಿಯಲ್ಲಿ ಎರಡು ಪದಕಗಳಷ್ಟೇ ದೇಶಕ್ಕೆ ಲಭಿಸಿತ್ತು. ಇದು ಕುಸ್ತಿ ಒಕ್ಕೂಟದ ಕೆಂಗಣ್ಣಿಗೆ ಗುರಿಯಾಗಿತ್ತು. ಇದೇ ಸಂದರ್ಭದಲ್ಲಿ ವಿನೇಶ್ ಪೋಗಟ್ ಅವರನ್ನು ಅಶಿಸ್ತಿನ ಕಾರಣಕ್ಕಾಗಿ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಆ ಬಳಿಕ ಭಾರತೀಯ ಕುಸ್ತಿ ಒಕ್ಕೂಟ ಮತ್ತು ಕುಸ್ತಿಪಟುಗಳ ನಡುವೆ ಒಂದಿಷ್ಟು ಅಸಮಾಧಾನ ಹೊಗೆಯಾಡುತ್ತಲೇ ಇತ್ತು. ಇದರ ಹೊರತಾಗಿಯೂ 2022ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 6 ಚಿನ್ನ ಸಹಿತ ಒಟ್ಟು 12 ಪದಕಗಳನ್ನು ಕುಸ್ತಿಪಟುಗಳು ಜಯಿಸಿದ್ದರು. ಕುಸ್ತಿಯಲ್ಲಿ ಭಾರತೀಯ ಕ್ರೀಡಾಳುಗಳು ಉಚ್ಛಾ†ಯ ಪ್ರದರ್ಶನ ನೀಡುತ್ತಿರುವಾಗಲೇ ಅವರಿಂದ ಇಂತಹ ಗಂಭೀರ ಆರೋಪ ಕೇಳಿಬಂದಿರುವುದು ಕ್ರೀಡಾಭಿಮಾನಿಗಳಲ್ಲಿ ಆತಂಕ ಮೂಡಿಸಿ ದ್ದರೆ ಭಾರತೀಯ ಕ್ರೀಡಾರಂಗವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ.
ಬೃಜ್ ಭೂಷಣ್ ವಿರುದ್ಧ ಮಾಡಲಾಗಿರುವ ಆರೋಪ ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ದೇಶದ ಬಹುತೇಕ ಖ್ಯಾತ ಕುಸ್ತಿಪಟುಗಳು ಮಹಿಳಾ ಕ್ರೀಡಾಳುಗಳ ಬೆಂಬಲಕ್ಕೆ ನಿಂತಿರುವುದು ಮತ್ತು ಪ್ರತಿಭಟನೆಗೆ ಸಾಥ್ ನೀಡಿರುವುದರಿಂದ ಮೇಲ್ನೋಟದಲ್ಲಿ ಆರೋ ಪದಲ್ಲಿ ಒಂದಿಷ್ಟು ಹುರುಳಿದ್ದಂತೆ ಕಂಡುಬರುತ್ತಿದೆ. ಸರಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿ ಗೆಳೆಯಬೇಕಿದೆ. ಆರೋಪಕ್ಕೆ ಗುರಿಯಾಗಿರುವ ಬೃಜ್ ಭೂಷಣ್ ಅವರು ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ ಒಕ್ಕೂಟದ ಜವಾಬ್ದಾರಿಯಿಂದ ಹೊರಗುಳಿಯಲೇಬೇಕಿದೆ. ಅಧ್ಯಕ್ಷ ಹುದ್ದೆಗೆ ರಾಜೀನಾಮೆ, ಕಾಟಾಚಾರದ ತನಿಖೆಯ ಬದಲಾಗಿ ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸುವ ಮೂಲಕ ಕ್ರೀಡಾಳುಗಳಲ್ಲಿ ನೈತಿಕ ಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಸರಕಾರ ಮಾಡಬೇಕು. ಈ ನಿಟ್ಟಿನಲ್ಲಿ ಕ್ರೀಡಾಳುಗಳು ಕೂಡ ತನಿಖಾ ಸಂಸ್ಥೆಗಳಿಗೆ ಸಹಕಾರ ನೀಡಬೇಕು.