ನವದೆಹಲಿ: ಪ್ರಯಾಣಿಕರನ್ನು ಕಡಿಮೆ ಪ್ರಮಾಣದಲ್ಲಿ ಆಕರ್ಷಿಸುತ್ತಿರುವ ಕೆಲವು ಪ್ರಮುಖ ರೈಲುಗಳ ಹವಾನಿಯಂತ್ರಿತ ಬೋಗಿಗಳಿಗೆ ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ನಿಟ್ಟಿನಲ್ಲಿ ಭಾರತೀಯ ರೈಲ್ವೇ ಶೀಘ್ರದಲ್ಲೇ 25% ದರ ಕಡಿತದ ಕೊಡುಗೆ ನೀಡಲಿದೆ.
ಶತಾಬ್ದಿ, ತೇಜಸ್, ಗತಿಮನ್, ಮತ್ತು ಇಂಟರ್ ಸಿಟಿ ರೈಲುಗಳ ಎಸಿ ಬೋಗಿಗಳು ಮತ್ತು ಎಕ್ಸಿಕ್ಯೂಟಿವ್ ಬೋಗಿಗಳಲ್ಲಿ ಈ ಸ್ಕೀಂ ಅನ್ನು ಜಾರಿಗೊಳಿಸಲಾಗುವುದು ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಕಡಿಮೆ ದರದ ವಿಮಾನ ಯಾನ ಮತ್ತು ಬಸ್ಸು ಪ್ರಯಾಣ ದರಗಳಿಗೆ ಸ್ಪರ್ಧೆ ನೀಡುವ ಉದ್ದೇಶ ಈ ಯೋಜನೆಯ ಹಿಂದಿದೆ ಎಂದು ಹೇಳಲಾಗುತ್ತಿದೆ.
ಟಿಕೆಟಿನ ಮೂಲ ದರದ ಮೇಲೆ ಈ ದರ ಕಡಿತ ನೀಡಲಾಗುವುದು. ಮುಂಗಡ ಬುಕ್ಕಿಂಗ್ ಶುಲ್ಕ, ಸೂಪರ್ ಫಾಸ್ಟ್ ಶುಲ್ಕ ಮತ್ತು ಜಿ.ಎಸ್.ಟಿ. ಶುಲ್ಕಗಳು ಅನ್ವಯವಾಗುವುದಾದಲ್ಲಿ ಇವುಗಳನ್ನು ಪ್ರಯಾಣಿಕರು ಪ್ರತ್ಯೇಕವಾಗಿ ಪಾವತಿಸಬೇಕಾಗಿರುತ್ತದೆ.
ಕಳೆದ ವರ್ಷದಲ್ಲಿ ತಿಂಗಳಿಗೆ 50%ಕ್ಕಿಂತ ಕಡಿಮೆ ಪ್ರಯಾಣಿಕರ ಭರ್ತಿಯನ್ನು ದಾಖಲಿಸಿದ್ದ ರೈಲುಗಳಲ್ಲಿ ಈ ದರ ಕಡಿತ ಯೋಜನೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ರೈಲ್ವೇ ಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ. ದರ ಕಡಿತ ಸೌಲಭ್ಯ ಇರುವ ರೈಲುಗಳಲ್ಲಿ ಆಹಾರ ಪೂರೈಕೆ ಸೇವೆ ಐಚ್ಛಿಕವಾಗಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.