ಕ್ಯಾಲಿಫೋರ್ನಿಯಾ: ಮಾಜಿ ನಂಬರ್ ವನ್ ಆಟಗಾರ್ತಿ ಮರಿಯಾ ಶರಪೋವಾ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ಬಿಎನ್‌ಪಿ ಪರಿಬಾಸ್ ಓಪನ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ. ಅವರನ್ನು ಜಪಾನಿನ ನವೋಮಿ ಒಸಾಕಾ 6-4, 6-4 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು.
41ನೇ ರ್‍ಯಾಂಕಿಂಗ್‌ನ ಶರಪೋವಾ 20ರ ಹರೆಯದ ಎದುರಾಳಿ ಒಸಾಕಾಗೆ ಆರಂಭದಲ್ಲಿ ಸವಾಲೊಡ್ಡಿದರೂ ಬಳಿಕ ಹಿಡಿತ ಕಳೆದುಕೊಳ್ಳುತ್ತ ಹೋದರು.
“ಚಿಕ್ಕಂದಿನಿಂದಲೂ ನಾನು ಶರಪೋವಾ ಅವರನ್ನು ಗಮನಿಸುತ್ತಲೇ ಬಂದಿದ್ದೇನೆ. ಪ್ರತಿಯೊಂದಕ್ಕೂ ಹೋರಾಟ ನಡೆಸುವುದು ಅವರ ಸ್ವಭಾವ. ಶರಪೋವಾ ವಿರುದ್ಧ ಆಡುವುದೇ ನನ್ನ ಪಾಲಿನ ಮಹಾನ್ ಗೌರವ. ಈಗ ಪಂದ್ಯವನ್ನೇ ಗೆದ್ದಿದ್ದೇನೆ. ಈ ಕ್ಷಣವನ್ನು ಬಣ್ಣಿಸಲಾಗದು…’ ಎಂದು 44ನೇ ರ್‍ಯಾಂಕಿಂಗ್‌ನ ಒಸಾಕಾ ಪ್ರತಿಕ್ರಿಯಿಸಿದ್ದಾರೆ. ಶರಪೋವಾ ಇಲ್ಲಿ 2 ಸಲ ಚಾಂಪಿಯನ್ ಆಗಿ ಮೂಡಿಬಂದ ಆಟಗಾರ್ತಿ ಎಂಬುದನ್ನು ಮರೆಯುವಂತಿಲ್ಲ.
ಕೂಟದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ 16ರ ಹರೆಯದ ಆಟಗಾರ್ತಿ ಅಮಂಡಾ ಅನಿಸಿಮೋವಾ 6-2, 6-2ರಿಂದ ತನ್ನ ಎರಡರಷ್ಟು ಹರೆಯದ ಫ್ರಾನ್ಸ್ ಆಟಗಾರ್ತಿ ಪೌಲಿನ್ ಪರ್ಮೆಂಟಿಯರ್ ಅವರನ್ನು ಪರಾಭವಗೊಳಿಸಿದರು. ಇದು ಅನಿಸಿಮೋವಾ ಅವರ ಮೊದಲ ಅಗ್ರ ಮಟ್ಟದ ಗೆಲುವು. ಜೂನಿಯರ್ ಯುಎಸ್ ಓಪನ್ ಚಾಂಪಿಯನ್ ಖ್ಯಾತಿಯ ಅನಿಸಿಮೋವಾ 2ನೇ ಸುತ್ತಿನಲ್ಲಿ ರಶ್ಯದ 23ನೇ ಶ್ರೇಯಾಂಕಿತೆ ಅನಸ್ತಾಸಿಯಾ ಪಾವುÉಚೆಂಕೋವಾ ವಿರುದ್ಧ ಸೆಣಸಲಿದ್ದಾರೆ.
ಶರಪೋವಾ ಅವರಂತೆ ಕೆನಡಾದ ಯುಗೆನಿ ಬೌಶಾರ್ಡ್ ಕೂಡ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.ಅವರನ್ನು ಅಮೆರಿಕದ ಅರ್ಹತಾ ಆಟಗಾರ್ತಿ ಸಾಶಿಯಾ ವಿಕೆರಿ 6-3, 6-4ರಿಂದ ಪರಾಭವಗೊಳಿಸಿದರು. ಸ್ವಿಟ್ಸರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್ 3 ಸೆಟ್‌ಗಳ ಹೋರಾಟದ ಬಳಿಕ ಹಂಗೇರಿಯ ಟಿಮಿಯಾ ಬಬೋಸ್ ಅವರನ್ನು 1-6, 6-1, 7-6 (4) ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ಸೆರೆನಾ ವಿಲಿಯಮ್ಸ್ ಕಣಕ್ಕೆ
ಟೆನಿಸ್ ಅಭಿಮಾನಿಗಳ ಕುತೂಹಲವೀಗ ಸೆರೆನಾ ವಿಲಿಯಮ್ಸ್ ಅವರತ್ತ ನೆಟ್ಟಿದೆ. 2 ಬಾರಿಯ ಚಾಂಪಿಯನ್ ಸೆರೆನಾ, ಕಜಕೀಸ್ಥಾನದ ಜರಿನಾ ದಿಯಾಸ್ ವಿರುದ್ಧ ಮೊದಲ ಸುತ್ತಿನ ಪಂದ್ಯವಾಡಲಿದ್ದು, ಭಾರತೀಯ ಕಾಲಮಾನ ಪ್ರಕಾರ ಈ ಪಂದ್ಯ ಶುಕ್ರವಾರ ಬೆಳಗ್ಗೆ 8.30ಕ್ಕೆ ಆರಂಭವಾಗಲಿದೆ.