Advertisement
ಗಾಲ್ವಾನ್‌ನಲ್ಲಿ ಸಂಚು ರೂಪಿಸಿಯೇ ಚೀನದ ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಬಿಬಿಸಿ ಸುದ್ದಿತಾಣ ಸಾಕ್ಷಿ ಸಹಿತ ವರದಿ ಮಾಡಿದೆ.ಹಲ್ಲೆಗೆ ಬಳಸಿದ್ದ ಮೊಳೆಯುಕ್ತ ಕಬ್ಬಿಣದ ಸರಳುಗಳ ಕಟ್ಟಿನ ಚಿತ್ರವನ್ನು ಬಿಬಿಸಿ ಪ್ರಕಟಿಸಿದ್ದು, ಸೋಮವಾರದ ಘಟನೆಯ ಖಚಿತ ವಿವರ ಬಲ್ಲ ಭಾರತೀಯ ಸೇನಾಧಿಕಾರಿ ಒದಗಿಸಿದ ಚಿತ್ರ ಇದು ಎಂದು ಹೇಳಿದೆ.
ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ಇಚ್ಛೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದಾರೆ. ಅವರ ಮಾತಿನಂತೆ ಭಾರತ ಮಾತುಕತೆಗೆ ಸದಾ ಸಿದ್ಧ. ನಮ್ಮ ಸಾರ್ವಭೌಮತ್ವವನ್ನು ಮತ್ತು ಗಡಿ ಪ್ರದೇಶಗಳ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಾವೆಂದಿಗೂ ಬದ್ಧವಾಗಿರುತ್ತೇವೆ ಎಂದು ಅವರು ಹೇಳಿದ್ದಾರೆ.
Related Articles
Advertisement
ಚೀನ ಗುತ್ತಿಗೆ ರದ್ದುಚೀನದ ಬೀಜಿಂಗ್ ನ್ಯಾಷನಲ್ ರೈಲ್ವೇ ರಿಸರ್ಚ್ ಆ್ಯಂಡ್ ಡಿಸೈನ್ ಇನ್‌ಸ್ಟಿಟ್ಯೂಟ್ ಆಫ್ ಸಿಗ್ನಲ್ ಆ್ಯಂಡ್ ಕಮ್ಯೂನಿಕೇಷನ್ ಎಂಬ ಸಂಸ್ಥೆಯೊಂದಿಗೆ ಭಾರತೀಯ ರೈಲ್ವೇ ಮಾಡಿಕೊಂಡಿದ್ದ ಒಪ್ಪಂದವೊಂದನ್ನು ರದ್ದುಪಡಿಸಲಾಗಿದೆ. ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಹೆಸರಿನಲ್ಲಿ ಸರಕು ಸಾಗಣೆಯ ಪ್ರತ್ಯೇಕ ರೈಲು ಮಾರ್ಗ ನಿರ್ಮಿಸುವ ಟೆಂಡರನ್ನು ಚೀನದ ಸಂಸ್ಥೆಗೆ 2016ರಲ್ಲಿ ನೀಡಲಾಗಿತ್ತು. ಈವರೆಗೆ ಕೇವಲ ಶೇ. 20ರಷ್ಟು ಕಾಮಗಾರಿಯನ್ನು ಮಾತ್ರ ಮುಗಿಸಲಾಗಿದ್ದು, ಅದೂ ಕಳಪೆಯಾಗಿದೆ ಎಂದು ಹೇಳಿರುವ ರೈಲ್ವೇ ಇಲಾಖೆ ಈ ಒಪ್ಪಂದವನ್ನು ರದ್ದುಗೊಳಿಸಿದೆ. ಗಾಲ್ವಾನ್ ಹಿಂಸಾಚಾರದ ಅನಂತರ ಈ ನಿರ್ಧಾರ ಕೈಗೊಂಡಿರುವುದು ಗಮನಾರ್ಹ. ವಿಎಚ್‌ಪಿಯಿಂದ ಅಭಿಯಾನ
ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮತ್ತು ದುರ್ಗಾ ವಾಹಿನಿಗಳು ಸಂಯುಕ್ತವಾಗಿ ಸಾರ್ವಜನಿಕ ಅಭಿಯಾನವೊಂದನ್ನು ಸದ್ಯದಲ್ಲೇ ಆರಂಭಿಸಲಿವೆ ಎಂದು ಮೂಲಗಳು ತಿಳಿಸಿವೆ. ಇಂದು ಸರ್ವಪಕ್ಷ ಸಭೆ
ಭಾರತ -ಚೀನ ಗಡಿಯಲ್ಲಿ ಉದ್ಭವಿಸಿರುವ ಪ್ರಕ್ಷುಬ್ಧ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಶುಕ್ರವಾರ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಸಂಜೆ 5 ಗಂಟೆಗೆ ಆರಂಭವಾಗಲಿರುವ ಸಭೆಗೆ ದೇಶದ ಎಲ್ಲ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗಿದೆ. ಟ್ವಿಟರ್‌ನಲ್ಲಿ ಕಿಡಿ
ಚೀನದ ಸೈನಿಕರು ಹಲ್ಲೆಗೆ ಉಪಯೋಗಿಸಿದ ರಾಡ್‌ಗಳ ಚಿತ್ರವನ್ನು ಮೊದಲಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ಭಾರತದ ರಕ್ಷಣ ತಜ್ಞ ಅಜಯ್ ಶುಕ್ಲಾ ಎಂದು ಮೂಲಗಳು ತಿಳಿಸಿವೆ. ತಮ್ಮ ಟ್ವೀಟರ್ ಸಂದೇಶದಲ್ಲಿ ಅವರು, “ಚೀನದ ಸೈನಿಕರು ಇಂಥ ಮಾರಣಾಂತಿಕ ಆಯುಧಗಳನ್ನು ಉಪಯೋಗಿಸಿದ್ದು, ಇದು ಬರ್ಬರ, ಅನಾಗರಿಕ’ ಎಂದು ಕಿಡಿಕಾರಿದ್ದಾರೆ. ಇದಕ್ಕೆ ಸಾವಿರಾರು ಟ್ವೀಟಿಗರು ಪ್ರತಿಕ್ರಿಯಿಸಿದ್ದು, ಇದೊಂದು ಹೇಯ ಕೃತ್ಯ ಎಂದು ಖಂಡಿಸಿದ್ದಾರೆ. ಗುರುವಾರ ರಾತ್ರಿ ವೇಳೆಗೆ ಇದು 34.9 ಸಾವಿರ ಲೈಕ್ಸ್ ಪಡೆದು 18,200 ರೀ-ಟ್ವೀಟ್ ಕಂಡಿದೆ. ಸುಖೋಯ್, ಮಿಗ್ ಖರೀದಿಗೆ ಹೆಜ್ಜೆ
ಭಾರತೀಯ ವಾಯುಪಡೆಯು 12 ಹೊಸ ಸುಖೋಯ್ ಮತ್ತು 21 ಹೊಸ ಮಿಗ್-29 ಮಾದರಿಯ ಯುದ್ಧ ವಿಮಾನಗಳನ್ನು ರಷ್ಯಾದಿಂದ ಕೊಳ್ಳಲು ಮುಂದಾಗಿದೆ. ಈ ಸಂಬಂಧ ಅದು ಒಟ್ಟು 5 ಸಾವಿರ ಕೋ.ರೂ.ಗಳ ಪ್ರಸ್ತಾವನೆಯನ್ನು ಸಿದ್ಧಗೊಳಿಸಿ ರಕ್ಷಣ ಸಚಿವಾಲಯಕ್ಕೆ ರವಾನಿಸಿದೆ. ಚೀನ ಜತೆಗಿನ ಗಡಿ ಬಿಕ್ಕಟ್ಟು ಉಲ್ಬಣಗೊಂಡಿರುವ ಈ ಸಂದರ್ಭದಲ್ಲೇ ಈ ಪ್ರಸ್ತಾವನೆ ರವಾನೆಯಾಗಿರುವುದು ಗಮನಾರ್ಹ. 2016ರಲ್ಲಿ ರಫೇಲ್ ಯುದ್ಧ ವಿಮಾನಗಳ ಖರೀದಿ ಪ್ರಸ್ತಾವನೆಯ ಬಳಿಕದ 2ನೇ ಪ್ರಸ್ತಾವನೆಯಿದು. ಮಿತಿಯೊಳಗೆ ಇರಿ: ಚೀನಕ್ಕೆ ಎಚ್ಚರಿಕೆ
ಚೀನದ ಸೈನ್ಯವು ಗಡಿಯಲ್ಲಿ ಶಾಂತಿ ಉಲ್ಲಂಘನೆ ಮಾಡುವಂಥ ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ಕೈಗೊಳ್ಳಬಾರದು ಎಂದು ಭಾರತೀಯ ವಿದೇಶಾಂಗ ಇಲಾಖೆಯು ಎಚ್ಚರಿಕೆ ನೀಡಿದೆ. ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವಕ್ತಾರ ಅನುರಾಗ್ ಶ್ರೀವಾಸ್ತವ, “ಗಡಿಯಲ್ಲಿ ಶಾಂತಿ ಪಾಲಿಸಲು ಭಾರತ ಬದ್ಧ. ನಮ್ಮ ಚಟುವಟಿಕೆಗಳು ಎಲ್‌ಎಸಿ ದಾಟದಂತೆ ಈವರೆಗೆ ನೋಡಿಕೊಂಡಿದ್ದೇವೆ. ಚೀನ ಕಡೆಯಿಂದಲೂ ಇದನ್ನೇ ನಿರೀಕ್ಷಿಸುತ್ತೇವೆ’ ಎಂದಿದ್ದಾರೆ. ಮತ್ತೆ ಸೇನೆ ನಿಯೋಜಿಸಿದ ಚೀನ
ಇಷ್ಟೆಲ್ಲ ರಾದ್ಧಾಂತವಾದರೂ ಸುಮ್ಮನಾಗದ ಚೀನ ಗಡಿಯಲ್ಲಿ ಮತ್ತಷ್ಟು ಸೈನಿಕರನ್ನು ಜಮಾವಣೆಗೊಳಿಸಿದ್ದು, ನಿರ್ಮಾಣ ಸಾಮಗ್ರಿಗಳನ್ನು ಶೇಖರಿಸಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಇತ್ತೀಚಿನ ಉಪಗ್ರಹ ಚಿತ್ರಗಳ ಆಧಾರದಲ್ಲಿ ಈ ವರದಿ ಮಾಡಲಾಗಿದೆ. ಚೀನದ ಸೈನಿಕರು ಗಡಿ ರೇಖೆ ಬಳಿಯ “ಗಸ್ತು ಪಾಯಿಂಟ್ 14’ರ ಬಳಿ ಅಗಾಧ ಸಂಖ್ಯೆಯಲ್ಲಿದ್ದಾರೆ. ಚೀನದ ಸೇನಾ ವಾಹನಗಳ ಓಡಾಟ ಹೆಚ್ಚಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ ಎಂದು ಉಪಗ್ರಹ ಚಿತ್ರ ವಿಶ್ಲೇಷಣ ತಜ್ಞ , ನಿವೃತ್ತ ಕರ್ನಲ್ ವಿನಾಯಕ ಭಟ್ ತಿಳಿಸಿದ್ದಾರೆ. ದೌಲತ್ ಬೇಗ್ ಓಲ್ಡೀ ಬಳಿಯ ಬೆಟ್ಟಗಳ ತುದಿಯವರೆಗೂ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎನ್‌ಡಿಟಿವಿಯೂ ಇದನ್ನು ವರದಿ ಮಾಡಿದೆ. ಅರ್ತ್ ಮೂವರ್‌ಗಳನ್ನು ತರಲಾಗಿದ್ದು, ಗಾಲ್ವಾನ್ ನದಿ ಹರಿವಿಗೆ ತಡೆಯೊಡ್ಡುವ ಪ್ರಯತ್ನದಲ್ಲಿ ಚೀನ ನಿರತವಾಗಿದೆ ಎಂದಿದೆ. ಹುತಾತ್ಮರಾದ ಯೋಧರು ನಿರಾಯುಧರಾಗಿರಲಿಲ್ಲ. ಬದಲಾಗಿ ಅವರು, ಗಡಿಯಲ್ಲಿ ಶಸ್ತ್ರಾಸ್ತ್ರ ಬಳಕೆ ಮಾಡಬಾರದು ಎಂಬ ನಿಯಮಕ್ಕೆ ಅನುಗುಣವಾಗಿ ನಡೆದುಕೊಂಡರು. ಶಸ್ತ್ರ ಬಳಕೆ ಮಾಡಬಾರದು ಎಂದು 1996, 2005ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
– ಎಸ್. ಜೈಶಂಕರ್, ವಿದೇಶಾಂಗ ಸಚಿವ
(ರಾಹುಲ್ ಗಾಂಧಿ ಟೀಕೆಗೆ ತಿರುಗೇಟು)