ಹೊಸದಿಲ್ಲಿ: ಗಾಲ್ವನ್ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘರ್ಷಣೆಯ ನಂತರ, ಭಾರತದಲ್ಲಿ ಚೀನ ಸಾಮಗ್ರಿಗಳ ಬಹಿಷ್ಕಾರದ ಕೂಗೆದ್ದಿದೆ.
ಈ ಸಂದರ್ಭ ವನ್ನು ಸದುಪಯೋಗ ಮಾಡಿಕೊಳ್ಳಲು ಭಾರತೀಯ ಮೊಬೈಲ್ ಕಂಪನಿಗಳು ಮುಂದಾಗಿವೆ.
ಕೆಲವು ವರ್ಷಗಳ ಹಿಂದೆಯೇ ಭಾರತೀಯ ಮೊಬೈಲ್ ರಂಗಕ್ಕೆ ಕಾಲಿಟ್ಟಿದ್ದರೂ, ವಿದೇಶಿ ಮೊಬೈಲುಗಳು ಅದರಲ್ಲೂ ವಿಶೇಷವಾಗಿ ಚೀನ ಮೊಬೈಲುಗಳ ಹಾವಳಿಯಿಂದಾಗಿ ಮಾರುಕಟ್ಟೆಯಲ್ಲಿ ಕ್ಷೀಣಿಸಿದ್ದ ಲಾವಾ, ಮೈಕ್ರೋಮ್ಯಾಕ್ಸ್‌ನಂಥ ಕಂಪನಿಗಳು ಈಗ ಮತ್ತೆ ಚಿಗುರೊಡೆಯಲು ಸಿದ್ಧವಾಗಿವೆ.
ಈ ನಿಟ್ಟಿನಲ್ಲಿ ನೋಯ್ಡಾ ಮೂಲದ ಲಾವಾ ಕಂಪನಿ ಮೊದಲ ಹೆಜ್ಜೆಯನ್ನಿಟ್ಟಿದೆ. ಸದ್ಯದಲ್ಲೇ ಅದು, ‘ಲಾವಾ ಝೆಡ್ 66’ ಎಂಬ ಹೊಸ ಮೊಬೈಲೊಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.
ಮತ್ತೊಂದೆಡೆ, ಮೈಕ್ರೋ ಮ್ಯಾಕ್ಸ್ ಜುಲೈನಲ್ಲಿ ತನ್ನ ಹೊಸ ಉತ್ಪನ್ನಗಳ ಬಿಡುಗಡೆ ಬಗ್ಗೆ ಘೋಷಿಸುವುದಾಗಿ ತಿಳಿಸಿದೆ. ಅಲ್ಲದೆ, ತಾನು ಬಿಡುಗಡೆ ಮಾಡಲಿರುವ ಮೊಬೈಲ್ ಫೋನ್‌ಗಳು ಕೈಗೆಟಕುವ ದರದಲ್ಲಿ ಲಭ್ಯವಾಗಲಿವೆ ಎಂದು ತಿಳಿಸಿದೆ.