ಹೊಸದಿಲ್ಲಿ: ತೇಜಸ್ ಎಕ್ಸ್‌ಪ್ರೆಸ್ ರೈಲಿನ ಸಂಚಾರದಲ್ಲಿ ವಿಳಂಬವಾದರೆ ಪ್ರಯಾಣಿಕರಿಗೆ ಪರಿಹಾರ ನೀಡಲಾಗುತ್ತದೆ ಎಂಬ ಹೊಸ ನಿಯಮವನ್ನು ಈಗಾಗಲೇ ಘೋಷಿಸಿರುವ ಐ.ಆರ್.ಸಿ.ಟಿ.ಸಿ., ಮೊದಲ ಬಾರಿಗೆ 950 ಪ್ರಯಾಣಿಕರಿಗೆ 1.62 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಲು ಮುಂದಾಗಿದೆ.
ಅ. 19ರಂದು ದಿಲ್ಲಿ – ಲಕ್ನೋ ತೇಜಸ್ ಎಕ್ಸ್ ಪ್ರಸ್ ರೈಲು 3 ಗಂಟೆಗೂ ಅಧಿಕ ವಿಳಂಬವಾದ ಹಿನ್ನೆಲೆ ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ರೀತಿ ವಿಳಂಬಕ್ಕೆ ಪರಿಹಾರ ನೀಡುತ್ತಿರುವುದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲು.
ಯಾರಿಗೆಷ್ಟು ಪರಿಹಾರ?: ಲಕ್ನೋದಿಂದ ದಿಲ್ಲಿಗೆ 450 ಪ್ರಯಾಣಿಕರು ಸಂಚರಿಸಿದ್ದು, ಅವರಿಗೆ ತಲಾ 250 ರೂ. ಪರಿಹಾರ ಧನ ದೊರೆಯಲಿದೆ. ಇನ್ನು ದಿಲ್ಲಿಯಿಂದ ಲಕ್ನೋಗೆ ತೆರಳಿದ 500 ಪ್ರಯಾಣಿಕರಿಗೆ ತಲಾ 100 ರೂ. ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ನ ಹಿಂಭಾಗದಲ್ಲಿ ನೀಡಲಾಗಿರುವ ವಿಮಾದಾರರ ಲಿಂಕ್‌ಗೆ ಹೋಗಿ, ಪರಿಹಾರ ಪಡೆಯಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ವಿಮಾ ಕಂಪೆನಿಗಳ ಮೂಲಕವೇ ಪರಿಹಾರ ಮೊತ್ತ ಒದಗಿಸುವುದಾಗಿ ಐಆರ್‌ಸಿಟಿಸಿ ಹೇಳಿದೆ.
ಎಷ್ಟು ಗಂಟೆ ವಿಳಂಬವಾಗಿತ್ತು?
ಕಳೆದ ಶನಿವಾರ ಬೆಳಗ್ಗೆ ಸರಿಯಾಗಿ 6.10ಕ್ಕೆ ಲಕ್ನೋದಿಂದ ಹೊರಡಬೇಕಾಗಿದ್ದ ರೈಲು 9.55ಕ್ಕೆ ಹೊರಟಿತ್ತು. ಅದರಂತೆ ಮ. 12.25ಕ್ಕೆ ದಿಲ್ಲಿ ತಲುಪುವ ಬದಲು, 3.40ಕ್ಕೆ ತಲುಪಿತ್ತು. ತದನಂತರ, ದಿಲ್ಲಿ ಯಿಂದ ಅಪರಾಹ್ನ 3.35ಕ್ಕೆ ಹೊರಡುವ ಬದಲಿಗೆ, ಸಂಜೆ 5.30ಕ್ಕೆ ಹೊರಟು ರಾತ್ರಿ 11.30ಕ್ಕೆ ಲಕ್ನೋ ತಲು ಪಿತ್ತು. ನಿಗದಿಯಂತೆ ಇದು ರಾತ್ರಿ 10.05 ಕ್ಕೆ ಲಕ್ನೋ ತಲುಪಬೇಕಾಗಿತ್ತು. ಒಟ್ಟಾರೆ ರೈಲಿನ ಸಂಚಾರದಲ್ಲಿ 3 ಗಂಟೆಗೂ ಅಧಿಕ ಸಮಯದ ವಿಳಂಬವಾಗಿತ್ತು.