Advertisement

Indian Premier League: ಟಿ20 ಮತ್ತೇರಿಸಲು ದಶಪಡೆಗಳು ಸಜ್ಜು

12:29 AM Mar 21, 2024 | Team Udayavani |

ಮತ್ತೆ ವಾರ್ಷಿಕ ಟಿ20 ಅಬ್ಬರದ ಋತು ಬಂದಿದೆ. 16 ಆವೃತ್ತಿಗಳನ್ನು ಕಂಡಿರುವ ದೇಸೀ ಟಿ20 ಪಂದ್ಯಾವಳಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) 17ನೇ ಆವೃತ್ತಿಯ ಶುರುವಾತಿಗೆ ಕ್ಷಣಗಣನೆ ಆರಂಭವಾಗಿದೆ. ಇದೇ ಶುಕ್ರವಾರದಿಂದ ಅನಾವರಣಗೊಳ್ಳಲಿರುವ ಪಂದ್ಯಾವಳಿ 2 ತಿಂಗಳಿಗೂ ಮೀರಿ ಆಯೋಜನೆಗೊಂಡು ಮೇ 26ರಂದು ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ 10 ತಂಡಗಳು 74 ಪಂದ್ಯಗಳ ರಸದೌತಣವನ್ನು ಚುಟುಕು ಕ್ರಿಕೆಟ್‌ ಪ್ರೇಮಿಗಳಿಗೆ ಉಣಬಡಿಸಲಿವೆ.

Advertisement

ಈ ಹಿನ್ನೆಲೆಯಲ್ಲಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಎಲ್ಲ 10 ತಂಡಗಳ ಕಿರು ಪರಿಚಯ, ಸಾಮರ್ಥ್ಯ-ದೌರ್ಬಲ್ಯಗಳು, ಬಹುನಿರೀಕ್ಷೆಯ ಆಟಗಾರರು, ಹಿಂದಿನ ಸಾಧನೆ… ಇತ್ಯಾದಿ ವಿವರವನ್ನು ಇಲ್ಲಿ ನೀಡಲಾಗಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
ನಾಯಕ: ಫಾಫ್ ಡು ಪ್ಲೆಸಿಸ್‌
ಕಳೆದ ಹಲವು ವರ್ಷಗಳಿಂದ “ಕಪ್‌ ನಮ್ದೇ’ ಎಂಬ ಅಭಿಮಾನಿಗಳ ದೃಢ ನಂಬಿಕೆಯ ಹೊರತಾಗಿಯೂ ಇತಿಹಾಸ ನಿರ್ಮಿಸಲು ವಿಫ‌ಲವಾಗುತ್ತಲೇ ಇರುವ ತಂಡ ಆರ್‌ಸಿಬಿ. ಮರಳಿ ಯತ್ನ ಮಾಡುವುದರಲ್ಲೇನೂ ಹಿಂದೆ ಬಿದ್ದಿಲ್ಲ. ಈ ಬಾರಿ ಆರ್‌ಸಿಬಿ ವನಿತೆಯರು ಕಪ್‌ ಗೆದ್ದು ಬೀಗಿರುವುದರಿಂದ ಪುರುಷರ ತಂಡದ ಚಾರ್ಮ್ ಬದಲಾಗಿದೆ, ಅಥವಾ ಬದಲಾಗಬೇಕಿದೆ. ವನಿತೆಯರು ಗೆದ್ದಾಯಿತು, ನಾವು ಗೆಲ್ಲುವುದು ಯಾವಾಗ ಎಂಬ ಸಂಗತಿಯನ್ನು ಡು ಪ್ಲೆಸಿಸ್‌ ಪಡೆ ಸವಾಲಾಗಿ ಸ್ವೀಕರಿಸಬೇಕಿದೆ. ಆಗಷ್ಟೇ ಎರಡೂ ಕಪ್‌ ಆರ್‌ಸಿಬಿಯದ್ದಾಗಲು ಸಾಧ್ಯ.ಕಳೆದ ಋತುವಿನಲ್ಲಿ ಆರ್‌ಸಿಬಿ ಬ್ಯಾಟಿಂಗ್‌ ಸರದಿ ಡು ಪ್ಲೆಸಿಸ್‌, ಕೊಹ್ಲಿ ಮತ್ತು ಮ್ಯಾಕ್ಸ್‌ವೆಲ್‌ ಅವರನ್ನೇ ಹೆಚ್ಚು ನಂಬಿತ್ತು. ವನ್‌ಡೌನ್‌ನಲ್ಲಂತೂ ಸೂಕ್ತ ಆಟಗಾರರೇ ಇರಲಿಲ್ಲ. ಪಾಟಿದಾರ್‌ ಮಿಂಚಿದ್ದು ಕಡಿಮೆ. ಆದರೆ ಈ ಬಾರಿ ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಬಂದಿರುವುದರಿಂದ ಬ್ಯಾಟಿಂಗ್‌ ಸಮತೋಲನ ಗೋಚರಿಸುತ್ತಿದೆ. ಹಾಗೆಯೇ ಅಲ್ಜಾರಿ ಜೋಸೆಫ್ ಮತ್ತು ಲಾಕಿ ಫ‌ರ್ಗ್ಯುಸನ್‌ ಸೇರ್ಪಡೆಯಿಂದ ಬೌಲಿಂಗ್‌ ವಿಭಾಗವೂ ಬಲಿಷ್ಠವಾಗಿ ಕಾಣುತ್ತಿದೆ. ಉಳಿದಿರುವುದು ಅದೃಷ್ಟ’ದ ಆಟ ಮಾತ್ರ!
ತಂಡದ ಸಾಮರ್ಥ್ಯ: ಬಲಿಷ್ಠ ಓಪನಿಂಗ್‌, ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟ ಆ್ಯಂಡಿ ಫ್ಲವರ್‌ ಕೋಚಿಂಗ್‌.
ತಂಡದ ದೌರ್ಬಲ್ಯ: ಮೊದಲಾರ್ಧದ ಕೆಲವೇ ಬ್ಯಾಟರ್‌ಗಳನ್ನು ಹೆಚ್ಚು ನಂಬಿರುವುದು, ದೇಶಿ ಬ್ಯಾಟರ್‌ಗಳ ಕೊರತೆ, ಸ್ಪಿನ್‌ ದೌರ್ಬಲ್ಯ.
ಬಹುನಿರೀಕ್ಷೆಯ ಆಟಗಾರರು: ವಿರಾಟ್‌ ಕೊಹ್ಲಿ, ಕ್ಯಾಮರಾನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ರಜತ್‌ ಪಾಟಿದಾರ್‌, ವಿಲ್‌ ಜಾಕ್ಸ್‌.
3 ಸಲ ರನ್ನರ್ ಅಪ್‌

ಚೆನ್ನೈ ಸೂಪರ್‌ ಕಿಂಗ್ಸ್‌
ನಾಯಕ: ಮಹೇಂದ್ರ ಸಿಂಗ್‌ ಧೋನಿ
ಹಾಲಿ ಚಾಂಪಿಯನ್‌. ಒಂದು ಕಾಲದ ಟೀಮ್‌ ಆಫ್ ಡ್ಯಾಡ್ಸ್‌. ಕ್ಯಾಪ್ಟನ್‌ ಧೋನಿಯೇ ತಂಡದ ಕೇಂದ್ರಬಿಂದು. ಇವರ ಕ್ರಿಕೆಟ್‌ ಈಗ ಐಪಿಎಲ್‌ ಟು ಐಪಿಎಲ್‌ ಆಗಿರುವುದೇ ಇದಕ್ಕೆ ಕಾರಣ. ಧೋನಿ ಆಟವೇ ಅಭಿಮಾನಿಗಳಿಗೊಂದು ಹಬ್ಬ. ತಂಡದಲ್ಲಿ ಗಾಯಾಳುಗಳ ಸಮಸ್ಯೆ ಸಾಕಷ್ಟಿದೆ. ಆದರೆ ರಚಿನ್‌ ರವೀಂದ್ರ, ಡ್ಯಾರಿಲ್‌ ಮಿಚೆಲ್‌ ಸೇರ್ಪಡೆ, ಶಾದೂìಲ್‌ ಠಾಕೂರ್‌ ಅವರ ಪುನರಾಗಮನದಿಂದ ಈ ಶಕ್ತಿಶಾಲಿ ತಂಡ ಇನ್ನಷ್ಟು ಬಲಿಷ್ಠವಾಗಿ ಗೋಚರಿಸುತ್ತಿದೆ.
ತಂಡದ ಸಾಮರ್ಥ್ಯ: ಅನುಭವಿ ಆಲ್‌ರೌಂಡರ್, ಸ್ಪಿನ್ನರ್. ನಂ. 10ರ ತನಕ ವಿಸ್ತರಿಸಿರುವ ಬ್ಯಾಟಿಂಗ್‌ ಲೈನ್‌ಅಪ್‌.
ತಂಡದ ದೌರ್ಬಲ್ಯ: ಕೆಲವು ಆಟಗಾರರ ಕಳಪೆ ಫಾರ್ಮ್, ತವರಿನಾಚೆ ಸಾಧಾರಣ ಪ್ರದರ್ಶನ, ಗಾಯದ ಸಮಸ್ಯೆ ಪ್ರಮುಖ ಹಿನ್ನಡೆಯಾಗಿದೆ.
ಬಹುನಿರೀಕ್ಷೆಯ ಆಟಗಾರರು: ರಚಿನ್‌ ರವೀಂದ್ರ, ಡ್ಯಾರಿಲ್‌ ಮಿಚೆಲ್‌, ಶಿವಂ ದುಬೆ, ಋತುರಾಜ್‌ ಗಾಯಕ್ವಾಡ್‌.
5 ಬಾರಿ ಚಾಂಪಿಯನ್‌

ಡೆಲ್ಲಿ ಕ್ಯಾಪಿಟಲ್ಸ್‌
ನಾಯಕ: ರಿಷಭ್‌ ಪಂತ್‌
ರಿಷಭ್‌ ಪಂತ್‌ ನಾಯಕರಾಗಿ ಮರಳಿದ್ದರಿಂದ ಡೆಲ್ಲಿ ತಂಡಕ್ಕೊಂದು ನೈತಿಕ ಬಲ ಲಭಿಸಿದಂತಾಗಿದೆ. ಆದರೆ ಇವರ ಒಟ್ಟಾರೆ ಕ್ರಿಕೆಟ್‌ ಫಾರ್ಮ್’ ನಿರ್ಣಾಯಕ. ಕಳೆದ ವರ್ಷ ಪಂತ್‌ ಗೈರಲ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಸರಾಸರಿ 17.47ಕ್ಕೆ ಕುಸಿದಿತ್ತು. ಕಾಗದದಲ್ಲಿ ಡೆಲ್ಲಿಯ ಬ್ಯಾಟಿಂಗ್‌ ಸರದಿ ಬಲಿಷ್ಠ. ಆದರೆ ಅಂಗಳದಲ್ಲಿ ರನ್‌ ಹರಿಯಬೇಕಿದೆ. ಸ್ಪಿನ್ನರ್ ಬೌಲಿಂಗ್‌ ಮ್ಯಾಜಿಕ್‌ ಮಾಡಬೇಕಿದೆ. ಕಪ್‌ ಗೆಲ್ಲದ ತಂಡಗಳ ಸಾಲಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ಸದ್ಯಕ್ಕಂತೂ ನೆಚ್ಚಿನ ತಂಡವಾಗಿ ಕಾಣಿಸಿಲ್ಲ.
ತಂಡದ ಸಾಮರ್ಥ್ಯ: ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟಿಂಗ್‌ ಸರದಿ, ಹೊಡಿಬಡಿ ಆಟಗಾರ ಸಂಖ್ಯೆ ಹೆಚ್ಚಿದೆ.
ತಂಡದ ದೌರ್ಬಲ್ಯ: ಸಾಮಾನ್ಯ ದರ್ಜೆಯ ಬೌಲಿಂಗ್‌, ಓಪನಿಂಗ್‌ ವೈಫ‌ಲ್ಯ, ಕೆಲವು ಬ್ಯಾಟರ್‌ಗಳಿಗೆ ತಂಡ ಅವಲಂಬಿತ.
ಬಹುನಿರೀಕ್ಷೆಯ ಆಟಗಾರರು: ಮಿಚೆಲ್‌ ಮಾರ್ಷ್‌, ರಿಷಭ್‌ ಪಂತ್‌, ಕುಲದೀಪ್‌ ಯಾದವ್‌, ಟ್ರಿಸ್ಟಾನ್‌ ಸ್ಟಬ್ಸ್.
1 ಸಲ ರನ್ನರ್ ಅಪ್‌

Advertisement

ಪಂಜಾಬ್‌ ಕಿಂಗ್ಸ್‌
ನಾಯಕ: ಶಿಖರ್‌ ಧವನ್‌
ಐಪಿಎಲ್‌ನ ನತದೃಷ್ಟ ತಂಡ. ನಾಯಕ ಶಿಖರ್‌ ಧವನ್‌ ಮೊದಲಿನ ಚಾರ್ಮ್ ಮತ್ತು ಫಾರ್ಮ್ ಹೊಂದಿರುವುದು ಅನುಮಾನ. ತಂಡದ ಯಶಸ್ಸು ಇಂಗ್ಲೆಂಡ್‌ ಕ್ರಿಕೆಟಿಗರಾದ ಸ್ಯಾಮ್‌ ಕರನ್‌, ಲಿವಿಂಗ್‌ಸ್ಟೋನ್‌, ಬೇರ್‌ಸ್ಟೊ ಅವರ ಸಾಧನೆಯನ್ನು ಅವಲಂಬಿಸಿದೆ. ಬೌಲಿಂಗ್‌ ವಿಭಾಗ ಸಾಮಾನ್ಯ. ಹರ್ಷಲ್‌ ಪಟೇಲ್‌, ರಬಾಡ, ಅರ್ಷದೀಪ್‌, ಕಾವೇರಪ್ಪ ಹೆಚ್ಚು ಘಾತಕವಾಗಿ ಪರಿಣಮಿಸಬೇಕಿದೆ.
ತಂಡದ ಸಾಮರ್ಥ್ಯ: ಬಲಿಷ್ಠ ಓಪನಿಂಗ್‌ ಹಾಗೂ ಮಿಡ್ಲ್ ಆರ್ಡರ್‌.
ತಂಡದ ದೌರ್ಬಲ್ಯ: ಫಿನಿಶರ್‌ಗಳ ಕೊರತೆ ಎದ್ದು ಕಾಣುತ್ತಿದೆ.
ಬಹುನಿರೀಕ್ಷೆಯ ಆಟಗಾರರು: ಪ್ರಭ್‌ಸಿಮ್ರಾನ್‌ ಸಿಂಗ್‌, ವಿದ್ವತ್‌ ಕಾವೇರಪ್ಪ, ಸಿಕಂದರ್‌ ರಾಝ.
1 ಸಲ ರನ್ನರ್ ಅಪ್‌

ಮುಂಬೈ ಇಂಡಿಯನ್ಸ್‌
ನಾಯಕ: ಹಾರ್ದಿಕ್‌ ಪಾಂಡ್ಯ
ಹಾರ್ದಿಕ್‌ ಪಾಂಡ್ಯ ಮನೆಗೆ ಮರಳಿದ್ದಾರೆ, ಅದೂ ಯಜಮಾನನಾಗಿ. ಇದರಿಂದ ಐಪಿಎಲ್‌ನ ಅತ್ಯಂತ ಯಶಸ್ವಿ ನಾಯಕರಾಗಿರುವ ರೋಹಿತ್‌ ಶರ್ಮ ಮತ್ತು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಅಸಮಾಧಾನ ವಾಗಿದೆ. ಎಲ್ಲೂ ಭಿನ್ನಾಭಿಪ್ರಾಯ ತಲೆದೋರದಂತೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತಂಡದಲ್ಲಿ ಧನಾತ್ಮಕ ವಾತಾವರಣ’ ರೂಪಿಸಬೇಕಾದ ಅತೀ ದೊಡ್ಡ ಹೊಣೆಗಾರಿಕೆ ಪಾಂಡ್ಯ ಮೇಲಿದೆ. ತಂಡವೇನೋ ಸಂತುಲಿತವಾಗಿದೆ. ಆದರೆ ಗತ ವೈಭವ ಮರಳಬೇಕಿದೆ.
ತಂಡದ ಸಾಮರ್ಥ್ಯ: ಬಲವಾದ ಬ್ಯಾಟಿಂಗ್‌ ಹಾಗೂ ಘಾತಕ ಬೌಲಿಂಗ್‌ ಲೈನ್‌ಅಪ್‌. ಐಪಿಎಲ್‌ನ ಅತೀ ಯಶಸ್ವಿ ತಂಡವೆಂಬ ವಿಶ್ವಾಸ.
ತಂಡದ ದೌರ್ಬಲ್ಯ: ಪ್ರಮುಖ ಆಟಗಾರರಿಗೆ ಎದುರಾಗಿರುವ ಗಾಯದ ಸಮಸ್ಯೆ, ಆರಂಭಿಕ ಪಂದ್ಯಗಳಲ್ಲಿ ಸೋಲುವ ಸಂಪ್ರದಾಯ.
ಬಹುನಿರೀಕ್ಷೆಯ ಆಟಗಾರರು: ಇಶಾನ್‌ ಕಿಶನ್‌, ಟಿಮ್‌ ಡೇವಿಡ್‌, ಜೆರಾಲ್ಡ್‌ ಕೋಜಿ, ತಿಲಕ್‌ ವರ್ಮ.5 ಬಾರಿ ಚಾಂಪಿಯನ್‌

ಕೋಲ್ಕತ್ತ ನೈಟ್‌ರೈಡರ್
ನಾಯಕ: ಶ್ರೇಯಸ್‌ ಅಯ್ಯರ್‌
ರಿಚಾಂಪಿಯನ್ಸ್‌ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ತಂಡ. ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್, ಆಲ್‌ರೌಂಡರ್ ತಂಡದ ಆಸ್ತಿ. ಇಂಥ ಸಂಪನ್ಮೂಲವಿದ್ದೂ ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳದೆ ದಶಕದಿಂದಲೂ ಹಿನ್ನಡೆ ಕಾಣುತ್ತ ಬಂದಿದೆ. ಶ್ರೇಯಸ್‌ ಅಯ್ಯರ್‌ ಪುನರಾಗಮನ, ಇವರ ನಾಯಕತ್ವ, ರಾಜಕೀಯ ಬಿಟ್ಟು ಪೂರ್ತಿಯಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿರುವ ಗೌತಮ್‌ ಗಂಭೀರ್‌ ಅವರ ಮೆಂಟರ್‌ ಪಾತ್ರ ನಿರ್ಣಾಯಕವಾಗಲಿದೆ. ಎಲ್ಲ ವಿಭಾಗಗಳಲ್ಲಿಯೂ ಉತ್ತಮ ಆಟಗಾರರನ್ನು ತಂಡ ಹೊಂದಿದೆ.
ತಂಡದ ಸಾಮರ್ಥ್ಯ: ಹಾರ್ಡ್‌ ಹಿಟ್ಟಿಂಗ್‌ ಆಲ್‌ರೌಂಡರ್‌ ಹಾಗೂ ಸ್ಪಿನ್ನರ್‌ಗಳ ದೊಡ್ಡ ಪಡೆ. ಪಂದ್ಯ ಗೆಲ್ಲಿಸಬಲ್ಲ ಆಟಗಾರರಿದ್ದಾರೆ.
ತಂಡದ ದೌರ್ಬಲ್ಯ: ಒಂದು ತಂಡವಾಗಿ ಆಡುವಲ್ಲಿ, ಒತ್ತಡ ನಿಭಾಯಿಸುವಲ್ಲಿ ವೈಫ‌ಲ್ಯ. ಕೈಕೊಡುವ ಬ್ಯಾಟರ್‌ಗಳು.
ಬಹುನಿರೀಕ್ಷೆಯ ಆಟಗಾರರು: ರಿಂಕು ಸಿಂಗ್‌, ಮಿಚೆಲ್‌ ಸ್ಟಾರ್ಕ್‌, ಆ್ಯಂಡ್ರೆ ರಸೆಲ್‌, ನಿತೀಶ್‌ ರಾಣಾ.
2 ಬಾರಿ ಚಾಂಪಿಯನ್‌

ಸನ್‌ರೈಸರ್ ಹೈದರಾಬಾದ್‌
ನಾಯಕ: ಪ್ಯಾಟ್‌ ಕಮಿನ್ಸ್‌
ಕಳೆದ ವರ್ಷ ಪಾತಾಳ ಕಂಡ ತಂಡವೀಗ ಕಾಗದದಲ್ಲಿ ಎಂದಿಗಿಂತ ಹೆಚ್ಚು ಬಲಾಡ್ಯವಾಗಿ ಗೋಚರಿಸುತ್ತಿದೆ. ವಿಶ್ವಕಪ್‌ ವಿಜೇತ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರನ್ನು ದಾಖಲೆ ಮೊತ್ತಕ್ಕೆ ಖರೀದಿಸಿದೆ. ಇವರ ವರ್ಲ್ಡ್ ಕಪ್‌ ಫೈನಲ್‌ ಲಕ್‌ ಹೈದರಾಬಾದ್‌ಗೆ ವಿಸ್ತರಿಸೀತೇ ಎಂಬುದು ಬಹು ದೊಡ್ಡ ನಿರೀಕ್ಷೆ. ವಿಶ್ವಕಪ್‌ ಫೈನಲ್‌ ಹೀರೋ ಟ್ರ್ಯಾವಿಸ್‌ ಹೆಡ್‌ ಕೂಡ ಇದ್ದಾರೆ.
ತಂಡದ ಸಾಮರ್ಥ್ಯ: ಎಂದಿಗಿಂತ ಹೆಚ್ಚು ಬಲಿಷ್ಠಗೊಂಡ ಬ್ಯಾಟಿಂಗ್‌ ಸರದಿ, ಕಮಿನ್ಸ್‌ ನಾಯಕತ್ವ.
ತಂಡದ ದೌರ್ಬಲ್ಯ: ಮಧ್ಯಮ ಕ್ರಮಾಂಕ ಕೈಕೊಡುವುದು ಜಾಸ್ತಿ.
ಬಹುನಿರೀಕ್ಷೆಯ ಆಟಗಾರರು: ಟ್ರ್ಯಾವಿಸ್‌ ಹೆಡ್‌, ವನಿಂದು ಹಸರಂಗ, ಪ್ಯಾಟ್‌ ಕಮಿನ್ಸ್‌.
1 ಬಾರಿ ಚಾಂಪಿಯನ್‌

ರಾಜಸ್ಥಾನ್‌ ರಾಯಲ್ಸ್‌
ನಾಯಕ: ಸಂಜು ಸ್ಯಾಮ್ಸನ್‌
ಐಪಿಎಲ್‌ನ ಪ್ರಪ್ರಥಮ ಚಾಂಪಿಯನ್‌. ಸದಾ ಬಲಾಡ್ಯವಾಗಿಯೇ ಉಳಿದಿರುವ ತಂಡ. 2022ರಿಂದೀಚೆ ಅತ್ಯಧಿಕ ಪಂದ್ಯ ಗೆದ್ದವರ ಯಾದಿಯಲ್ಲಿ ಜಂಟಿ ದ್ವಿತೀಯ ಸ್ಥಾನ. ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌, ಹೆಟ್‌ಮೈರ್‌ ಅವರನ್ನೊಳಗೊಂಡ ಬ್ಯಾಟಿಂಗ್‌ ಲೈನ್‌ಅಪ್‌, ಧ್ರುವ ಜುರೆಲ್‌ ಅವರಿಂದ ಆಕರ್ಷಣೆ ಹೆಚ್ಚಿಸಿಕೊಂಡಿದೆ. ವಿಶ್ವ ದರ್ಜೆಯ ಮೂವರು ಸ್ಪಿನ್ನರ್‌ಗಳಾದ ಅಶ್ವಿ‌ನ್‌, ಚಹಲ್‌, ಝಂಪ ಬೌಲಿಂಗ್‌ ವಿಭಾಗದ ಆಸ್ತಿ. ಈ ಬಾರಿ ಬ್ಯಾಕ್‌ಅಪ್‌ ಆಟಗಾರರನ್ನಷ್ಟೇ ಖರೀದಿಸಿ ಜಾಣ್ಮೆ ಮೆರೆದಿದೆ.
ತಂಡದ ಸಾಮರ್ಥ್ಯ: ಚಾಂಪಿಯನ್‌ ಆಟಗಾರರನ್ನೇ ಹೊಂದಿರುವ ಸಮತೋಲಿತ ಆಟಗಾರರ ಪಡೆ.
ತಂಡದ ದೌರ್ಬಲ್ಯ: ಆರಂಭದಲ್ಲಿ ಗೆಲ್ಲುತ್ತ ಹೋದರೂ ನಿರ್ಣಾಯಕ ಪಂದ್ಯಗಳಲ್ಲಿ ಮುಗ್ಗರಿಸುವುದು .
ಬಹುನಿರೀಕ್ಷೆಯ ಆಟಗಾರರು: ಯಶಸ್ವಿ ಜೈಸ್ವಾಲ್‌, ಆರ್‌. ಅಶ್ವಿ‌ನ್‌, ನಾಂಡ್ರೆ ಬರ್ಗರ್‌, ಧ್ರುವ್‌ ಜುರೆಲ್‌.
1 ಸಲ ಚಾಂಪಿಯನ್‌

ಗುಜರಾತ್‌ ಟೈಟಾನ್ಸ್‌
ನಾಯಕ: ಶುಭಮನ್‌ ಗಿಲ್‌
ಸತತ ಎರಡೂ ಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡ. ಮೊದಲ ಪ್ರವೇಶದಲ್ಲೇ ಟ್ರೋಫಿ ಎತ್ತಿದ ಹೆಗ್ಗಳಿಕೆ. ಬಳಿಕ ಮತ್ತೂಮ್ಮೆ ಫೈನಲ್‌ಗೆ ಲಗ್ಗೆ. ಆದರೆ ಹಾರ್ದಿಕ್‌ ಪಾಂಡ್ಯ ಅವರ ನಾಯಕತ್ವದಿಂದ ವಂಚಿತವಾಗಿದೆ. ಕಳೆದ ವರ್ಷ ಆರೆಂಜ್‌ ಕ್ಯಾಪ್‌ ಏರಿಸಿಕೊಂಡ ಶುಭಮನ್‌ ಗಿಲ್‌ ಅವರ ಕ್ಯಾಪ್ಟನ್ಸಿಗೆ ಸವಾಲು ಎದುರಾಗಿದೆ. ಭಾರತೀಯರನ್ನೇ ಒಳಗೊಂಡ ಮಧ್ಯಮ ಕ್ರಮಾಂಕದಲ್ಲಿ ಅನುಭವಿಗಳ ಕೊರತೆ ಇದೆ. ಮೊಹಮ್ಮದ್‌ ಶಮಿ ಅನುಪಸ್ಥಿತಿ ಹಿನ್ನಡೆಯಾಗಿ ಪರಿಣಮಿಸಬಹುದು.
ತಂಡದ ಸಾಮರ್ಥ್ಯ: ತಂಡದ ಸಾಮರ್ಥ್ಯ: ಬಲಿಷ್ಠ ಓಪನಿಂಗ್‌, ಉತ್ತಮ ಫಿನಿಶಿಂಗ್‌. ಅನುಭವಿಗಳ ಜತೆಗೆ ಯುವಕರ ಬಲ.
ತಂಡದ ದೌರ್ಬಲ್ಯ: ನಂಬಿಕಸ್ಥ ಮಧ್ಯಮ ಕ್ರಮಾಂಕದ ಆಟಗಾರರ ಕೊರತೆ, ಪ್ರಮುಖ ವೇಗಿ ಮೊಹಮ್ಮದ್‌ ಶಮಿ ಗೈರು.
ಬಹುನಿರೀಕ್ಷೆಯ ಆಟಗಾರರು: ಶುಭಮನ್‌ ಗಿಲ್‌, ರಶೀದ್‌ ಖಾನ್‌, ರಾಹುಲ್‌ ತೆವಾಟಿಯ.
1 ಸಲ ಚಾಂಪಿಯನ್‌

ಲಕ್ನೋ ಸೂಪರ್‌ ಜೈಂಟ್ಸ್‌
ನಾಯಕ: ಕೆ.ಎಲ್‌. ರಾಹುಲ್‌
ಮೊದಲೆರಡೂ ಐಪಿಎಲ್‌ಗ‌ಳಲ್ಲಿ 3ನೇ ಸ್ಥಾನ ಪಡೆದ ಸಾಧನೆ. 7ನೇ ಕ್ರಮಾಂಕದ ತನಕ ಉತ್ತಮ ಬ್ಯಾಟರ್‌ಗಳನ್ನು ಹೊಂದಿದೆ. ರಾಹುಲ್‌ ನಾಯಕತ್ವವೂ ಉತ್ತಮ ಮಟ್ಟದಲ್ಲಿದೆ. ಆದರೆ ಅವರ ಫಿಟ್‌ನೆಸ್‌ ಮತ್ತು ಫಾರ್ಮ್ ಬಗ್ಗೆ ಅನುಮಾನ ಇದ್ದೇ ಇದೆ. ಮಾರ್ಕ್‌ ವುಡ್‌ ಬದಲು ವೆಸ್ಟ್‌ ಇಂಡೀಸ್‌ನ ಶಮರ್‌ ಜೋಸೆಫ್ ಬಂದಿರುವುದು ಉತ್ತಮ ಹೆಜ್ಜೆಯಾದೀತು. ಬೌಲಿಂಗ್‌ ವಿಭಾಗದಲ್ಲಿ ಭಾರತೀಯರೇ ತುಂಬಿದ್ದಾರೆ.
ತಂಡದ ಸಾಮರ್ಥ್ಯ: ಅತ್ಯಂತ ಬಲಿಷ್ಠವಾಗಿರುವ ಮಧ್ಯಮ ಕ್ರಮಾಂಕ.
ತಂಡದ ದೌರ್ಬಲ್ಯ: ಸೂಕ್ತ ಬ್ಯಾಕಪ್‌, ಇಂಪ್ಯಾಕ್ಟ್ ಆಟಗಾರರ ಕೊರತೆ.
ಬಹುನಿರೀಕ್ಷೆಯ ಆಟಗಾರರು: ದೇವದತ್ತ ಪಡಿಕ್ಕಲ್‌, ಶಮರ್‌ ಜೋಸೆಫ್, ಕ್ವಿಂಟನ್‌ ಡಿ ಕಾಕ್‌.
2 ಬಾರಿ ನಾಕೌಟ್‌

Advertisement

Udayavani is now on Telegram. Click here to join our channel and stay updated with the latest news.

Next