ಹೊಸದಿಲ್ಲಿ: ಜಗತ್ತಿನಲ್ಲೇ ಎರಡನೇ ಅತಿಹೆಚ್ಚು ಜನಸಂಖ್ಯೆಯಿರುವ ದೇಶ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಇನ್ನೇನು ಕೆಲವೇ ವರ್ಷಗಳಲ್ಲಿ ಜನಸಂಖ್ಯೆ ಇಳಿಮುಖವಾಗಲಿದೆ! ಸ್ಟಾನ್‌ಫೋರ್ಡ್ ನ ಅಧ್ಯಯನವೊಂದು ಈ ವಿಚಾರವನ್ನು ಬಹಿರಂಗಪಡಿಸಿದೆ. ಮುಂದಿನ 78 ವರ್ಷಗಳಲ್ಲಿ ಭಾರತದ ಜನಸಂಖ್ಯೆಯು ಸುಮಾರು 41 ಕೋಟಿಯಷ್ಟು ಕಡಿಮೆಯಾಗಲಿದೆ ಎಂದು ಈ ವರದಿ ತಿಳಿಸಿದೆ. ಮುಂಬರುವ ವರ್ಷಗಳಲ್ಲಿ ಭಾರತದ ಜನಸಂಖ್ಯಾ ಸಾಂದ್ರತೆಯು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಪ್ರಸ್ತುತ ಮೇಲ್ನೋಟಕ್ಕೆ ಭಾರತ ಮತ್ತು ಚೀನದ ಜನಸಂಖ್ಯೆಯಲ್ಲಿ ಸಾಮ್ಯತೆ ಕಂಡುಬಂದರೂ, ಅವುಗಳ ಸಾಂದ್ರತೆಯಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಭಾರತದಲ್ಲಿ ಪ್ರತಿ ಚದರ ಕಿಮೀನಲ್ಲಿ ಸರಾಸರಿ 476 ಮಂದಿ ಜೀವಿಸುತ್ತಿದ್ದರೆ, ಚೀನದಲ್ಲಿ ಇದು 148 ಆಗಿದೆ. 2100ನೇ ಇಸವಿಯ ವೇಳೆಗೆ ಭಾರತದ ಜನಸಂಖ್ಯಾ ಸಾಂದ್ರತೆಯು ಪ್ರತಿ ಚದರ ಕಿ.ಮೀ.ಗೆ ಸರಾಸರಿ 335 ಆಗಲಿದೆ. ಹಲವು ದೇಶಗಳಲ್ಲಿ: ಭಾರತ ಮಾತ್ರವಲ್ಲದೇ ಚೀನ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಇದೇ ರೀತಿಯ ಬೆಳವಣಿಗೆ ಉಂಟಾಗಲಿದೆ. ಚೀನದ ಜನಸಂಖ್ಯೆ 2100ರ ವೇಳೆಗೆ ಬರೋಬ್ಬರಿ 93.2 ಕೋಟಿಯಷ್ಟು ಇಳಿಕೆಯಾಗಿ, 49.4 ಕೋಟಿಗೆ ತಲುಪಲಿದೆ. ಇಳಿಮುಖವಾಗುತ್ತಿರುವ ಫಲವತ್ತತೆ ಪ್ರಮಾಣವನ್ನು ಆಧರಿಸಿ ಈ ಲೆಕ್ಕ ಹಾಕಲಾಗಿದೆ ಎಂದು ವರದಿ ಹೇಳಿದೆ.
ಎಲ್ಲೆಲ್ಲಿ ಇಳಿಕೆಯಾಗಬಹುದು?
ಭಾರತ : 32.3%
ಚೀನ : 64.6%
ರಷ್ಯಾ : 46.5%
ಬ್ರೆಜಿಲ್ : 45.2%
ಅಮೆರಿಕ : 18.6%
ಆಸ್ಟ್ರೇಲಿಯಾ : 1.3%
ಎಲ್ಲೆಲ್ಲಿ ಹೆಚ್ಚಳವಾಗಬಹುದು?
ಕಾಂಗೋ : 73.7%
ನೈಜೀರಿಯಾ : 51.4%
ಕೆನಡಾ : 0.6%
ಭಾರತದ ಪ್ರಸ್ತುತ ಜನಸಂಖ್ಯೆ : 141.2 ಕೋಟಿ
2100ರ ವೇಳೆಗೆ ಭಾರತದ ಜನಸಂಖ್ಯೆ ಎಷ್ಟಾಗಲಿದೆ? 100.3 ಕೋಟಿ
78 ವರ್ಷಗಳಲ್ಲಿ ಇಳಿಕೆಯಾಗ ಲಿರುವ ಭಾರತದ ಜನಸಂಖ್ಯೆ : 41ಕೋಟಿ
ಜಗತ್ತಿನ ಜನಸಂಖ್ಯೆ ಈಗಿರುವ 794 ಕೋಟಿಯಿಂದ 704 ಕೋಟಿಗೆ ಇಳಿಕೆ ನಿರೀಕ್ಷೆ