ಚೆನ್ನೈ: ಸ್ಟಾರ್ ಆಟಗಾರರಾದ ಸೌರವ್ ಘೋಷಾಲ್, ದೀಪಿಕಾ ಪಳ್ಳಿಕಲ್ ಕಾರ್ತಿಕ್ ಅವರನ್ನೊಳಗೊಂಡ 9 ಸದಸ್ಯರ ಭಾರತೀಯ ಸ್ಕ್ವಾಷ್ ತಂಡ ಕಾಮನ್ವೆಲ್ತ್ ಗೇಮ್ಸ್‌ಗಾಗಿ ಶನಿವಾರ ಗೋಲ್ಡ್ ಕೋಸ್ಟ್‌ಗೆ ಪ್ರಯಾಣ ಬೆಳೆಸಿತು.
ಹರೀಂದರ್ ಪಾಲ್ ಸಂಧು, ವಿಕ್ರಮ್ ಮಲ್ಹೋತ್ರಾ, ರಮಿತ್ ಟಂಡನ್, ಜೋಶ್ನಾ ಚಿನ್ನಪ್ಪ, ಅಧಿಕಾರಿಗಳಾದ ಸೈರಸ್ ಪೋಂಚ, ಭುವನೇಶ್ವರಿ ಕುಮಾರಿ, ಫಿಸಿಯೋ ಗ್ರೇಮ್ ಎವರಾರ್ಡ್ ಅವರೆಲ್ಲ ಇತರ ಸದಸ್ಯರು.
“ವಿಶ್ವ ರ್‍ಯಾಂಕಿಂಗ್‌ನ 3 ಮಂದಿ ಟಾಪ್-20 ಆಟಗಾರರು ನಮ್ಮ ತಂಡದಲ್ಲಿದ್ದಾರೆ. ವೃತ್ತಿಪರ ಪಂದ್ಯಾವಳಿಗಳಲ್ಲಿ ಎಲ್ಲರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಗೇಮ್ಸ್‌ಗಾಗಿ ಕಠಿನ ಅಭ್ಯಾಸ ನಡೆಸಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಪದಕ ಗೆಲ್ಲುವುದು ನಮ್ಮ ಮುಖ್ಯ ಗುರಿ. ಡಬಲ್ಸ್ ಸ್ಪರ್ಧೆಯಲ್ಲೂ ನಾವು ಪೋಡಿಯಂ ಏರುವ ವಿಶ್ವಾಸ ಹೊಂದಿದ್ದೇವೆ’ ಎಂದು ಕೋಚ್ ಪೋಂಚ ಹೇಳಿದರು.
ಕಾಮನ್ವೆಲ್ತ್ ಗೇಮ್ಸ್ ಸ್ಕ್ವಾಷ್ ಸ್ಪರ್ಧೆಗಳು ಎ. 5ರಿಂದ 15ರ ತನಕ ನಡೆಯಲಿವೆ.2014ರ ಗ್ಲಾಸೊYà ಗೇಮ್ಸ್ ವನಿತಾ ಡಬಲ್ಸ್‌ನಲ್ಲಿ ಜೋಶ್ನಾ ಚಿನ್ನಪ್ಪ-ದೀಪಿಕಾ ಪಳ್ಳಿಕಲ್ ಚಿನ್ನದ ಪದಕ ಜಯಿಸಿದ್ದನ್ನು ನೆನಪಿಸಿಕೊಳ್ಳಬಹುದು. ಈ ಬಾರಿ ಬಂಗಾರವನ್ನು ಉಳಿಸಿಕೊಳ್ಳುವುದು ನಮ್ಮ ಗುರಿ; ಅಂದಿನ ಬಂಗಾರವೇ ಈ ಕೂಟಕ್ಕೆ ಸ್ಫೂರ್ತಿ ಎಂದು ಜೋಶ್ನಾ ಹೇಳಿದರು.
ಪ್ರತಿಯೊಂದು ಸ್ಪರ್ಧೆಯೂ ಕಠಿನವಾಗಿರಲಿದೆ. ದೇಶಕ್ಕಾಗಿ ಸ್ಪರ್ಧಿಸುವುದು ಗೌರವ ಹಾಗೂ ಸ್ಫೂರ್ತಿ. ಎಲ್ಲರೂ ತುಂಬು ಆತ್ಮವಿಶ್ವಾಸದಲ್ಲಿದ್ದಾರೆ ಎಂಬುದು ಸೌರವ್ ಘೋಷಾಲ್ ನುಡಿಗಳು. ಗ್ಲಾಸೊYà ಗೇಮ್ಸ್‌ನಲ್ಲಿ ಇಂಗ್ಲೆಂಡಿನ ಪೀಟರ್ ಬಾರ್ಕರ್‌ಗೆ 3-4 ಅಂತರದಿಂದ ಸೋತು ಸ್ವಲ್ಪದರಲ್ಲೇ ಕಂಚಿನ ಪದಕದಿಂದ ವಂಚಿತರಾಗಿದ್ದರು.