Advertisement

ಏಷ್ಯಾ ಕಪ್‌ ಕ್ರಿಕೆಟ್‌: ಭಾರತ ಅತ್ಯಂತ ಯಶಸ್ವಿ ತಂಡ

08:58 PM Aug 25, 2022 | Team Udayavani |

ಹೊಸದಿಲ್ಲಿ: ನಾಲ್ಕು ವರ್ಷಗಳ ವಿರಾಮದ ಬಳಿಕ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾವಳಿ ಶನಿವಾರ ಅರಬ್‌ ನಾಡಿನಲ್ಲಿ ಆರಂಭವಾಗಲಿದೆ. ಇದು ಏಷ್ಯಾ ಕಪ್‌ ಕ್ರಿಕೆಟ್‌ ಕೂಟದ 15ನೇ ಆವೃತ್ತಿ.

Advertisement

ಮೂಲ ವೇಳಾಪಟ್ಟಿಯಂತೆ ಇದು 2020ರಲ್ಲಿ ಪಾಕಿಸ್ಥಾನ ಆತಿಥ್ಯದಲ್ಲಿ ಸಾಗಬೇಕಿತ್ತು. ಆದರೆ ಕೊರೊನಾ ಹಾಗೂ ಇನ್ನಿತರ ರಾಜಕೀಯ ಕಾರಣಗಳು ಇದಕ್ಕೆ ಅಡ್ಡಿಯಾದವು. ಹೀಗಾಗಿ ಇದರ ಆತಿಥ್ಯ ಶ್ರೀಲಂಕಾ ಪಾಲಾಯಿತು. ಆದರೆ ಇಲ್ಲಿಯೂ ಗಂಡಾಂತರ ತಪ್ಪಲಿಲ್ಲ. ದ್ವೀಪರಾಷ್ಟ್ರ ಗಂಭೀರ ಆರ್ಥಿಕ ಸಂಕಷ್ಟದಿಂದ ತತ್ತರಿಸಿದ ಕಾರಣ ಇದು ಯುಎಇಗೆ ಸ್ಥಳಾಂತರಗೊಂಡಿತು.

ಒಟ್ಟು 6 ತಂಡಗಳು ಇಲ್ಲಿ ಸೆಣಸಲಿವೆ. ಇವನ್ನು ತಲಾ 3 ತಂಡಗಳ 2 ಗ್ರೂಪ್‌ಗಳನ್ನಾಗಿ ಮಾಡಲಾಗಿದೆ. ಇಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ಮುಂದಿನ “ಸೂಪರ್‌-4′ ಸುತ್ತಿನಲ್ಲಿ ಆಡಲಿವೆ. ಸೆ. 11ರಂದು ಪ್ರಶಸ್ತಿ ಸಮರ ಏರ್ಪಡಲಿದೆ.

ಮೊದಲ ಕಪ್‌ ಎತ್ತಿದ್ದೇ ಭಾರತ:

ಏಷ್ಯಾ ಕಪ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡವೆಂಬುದು ಭಾರತದ ಹೆಗ್ಗಳಿಕೆ. 10 ಸಲ ಫೈನಲ್‌ಗೆ ಲಗ್ಗೆ ಇಟ್ಟಿರುವ ಭಾರತ ಅತ್ಯಧಿಕ 7 ಸಲ ಪ್ರಶಸ್ತಿಯನ್ನೆತ್ತಿದೆ. ಯುಎಇಯಲ್ಲೇ ಏರ್ಪಟ್ಟ 1984ರ ಚೊಚ್ಚಲ ಏಷ್ಯಾ ಕಪ್‌ ಗೆದ್ದ ಹಿರಿಮೆ ಭಾರತದದ್ದು. ಏಷ್ಯಾ ಕಪ್‌ ಎತ್ತಿದ ಮೊದಲ ನಾಯಕ ಸುನೀಲ್‌ ಗಾವಸ್ಕರ್‌.

Advertisement

1984ರ ಮೊದಲ ಆವೃತ್ತಿಯಲ್ಲಿ ಪಾಲ್ಗೊಂಡಿದ್ದು ಮೂರೇ ತಂಡ. ಭಾರತ, ಪಾಕಿಸ್ಥಾನ ಮತ್ತು ಶ್ರೀಲಂಕಾ. ಆಡಿದ್ದು ಮೂರೇ ಪಂದ್ಯ. ಇಲ್ಲಿ ಫೈನಲ್‌ ಇರಲಿಲ್ಲ. ಎರಡೂ ಪಂದ್ಯಗಳನ್ನು ಗೆದ್ದ ಭಾರತ ಚಾಂಪಿಯನ್‌ ಎನಿಸಿತು. ಶ್ರೀಲಂಕಾ ಒಂದು ಪಂದ್ಯ ಗೆದ್ದರೆ, ಪಾಕ್‌ ಎರಡನ್ನೂ ಸೋತಿತು.

ಭಾರತ ಹೊರತುಪಡಿಸಿದರೆ ಏಷ್ಯಾ ಕಪ್‌ ಇತಿಹಾಸದ ಯಶಸ್ವಿ ತಂಡವೆಂದರೆ ಶ್ರೀಲಂಕಾ. ಅತ್ಯಧಿಕ 11 ಸಲ ಫೈನಲ್‌ಗೆ ಲಗ್ಗೆ ಇರಿಸಿದ್ದು ಲಂಕೆಯ ದಾಖಲೆ. ಅದು 5 ಸಲ ಪ್ರಶಸ್ತಿ ಎತ್ತಿದೆ.

ಏಷ್ಯಾದ ಬಲಿಷ್ಠ ತಂಡವಾಗಿರುವ ಪಾಕಿಸ್ಥಾನಕ್ಕೆ ಈವರೆಗೆ ಏಷ್ಯಾ ಕಪ್‌ ಒಲಿದದ್ದು ಕೇವಲ 2 ಸಲ. ಅದು ಒಟ್ಟು 4 ಸಲ ಫೈನಲ್‌ ತಲುಪಿದೆ. ಸ್ವಾರಸ್ಯವೆಂದರೆ, ಏಷ್ಯಾ ಕಪ್‌ ಚರಿತ್ರೆಯಲ್ಲಿ ಭಾರತ-ಪಾಕಿಸ್ಥಾನ ತಂಡಗಳು ಒಮ್ಮೆಯೂ ಫೈನಲ್‌ನಲ್ಲಿ ಮುಖಾಮುಖಿ ಆಗಿಲ್ಲ!

ಮೂರೂ ತಂಡಗಳಿಗೆ ಸಮಾನ ಅಂಕ:

1995ರಲ್ಲಿ ಶಾರ್ಜಾದಲ್ಲಿ ನಡೆದ 5ನೇ ಆವೃತ್ತಿಯ ಏಷ್ಯಾ ಕಪ್‌ನಲ್ಲಿ ಭಾರತ, ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ರೌಂಡ್‌ ರಾಬಿನ್‌ ಲೀಗ್‌ನಲ್ಲಿ ಏಕರೀತಿಯ ಪ್ರದರ್ಶನ ನೀಡಿ ಸಮಾನ ಅಂಕ ಗಳಿಸಿದವು. ರನ್‌ರೇಟ್‌ನಲ್ಲಿ ಮುಂದಿದ್ದ ಭಾರತ-ಶ್ರೀಲಂಕಾ ಫೈನಲ್‌ ತಲುಪಿದವು. ಭಾರತ ಕಪ್‌ ಎತ್ತಿತು.

3 ಹಂತಗಳ ಪಂದ್ಯಾವಳಿ:

2004ರಲ್ಲಿ ಪಂದ್ಯಾವಳಿಯ ಮಾದರಿಯನ್ನು ಬದಲಾಯಿಸಲಾಯಿತು. ಇದು 3 ಹಂತಗಳಲ್ಲಿ ನಡೆಯಿತು- ಗ್ರೂಪ್‌ ವಿಭಾಗ, ಸೂಪರ್‌-4 ವಿಭಾಗ ಹಾಗೂ ಫೈನಲ್‌. ಹಾಂಕಾಂಗ್‌ ಮತ್ತು ಯುಎಇ ತಂಡಗಳ ಸೇರ್ಪಡೆಯೇ ಇದಕ್ಕೆ ಕಾರಣ.

ಬಾಂಗ್ಲಾ ಅತ್ಯಧಿಕ ಆತಿಥ್ಯ:

ಭಾರತ ಮತ್ತು ಪಾಕಿಸ್ಥಾನ ಏಷ್ಯಾದ ಅತ್ಯಂತ ಬಲಾಡ್ಯ ಕ್ರಿಕೆಟ್‌ ತಂಡಗಳಾದರೂ ಈವರೆಗೆ ಏಷ್ಯಾ ಕಪ್‌ ಆತಿಥ್ಯವನ್ನು ವಹಿಸಿದ್ದು ಒಮ್ಮೆ ಮಾತ್ರ. ದಾಖಲೆ ಬಾಂಗ್ಲಾದೇಶದ ಹೆಸರಲ್ಲಿದೆ. ಅದು ಅತ್ಯಧಿಕ 5 ಸಲ ಕೂಟವನ್ನು ನಡೆಸಿದೆ. ಶ್ರೀಲಂಕಾದಲ್ಲಿ 4 ಸಲ, ಯುಎಇಯಲ್ಲಿ 3 ಸಲ ಪಂದ್ಯಾವಳಿ ನಡೆದಿದೆ. ಈ ಬಾರಿ ಯುಎಇ ಆತಿಥ್ಯದಲ್ಲಿ ನಡೆಯುತ್ತಿರುವುದು 4ನೇ ಏಷ್ಯಾ ಕಪ್‌.

ಭಾರತದ ಹ್ಯಾಟ್ರಿಕ್‌ ಸಾಧನೆ:

ಭಾರತ ಏಷ್ಯಾ ಕಪ್‌ನಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಏಕೈಕ ತಂಡ. 1988, 1990-91 ಮತ್ತು 1995ರಲ್ಲಿ ಸತತ 3 ವರ್ಷ ಭಾರತ ಪ್ರಶಸ್ತಿಯನ್ನೆತ್ತಿತ್ತು. ಮೂರೂ ಫೈನಲ್‌ಗ‌ಳಲ್ಲಿ ಶ್ರೀಲಂಕಾವನ್ನೇ ಮಣಿಸಿದ್ದು ವಿಶೇಷ. ಈ ಸಲ ಗೆದ್ದರೂ ಹ್ಯಾಟ್ರಿಕ್‌ ಸಾಧನೆ ಮಾಡಿದಂತಾಗುತ್ತದೆ. ಹಿಂದಿನೆರಡು ಆವೃತ್ತಿಗಳಲ್ಲಿ (2016 ಮತ್ತು 2018) ಭಾರತವೇ ಚಾಂಪಿಯನ್‌ ಆಗಿತ್ತು.

 ಟಿ20 ಮಾದರಿ : 

ಆರಂಭದಿಂದಲೂ ಏಕದಿನ ಮಾದರಿಯಲ್ಲಿ ನಡೆಯುತ್ತ ಬಂದಿದ್ದ ಏಷ್ಯಾ ಕಪ್‌ ಮಾದರಿಯನ್ನು 2016ರಲ್ಲಿ ಬದಲಾಯಿಸಲಾಯಿತು. ಇದು ಟಿ20 ರೂಪ ಪಡೆಯಿತು. ಈ ಸಲವೂ ಟಿ20 ಮಾದರಿಯಲ್ಲೇ ನಡೆಯಲಿದೆ.

ದಾಖಲೆ ವೀರರು…

ಏಷ್ಯಾ ಕಪ್‌ನಲ್ಲಿ ಅತ್ಯಧಿಕ ರನ್‌ ಬಾರಿಸಿದ ದಾಖಲೆ ಹೊಂದಿರುವವರು ಸನತ್‌ ಜಯಸೂರ್ಯ (1,220). ಅತೀ ಹೆಚ್ಚು ವಿಕೆಟ್‌ ಉರುಳಿಸಿದವರು ಮುತ್ತಯ್ಯ ಮುರಳೀಧರನ್‌ (30). ಪಂದ್ಯವೊಂದರಲ್ಲಿ ಅತ್ಯಧಿಕ ವೈಯಕ್ತಿಕ ರನ್‌ ಬಾರಿಸಿದ ಹಿರಿಮೆ ವಿರಾಟ್‌ ಕೊಹ್ಲಿ ಅವರದು (183). ಅತ್ಯುತ್ತಮ ಬೌಲಿಂಗ್‌ ಫಿಗರ್‌ ಅಜಂತ ಮೆಂಡಿಸ್‌ ಅವರದಾಗಿದೆ (13ಕ್ಕೆ 6 ವಿಕೆಟ್‌).

ಏಷ್ಯಾಕಪ್‌ ಚಾಂಪಿಯನ್ಸ್‌:

ವರ್ಷ   ಚಾಂಪಿಯನ್‌   / ರನ್ನರ್‌ ಅಪ್‌  /ಫೈನಲ್‌

1984       ಭಾರತ / ಶ್ರೀಲಂಕಾ        / ಶಾರ್ಜಾ

1986       ಶ್ರೀಲಂಕಾ           / ಪಾಕಿಸ್ಥಾನ /   ಕೊಲಂಬೊ

1988       ಭಾರತ /ಶ್ರೀ ಲಂಕಾ/      ಢಾಕಾ

1990       ಭಾರತ / ಶ್ರೀಲಂಕಾ        /ಕೋಲ್ಕತಾ

1995       ಭಾರತ / ಶ್ರೀಲಂಕಾ/      ಶಾರ್ಜಾ

1997       ಶ್ರೀಲಂಕಾ           / ಭಾರತ/            ಕೊಲಂಬೊ

2000       ಪಾಕಿಸ್ಥಾನ         / ಶ್ರೀಲಂಕಾ/      ಢಾಕಾ

2004       ಶ್ರೀಲಂಕಾ           / ಭಾರತ              /ಕೊಲಂಬೊ

2008       ಶ್ರೀಲಂಕಾ           /ಭಾರತ/             ಕರಾಚಿ

2010       ಭಾರತ/               ಶ್ರೀಲಂಕಾ/         ಡಂಬುಲ

2012       ಪಾಕಿಸ್ಥಾನ/       ಬಾಂಗ್ಲಾದೇಶ/  ಮಿರ್ಪುರ್‌

2014       ಶ್ರೀಲಂಕಾ           /ಪಾಕಿಸ್ಥಾನ       / ಮಿರ್ಪುರ್‌

2016       ಭಾರತ /ಬಾಂಗ್ಲಾದೇಶ  /ಮಿರ್ಪುರ್‌

2018       ಭಾರತ/               ಬಾಂಗ್ಲಾದೇಶ/  ದುಬಾೖ

ಗ್ರೂಪ್‌ ಪಂದ್ಯಗಳ ವೇಳಾಪಟ್ಟಿ:

ದಿನಾಂಕ            /ಪಂದ್ಯ/             ಸ್ಥಳ      /ಆರಂಭ

ಆ. 27    ಶ್ರೀಲಂಕಾ-ಅಫ್ಘಾನಿಸ್ಥಾನ/          ದುಬಾೖ/              ರಾ. 7.30

ಆ. 28    ಭಾರತ-ಪಾಕಿಸ್ಥಾನ / ದುಬಾೖ/   ರಾ. 7.30

ಆ. 30    ಬಾಂಗ್ಲಾದೇಶ-ಅಫ್ಘಾನಿಸ್ಥಾನ/   ಶಾರ್ಜಾ/             ರಾ. 7.30

ಆ. 31    ಭಾರತ-ಹಾಂಕಾಂಗ್‌      /ದುಬಾೖ              /ರಾ. 7.30

ಸೆ. 1        ಶ್ರೀಲಂಕಾ-ಬಾಂಗ್ಲಾದೇಶ              /ದುಬಾೖ              /ರಾ. 7.30

ಸೆ. 2        ಪಾಕಿಸ್ಥಾನ-ಹಾಂಕಾಂಗ್‌/            ಶಾರ್ಜಾ/             ರಾ. 7.30

ಸಮಯ: ಭಾರತೀಯ ಕಾಲಮಾನ

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಗ್ರೂಪ್‌ “ಎ’: ಭಾರತ, ಪಾಕಿಸ್ಥಾನ, ಹಾಂಕಾಂಗ್‌

ಗ್ರೂಪ್‌ “ಬಿ’: ಶ್ರೀಲಂಕಾ, ಅಫ್ಘಾನಿಸ್ಥಾನ, ಬಾಂಗ್ಲಾದೇಶ

Advertisement

Udayavani is now on Telegram. Click here to join our channel and stay updated with the latest news.

Next