Advertisement
ಮುಂದಿನ ಕೆಲವೇ ವಾರಗಳಲ್ಲಿ… :
Related Articles
Advertisement
ಸಂಕಷ್ಟ ಹೆಚ್ಚಾದಾಗ ಸ್ನೇಹ ಹಸ್ತ ಚಾಚಿತ್ತು ಭಾರತ :
ಕೋವಿಡ್-19 ಹಾವಳಿ ಆರಂಭವಾದಾಗ, ಐರೋಪ್ಯ ರಾಷ್ಟ್ರಗಳೆಲ್ಲ ಇಟಲಿಯ ಕೈಬಿಟ್ಟು, ಆ ದೇಶವನ್ನು ಕಂಗೆಡುವಂತೆ ಮಾಡಿದ್ದವು. ಆದರೆ, ಇತ್ತ ಭಾರತ ಮಾತ್ರ ಬಿಕ್ಕಟ್ಟಿನ ನಡುವೆಯೂ ಅಫ್ಘಾನಿಸ್ಥಾನ, ಬಾಂಗ್ಲಾದೇಶ, ಭೂತಾನ್, ನೇಪಾಲ, ಮಾಲ್ಡೀವ್ಸ್, ಶ್ರೀಲಂಕಾ, ಸೀಚೆಲ್ಸ್‌ನಂಥ ಪುಟ್ಟರಾಷ್ಟ್ರಗಳಿಗೆ ಹೈಡ್ರಾಕ್ಸಿ ಕ್ಲೊರೊಕ್ವಿನ್ ಮಾತ್ರೆಗಳಿಂದ ಹಿಡಿದು, ಕೈಗವಸು, ಬಾಡಿ ಬ್ಯಾಗ್‌ಗಳು, ಸಿರಿಂಜ್‌ಗಳು, ಡೀಫಿಬ್ರಿಲೇಟರ್‌ಗಳನ್ನು ಕಳುಹಿಸಿ ಜವಾಬ್ದಾರಿ ಮೆರೆಯಿತು. ಇದಷ್ಟೇ ಅಲ್ಲದೇ ಭಾರತ, ಮಾಲ್ಡೀವ್ಸ್, ಶ್ರೀಲಂಕಾಕ್ಕೆ ಕ್ಷಿಪ್ರ ಪ್ರತಿಕ್ರಿಯೆ ತಂಡ (ಆರ್‌ಆರ್‌ಟಿಯ)ದ ವೈದ್ಯರು, ನರ್ಸ್‌ಗಳು ಮತ್ತು ಪ್ಯಾರಾಮೆಡಿಕ್ಸ್‌ಗಳನ್ನು ಕಳುಹಿಸಿಕೊಟ್ಟು ಆ ರಾಷ್ಟ್ರಕ್ಕೆ ಟೆಸ್ಟಿಂಗ್ ಪ್ರಯೋಗಾಲಯ ಸ್ಥಾಪಿಸಲು, ವೈದ್ಯರಿಗೆ ತರಬೇತಿ ನೀಡಲು ಸಹಕರಿಸಿತು. ಇನ್ನು ಬ್ರೆಜಿಲ್, ಬ್ರಿಟನ್ ಹಾಗೂ ಅಮೆರಿಕಕ್ಕೂ ಹೈಡ್ರಾಕ್ಸಿ ಕ್ಲೊರೊಕ್ವಿನ್ ಮಾತ್ರೆಗಳನ್ನು ಕಳುಹಿಸಿಕೊಟ್ಟಿತು. ಈ ಎಲ್ಲ ಅಂಶಗಳೂ ಭಾರತದೆಡೆಗೆ ಅನ್ಯ ರಾಷ್ಟ್ರಗಳ ಮೈತ್ರಿ ಮತ್ತಷ್ಟು ಬಲಿಷ್ಠವಾಗುವುದಕ್ಕೆ ಖಂಡಿತ ಕಾರಣವಾಗಲಿದೆ ಎನ್ನುತ್ತಾರೆ ಪರಿಣತರು.
ಚೀನ ಲಸಿಕೆಯ ರಾಜತಾಂತ್ರಿಕತೆ :
ಚೀನ ಈಗಾಗಲೇ ಮಲೇಷ್ಯಾ, ಫಿಲಿಪ್ಪೀನ್ಸ್, ಟರ್ಕಿ, ಬ್ರೆಜಿಲ್, ಮೆಕ್ಸಿಕೋಗೆ ಲಕ್ಷಾಂತರ ಡೋಸ್‌ಗಳನ್ನು ನೀಡುವ ಭರವಸೆ ನೀಡಿದೆಯಾದರೂ, ಈಗ ಅದರ ಲಸಿಕೆಯ ಮೇಲೆ ಅನುಮಾನಗಳು ಹೆಚ್ಚಾಗಲಾರಂಭಿಸಿದ್ದೇ, ಈ ರಾಷ್ಟ್ರಗಳೆಲ್ಲ ಭಾರತದತ್ತ ನೋಡಲಾರಂಭಿಸಿವೆ. ಒಂದೆಡೆ ಭಾರತದ ಲಸಿಕೆಗಳಿಗೆ ಅನ್ಯ ರಾಷ್ಟ್ರಗಳು ತಾವಾಗಿಯೇ ಬೇಡಿಕೆ ಇಡುತ್ತಿದ್ದರೆ, ಇನ್ನೊಂದೆಡೆ ಚೀನ ಮಾತ್ರ ತನ್ನ ರಾಯಭಾರಿಗಳನ್ನು ಅನ್ಯ ರಾಷ್ಟ್ರಗಳಿಗೆ ಕಳುಹಿಸಿ, ಲಸಿಕೆ ಖರೀದಿಸಬೇಕೆಂದು ಮನವೊಲಿಸುತ್ತಿದೆ! ಇತ್ತೀಚೆಗಷ್ಟೇ ಚೀನದ ವಿದೇಶಾಂಗ ಸಚಿವ ವ್ಯಾಂಗ್ ಯೀ, ಮ್ಯಾನ್ಮಾರ್, ಇಂಡೋನೇಷ್ಯಾ ಮತ್ತು ಬ್ರೂನೈಗೆ ತೆರಳಿ ತಮ್ಮ ಲಸಿಕೆ ಖರೀದಿಸಬೇಕೆಂದು ಮಾತುಕತೆ ನಡೆಸಿ ಬಂದಿದ್ದಾರೆ. ಚೀನದ ಅತ್ಯಾಪ್ತ ರಾಷ್ಟ್ರವಾದ ಕಾಂಬೋಡಿಯಾ ಕೂಡ ಚೀನಿ ಲಸಿಕೆಯಿಂದ ದೂರ ಉಳಿಯಲು ಯೋಚಿಸುತ್ತಿದೆ!
ಚೀನಿ ಲಸಿಕೆ ಕೇವಲ 50 ಪ್ರತಿಶತ ಪರಿಣಾಮಕಾರಿ? :
ಕ್ಲಿನಿಕಲ್ ಟ್ರಯಲ್‌ಗಳ ವಿಚಾರದಲ್ಲಿ ಚೀನ ಕಾಯ್ದುಕೊಂಡು ಬಂದ ರಹಸ್ಯದಿಂದಾಗಿ ಅದನ್ನು ಅನುಮಾನದಿಂದಲೇ ನೋಡುವಂತಾಗಿದೆ. ಚೀನ ತನ್ನ ಲಸಿಕೆ 90 ಪ್ರತಿಶತಕ್ಕೂ ಹೆಚ್ಚು ಪರಿಣಾಮಕಾರಿ ಎನ್ನುತ್ತದಾದರೂ ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ ಅಧ್ಯಯನವೊಂದು ಚೀನದ ಸೈನೋವ್ಯಾಕ್ ಲಸಿಕೆ ಕೇವಲ 50.4 ಪ್ರತಿಶತ ಪರಿಣಾಮಕಾರಿ ಎಂದಿದೆ! ಅದಷ್ಟೇ ಅಲ್ಲದೇ, ಬ್ರಿಟನ್, ಇಂಡೋನೇಷ್ಯಾದಲ್ಲಿ ಪ್ರಕಟವಾದ ಇತ್ತೀಚಿನ ವರದಿಗಳೂ ಚೀನದ ಲಸಿಕೆಯ ಮೇಲೆ ಅಪನಂಬಿಕೆ ವ್ಯಕ್ತಪಡಿಸುತ್ತಿದ್ದರೆ, ಪಾಕಿಸ್ಥಾನ ಮಾತ್ರ ಚೀನದ ಸಿನೋ
ಫಾರ್ಮ್ ಲಸಿಕೆಯ 12 ಲಕ್ಷ ಡೋಸ್‌ಗಳಿಗೆ ಆರ್ಡರ್ ಮಾಡಿದೆ. ಇನ್ನು ಚೀನದ ವಿವಿಧ ಸಂಸ್ಥೆಗಳು ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ಮೂರನೇ ಹಂತದ ಪ್ರಯೋಗವನ್ನೂ ತನ್ನ ಪ್ರಜೆಗಳ ಮೇಲೆ ನಡೆಸುತ್ತಿದೆ ಪಾಕಿಸ್ಥಾನ!
ಕಳಪೆ ಕಿಟ್ ನೀಡಿ ಮುಖ ಕೆಡಿಸಿಕೊಂಡ ಚೀನ :
ಒಂದೆಡೆ ಪಾಶ್ಚಿಮಾತ್ಯ ರಾಷ್ಟ್ರಗಳ ದುಬಾರಿ ಲಸಿಕೆಯನ್ನು ಎಲ್ಲಾ ರಾಷ್ಟ್ರಗಳಿಗೂ ಖರೀದಿಸುವುದು ಕಷ್ಟದ ಕೆಲಸವಾಗಲಿದೆ. ಅದರಲ್ಲೂ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಇದು ಕನಸಿನ ಮಾತೇ ಸರಿ. ಈ ಕಾರಣಕ್ಕಾಗಿಯೇ, ಏಷ್ಯಾ, ಆಫ್ರಿಕಾ ಸೇರಿದಂತೆ ವಿವಿಧ ಖಂಡಗಳ ಚಿಕ್ಕ ರಾಷ್ಟ್ರಗಳು ಪರ್ಯಾಯಗಳಿಗಾಗಿ ಕಾದು ಕುಳಿತಿವೆ. ಜಗತ್ತಿಗೆ ಕೋವಿಡ್ ಪಿಡುಗನ್ನು ಪಸರಿಸಿ, ವರ್ಚಸ್ಸು ಕೆಡಿಸಿಕೊಂಡಿರುವ ಚೀನ ಈ ಅವಕಾಶವನ್ನು ಬಳಸಿಕೊಂಡು ಮುಖ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆಯಾದರೂ, ಅದರ ಮೇಲೆ ಸೃಷ್ಟಿಯಾಗಿರುವ ಅಪನಂಬಿಕೆಯು ಈ ರಾಷ್ಟ್ರಗಳು ಹಿಂದೇಟು ಹಾಕುವಂತೆ ಮಾಡುತ್ತಿದೆ. ಕೋವಿಡ್ ಆರಂಭಿಕ ಸಮಯದಲ್ಲಿ ಏಷ್ಯನ್ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಚೀನ ಮಾರಿದ ಮಾಸ್ಕ್, ಗ್ಲೌಸ್, ಪರೀಕ್ಷೆ ಕಿಟ್ ಹಾಗೂ ಪಿಪಿಇ ಕಿಟ್‌ಗಳು ಕಳಪೆ ಗುಣಮಟ್ಟ ಹೊಂದಿದ್ದ ವಿಚಾರವನ್ನು ಯಾವ ರಾಷ್ಟ್ರಗಳೂ ಮರೆತಿಲ್ಲ. ಈ ಕಾರಣಕ್ಕಾಗಿಯೇ, ಚೀನ ಅಭಿವೃದ್ಧಿಪಡಿಸಿರುವ ಲಸಿಕೆಯ ಮೇಲೂ ಬಹುತೇಕ ರಾಷ್ಟ್ರಗಳಿಗೆ ನಂಬಿಕೆ ಬರುತ್ತಿಲ್ಲ. ಒಂದೆಡೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಭಾರತ ದೊಡ್ಡತನ ಮೆರೆಯುತ್ತಾ ಹೋದರೆ, ಚೀನ ಈ ಸಂಕಷ್ಟದ ದುರ್ಲಾಭ ಪಡೆಯಲು ಹೋಗಿ ಈಗ ಮುಗ್ಗರಿಸುವಂತಾಗಿದೆ!