Advertisement
11 ವರ್ಷದಲ್ಲಿ ಅಪಘಾತಕ್ಕೊಳಗಾದ ಅವನಿ ಲಖೇರಾ :
Related Articles
Advertisement
ಪ್ರಮೋದ್ ಭಗತ್‌ಗೆ ಪೋಲಿಯೋ ಅಡ್ಡಿಯಾಗಲಿಲ್ಲ : ಪುರುಷರ ಎಸ್‌ಎಲ್3 ಎಂಬ ಶೀರ್ಷಿಕೆಯಡಿ ವಿಶ್ವ ನಂ.1 ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ದೈಹಿಕ ನ್ಯೂನತೆ ಬರುತ್ತದೆ. ಅಂದರೆ ಸೊಂಟದಿಂದ ಕೆಳಭಾಗ ತುಸು ದುರ್ಬಲವಾಗಿರುತ್ತದೆ. ಆದರೆ ನಿಂತುಕೊಂಡೇ ಸ್ಪರ್ಧಿಸಲು ಸಾಧ್ಯವಿದೆ. ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಹೊಂದಿರುವ ಭಗತ್, ಸೆ.4ರಂದು ಬಂಗಾರ ಗೆದ್ದು ಬಂಗಾರದಂತೆ ಹೊಳೆದಿದ್ದಾರೆ.
ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ ಎಂಬ ಊರಿಗೆ ಸೇರಿರುವ ಭಗತ್, ಪ್ರಸ್ತುತ ಒಡಿಶಾದ ಭುವನೇಶ್ವರದಲ್ಲಿದ್ದಾರೆ. ಅವರು ಐದನೇ ವರ್ಷದಲ್ಲಿ ಪೋಲಿಯೋಗೆ ತುತ್ತಾದರು. ಪರಿಣಾಮ ಎಡಗಾಲಿನಲ್ಲಿ ತುಸು ಊನ ಉಂಟಾಯಿತು. 13ನೇ ವರ್ಷದಲ್ಲಿ ನೆರೆಹೊರೆಯವರು ಬ್ಯಾಡ್ಮಿಂಟನ್ ಆಡುವುದನ್ನು ನೋಡಿ ಭಗತ್ ಆಕರ್ಷಿತರಾದರು. ಪರಿಣಾಮ ಈಗವರು ವಿಶ್ವದ ಶ್ರೇಷ್ಠ ಶಟ್ಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಅರ್ಜುನ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಭವಿನಾ ಹುಟ್ಟಿ 12 ತಿಂಗಳಿಗೇ ಪೋಲಿಯೋ :
ಟೇಬಲ್ ಟೆನಿಸ್ ಆಟಗಾರ್ತಿ ಭವಿನಾಬೆನ್ ಪಟೇಲ್ ಈ ಬಾರಿ ಬೆಳ್ಳಿ ಗೆಲ್ಲಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆಕೆ ಟಿಟಿ ಸಿ4 ವಿಭಾಗದಲ್ಲಿ ಫೈನಲ್‌ಗೇರಿ ಅಲ್ಲಿ ಸೋತು ಬೆಳ್ಳಿಗೆ ಸಮಾಧಾನಪಟ್ಟರು. ಈ ಸಾಧನೆ ಸುಮ್ಮಸುಮ್ಮನೆ ಆಗಿದ್ದಲ್ಲ. ಭವಿನಾ (34) ಗುಜರಾತ್‌ನ ಮೆಹ್ಸಾನ ಜಿಲ್ಲೆಯ ಸುಂಧಿಯ ಎಂಬ ಹಳ್ಳಿಯಲ್ಲಿ ಜನಿಸಿದರು. ಹುಟ್ಟಿ ಕೇವಲ 12 ತಿಂಗಳಾಗಿದ್ದಾಗ ಪೋಲಿಯೋ ಬಂದು ಆಕೆಯ ಎರಡೂ ಕಾಲುಗಳು ನಿರ್ಬಲಗೊಂಡಿದ್ದವು. ಈ ಸ್ಥಿತಿಯಲ್ಲೇ ಬೆಳೆದ ಅವರಿಗೆ ಟೇಬಲ್ ಟೆನಿಸ್ ಎಂಬ ಕ್ರೀಡೆಯಿದೆ, ಭವಿಷ್ಯ ಕಂಡುಕೊಳ್ಳಬಹುದು ಎಂಬ ಬಗ್ಗೆ ಅರಿವೇ ಇರಲಿಲ್ಲ. 2005ರಲ್ಲಿ ಕಂಪ್ಯೂಟರ್ ಸೈನ್ಸ್ ಕಲಿಯಲು ಅಹ್ಮದಾಬಾದ್‌ಗೆ ತೆರಳಿದ್ದಾಗ ದೃಷ್ಟಿದೋಷ ಹೊಂದಿದ್ದ ಮಕ್ಕಳು ಟಿಟಿ ಆಡುವುದನ್ನು ನೋಡಿದರು. 2008ರ ಹೊತ್ತಿಗೆ ಟಿಟಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಆ ಹೊತ್ತಿಗೆ ಊಟ, ನಿದ್ರೆಯನ್ನೂ ಮರೆತು ಟಿಟಿಯಲ್ಲಿ ಮುಳುಗಿದರು. 2011ರಲ್ಲಿ ಬ್ಯಾಂಕಾಕ್‌ನಲ್ಲಿ ಬೆಳ್ಳಿ ಗೆದ್ದ ನಂತರ ಅವರ ಜೀವನವೇ ಬದಲಾಯಿತು.
ಎತ್ತರೆತ್ತರಕ್ಕೆ ಜಿಗಿಯುತ್ತಲೇ ಇದ್ದಾರೆ ನಿಶಾದ್ :
ನಿಶಾದ್ ಕುಮಾರ್ ಎತ್ತರ ಜಿಗಿತ ಟಿ47 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 21 ವರ್ಷದ ನಿಶಾದ್ ಹಿಮಾಚಲಪ್ರದೇಶದ ಉನಾದವರು. 8ನೇ ವಯಸ್ಸಿನಲ್ಲಿ ಟ್ರ್ಯಾಕ್ಟರ್‌ಗೆ ಸಿಲುಕಿ ಬಲಗೈ ಕಳೆದುಕೊಂಡರು. ಅದಾಗಿ ಎರಡೇ ವರ್ಷಕ್ಕೆ ಅಂದರೆ 2009ರಿಂದ ಪ್ಯಾರಾ ಆ್ಯತ್ಲೆಟಿಕ್ಸ್ ತರಬೇತಿ ಆರಂಭಿಸಿದರು. ಈ ಕ್ರೀಡೆಯಲ್ಲಿ ಬೆಳೆಯುತ್ತಲೇ ಸಾಗಿದರು. ಈ ವರ್ಷ ಪ್ಯಾರಾಲಿಂ
ಪಿಕ್ಸ್‌ಗೆ ಬೆಂಗಳೂರಿನ ಸಾಯ್ ಕೇಂದ್ರದಲ್ಲಿ ತರಬೇತಿ ನಡೆಸುತ್ತಿದ್ದಾಗಲೇ ಕೊರೊನಾ ಸಂಕಟಕ್ಕೆ ಸಿಲುಕಿದರು. ಅವೆಲ್ಲವನ್ನೂ ಮೀರಿನಿಂತ ಪರಿಣಾಮ ಈ ವರ್ಷ ಪ್ಯಾರಾಲಿಂಪಿಕ್ಸ್ ಸೇರಿ ಒಟ್ಟು 2 ಬೆಳ್ಳಿ ಪದಕ ಗೆದ್ದಿದ್ದಾರೆ.
ಎಡಗಾಲಿಲ್ಲದ ನೋವಿನ ನಡುವೆ ಚಿನ್ನದ ಗೆಲುವು :
ಹರಿಯಾಣದ ಸುಮಿತ್ ಆಂತಿಲ್ ಅವರು ಆ.30ರಂದು ಜಾವೆಲಿನ್ “ಎಫ್ 64′ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಹುಟ್ಟಿದ್ದು ಹರಿಯಾಣದ ಸೋನೆಪತ್ ಜಿಲ್ಲೆಯ ಖೆÌರದಲ್ಲಿ. 2015ರಲ್ಲಿ ಅವರಿಗೆ 17 ವರ್ಷವಾಗಿತ್ತು. ಆ ವೇಳೆ ನಡೆದ ಬೈಕ್ ಅಪಘಾತ ವೊಂದು ಬದುಕಿನ ದುರಂತವೊಂದಕ್ಕೆ ಕಾರಣವಾಯಿತು. ಪರಿಣಾಮ ಎಡಗಾಲಿನ ಮಂಡಿಯ ಕೆಳಭಾಗ ಕತ್ತರಿಸಿಹೋಯಿತು. ಹಾಗೆಂದು ಅವರು ಸುಮ್ಮನೆ ಕುಳಿತು ಕೊಳ್ಳ ಲಿಲ್ಲ. 2017ರಲ್ಲಿ ಪ್ಯಾರಾ ಆ್ಯತ್ಲೆಟಿಕ್ಸ್ ಶುರು ಮಾಡಿದರು. ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ 68.55 ಮೀ. ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದರು. ಗಮನಿಸಿ ಕೇವಲ 7 ವರ್ಷದವರಿದ್ದಾಗ ತಂದೆ ರಾಜ್‌ಕುಮಾರ್‌ರನ್ನು ಸುಮಿತ್ ಕಳೆದುಕೊಂಡಿದ್ದರು.
ಹಿಮ್ಮಡಿಯ ಊನವನ್ನು ಮೀರಿ ನಿಂತ ಸುಹಾಸ್ :
ಸುಹಾಸ್ ಲಾಳನಕೆರೆ ಯತಿರಾಜ್…. ಇಡೀ ದೇಶದಲ್ಲಿ ಈ ಹೆಸರು ಜನಪ್ರಿಯ. ಒಬ್ಬ ಐಎಎಸ್ ಅಧಿಕಾರಿಯಾಗಿದ್ದುಕೊಂಡು ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಬಿಡುವು ಮಾಡಿಕೊಂಡು; ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇವರು ಹುಟ್ಟಿದ್ದು 1983ರಲ್ಲಿ, ಜನ್ಮದಿಂದಲೇ ಒಂದು ಕಾಲಿನ ಹಿಮ್ಮಡಿಯಲ್ಲಿ ಊನವಿದೆ. ಆದ್ದರಿಂದ ಎರಡೂ ಕಾಲುಗಳಲ್ಲಿ ಸಮತೋಲನವಿಲ್ಲ. ಆದರೆ ಅವರ ಹೆತ್ತವರು ಮಗನನ್ನು ಈ ಕೊರತೆ ಕಾಡದಂತೆ ಬೆಳೆಸಿದರು. ಅರ್ಥಾತ್ ಸಹಜ ಸಾಮರ್ಥ್ಯದ ಮಕ್ಕಳೊಂದಿಗೆ ಪೂರ್ಣವಾಗಿ ಬೆರೆಯಲು ಬಿಟ್ಟರು. ಆಡಲು, ಓಡಲು ಪ್ರೋತ್ಸಾಹಿಸಿದರು. ಪರಿಣಾಮ ಇಂದು ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದಿದ್ದಾರೆ. 2004ರಲ್ಲಿ ಸುರತ್ಕಲ್ ಎನ್‌ಐಟಿಯಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಮುಗಿಸಿದರು. 2007ರಲ್ಲಿ ಐಎಎಸ್ ಮುಗಿಸಿ, ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಗೌತಮಬುದ್ಧ ನಗರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾರೆ. ತನ್ನ ಅಷ್ಟೂ ಸಾಧನೆಗೆ ತಂದೆಯೇ ಕಾರಣ, ತಾನೇನು ಮಾಡಬೇಕೆಂದು ಬಯಸಿದೆನೋ ಅದಕ್ಕೆಲ್ಲ ಪ್ರೋತ್ಸಾಹ ನೀಡಿದರು ಎಂದು ಸುಹಾಸ್ ಹೇಳಿಕೊಂಡಿದ್ದಾರೆ.
4 ವರ್ಷಗಳ ಹಿಂದೆ ಶುರು ಆಯಿತು ಕೃಷ್ಣನಗರ ಪಯಣ :
ರಾಜಸ್ಥಾನದ ಜೈಪುರದವರಾದ ಕೃಷ್ಣನಗರ ಎಂಬ ಈ ಬ್ಯಾಡ್ಮಿಂಟನ್ ಆಟಗಾರ; ವಿಶ್ವಕ್ಕೆ ಪರಿಚಯವಾಗಿರುವುದು ಟೋಕಿಯೊ ಪ್ಯಾರಾಲಿಂಪಿಕ್ಸ್ ಮೂಲಕ. ಸೆ.5ರ ರವಿವಾರ ಅವರು ಎಸ್‌ಎಚ್6 ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಗೆದ್ದಿದ್ದಾರೆ. ಎಸ್‌ಎಚ್6 ವಿಭಾಗದಲ್ಲಿ ಸ್ಪರ್ಧಿಸುವ ಆಟಗಾರರು ಸೊಂಟದಿಂದ ಮೇಲ್ಭಾಗದಲ್ಲಿ ದೌರ್ಬಲ್ಯ ಹೊಂದಿರುತ್ತಾರೆ. ನಿಂತುಕೊಂಡು ಆಡುವ ಸಾಮರ್ಥ್ಯವಿರುತ್ತದೆ. ಕೃಷ್ಣನಗರ ಪ್ಯಾರಾ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಕೇವಲ 4 ವರ್ಷಗಳ ಹಿಂದೆ. ಆಗ ನಡೆದ ಏಷ್ಯಾ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಗೆದ್ದರು. 2019ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ದೌರ್ಬಲ್ಯಗಳ ಎದುರಿಸಿದ ಪ್ರವೀಣ್ :
ಹೈಜಂಪ್ ಟಿ64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್ ಕುಮಾರ್ ಬೆಳ್ಳಿ ಪಡೆದಿದ್ದಾರೆ. ಉತ್ತರಪ್ರದೇಶದ ನೋಯ್ಡಾದವರಾದ ಪ್ರವೀಣ್ (18 ವರ್ಷ)ಗಿದು ಚೊಚ್ಚಲ ಪ್ಯಾರಾಲಿಂಪಿಕ್ಸ್! ಅವರು ಪ್ಯಾರಾದಲ್ಲಿ ಎತ್ತರ ಜಿಗಿತ ಕ್ರೀಡೆಯನ್ನು ಆಯ್ದುಕೊಂಡಿದ್ದೇ 2019ರಲ್ಲಿ. ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಅಭ್ಯಾಸ ಮಾಡಲು ಮೈದಾನಗಳೇ ಸಿಕ್ಕಿರಲಿಲ್ಲ. ಇದರಿಂದ ತಲೆಬಿಸಿಗೊಂಡಿದ್ದ ಅವರು ತಾನೇ ಒಂದಷ್ಟು ಜಾಗವನ್ನು ಅಗೆದು, ಮರಳು ತುಂಬಿ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಅವರು ಹುಟ್ಟಿದ್ದು ಉತ್ತರಪ್ರದೇಶದ ಜೆವಾರ್‌ನ ಗೋವಿಂದಗಢ ಎಂಬ ಹಳ್ಳಿಯಲ್ಲಿ. ಈಗಲೂ ಅಲ್ಲಿ ಸರಿಯಾಗಿ ಒಂದು ರಸ್ತೆಯೂ ಇಲ್ಲ. ಮಗುವಾಗಿದ್ದಾಗಲೇ ಪ್ರವೀಣ್ ಕುಮಾರ್ ಎಡಗಾಲಿನ ಗಾತ್ರ ಚಿಕ್ಕದಿತ್ತು. ಪರಿಣಾಮ ಎರಡೂ ಕಾಲುಗಳಲ್ಲಿ ಅಸಮತೋಲನ. ಆದರೆ ಸಹಜ ಮಕ್ಕಳೊಂದಿಗೆ ಸ್ಪರ್ಧಿಸಿ ಬೆಳೆದ ಅವರು ಎತ್ತರ ಜಿಗಿತದಲ್ಲಿ ಹಿಡಿತ ಸಾಧಿಸಿದರು.
8ನೇ ವರ್ಷದಲ್ಲೇ ಎದುರಾದ ನಿಶ್ಶಕ್ತಿಗೆ ಎದೆಯೊಡ್ಡಿದ ಯೋಗೇಶ್ :
ದಿಲ್ಲಿಯಲ್ಲಿ 1997ರಲ್ಲಿ ಹುಟ್ಟಿದ ಯೋಗೇಶ್ ಕಾಥುನಿಯ ಬಿಕಾಂ ಪದವೀಧರ. ಆ.30ರಂದು ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಗೆದ್ದಿದ್ದಾರೆ. ಇದರ ಹಿಂದೊಂದು ಅದ್ಭುತ ಕಥೆಯಿದೆ. ಇವರ ತಂದೆ ಗ್ಯಾನ್‌ಚಂದ್ರ ಕಾಥುನಿಯ ಯೋಧ. ಯೋಗೇಶ್ ಕೇವಲ 8 ವರ್ಷದವರಿದ್ದಾಗ ಅಪರೂಪದ ನರದೌರ್ಬಲ್ಯಕ್ಕೆ ತುತ್ತಾದರು. ವೈದ್ಯಕೀಯ ಭಾಷೆಯಲ್ಲಿ ಅದನ್ನು ಗಿಲಿಯನ್ ಬಾರ್ ಸಿಂಡ್ರೋಮ್ (ಪಾರ್ಶ್ವವಾಯು) ಎನ್ನುತ್ತಾರೆ. ಪರಿಣಾಮ ಸೊಂಟದಿಂದ ಕೆಳಗ್ಗೆ ನಿಶ್ಶಕ್ತವಾಯಿತು. ನಡೆಯಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದರು. ಅವರ ತಾಯಿ ಮೀನಾ ದೇವಿ ಮಗನಿಗಾಗಿ ಫಿಸಿಯೊಥೆರಪಿ ಕಲಿತರು. ಪರಿಣಾಮ ಮುಂದಿನ ಮೂರು ವರ್ಷಗಳ ಅನಂತರ ಯೋಗೇಶ್ ನಡೆಯಲು ಆರಂಭಿಸಿದರು. ಕೇವಲ 4 ವರ್ಷದ ಹಿಂದೆ ಪ್ಯಾರಾ ಆ್ಯತ್ಲೆಟಿಕ್ಸ್ ತರಬೇತಿ ಆರಂಭಿಸಿದರು. ಈ ವರ್ಷವಂತೂ ಕೊರೊನಾ ಕಾರಣ ಮೈದಾನ ಸಿಗದೇ, ತರಬೇತುದಾರರೂ ಸಿಗದೇ ಒದ್ದಾಡಿದ್ದಾರೆ. ಅದರ ನಡುವೆಯೇ ಬೆಳ್ಳಿ ಗೆದ್ದಿದ್ದಾರೆ.
ಮಧುಮೇಹ, ಕೊರೊನಾ ಎದುರು ಸೆಣೆಸಿ ಗೆದ್ದ ಸಿಂಹರಾಜ್ ಅದಾನಾ : ಈ ಬಾರಿ ಎಸ್‌ಎಚ್1 ವಿಭಾಗದಲ್ಲಿ ಸ್ಪರ್ಧಿಸಿದ ಸಿಂಹರಾಜ್ ಅದಾನಾ 10 ಮೀ. ಏರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಕಂಚು ಗೆದ್ದರು. ಅದಾದ ಅನಂತರ ಅವರು 50 ಮೀ. ಮಿಶ್ರ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರು. ಇದೊಂದು ಅಪೂರ್ವ ಸಾಧನೆ. ಈ ಸಾಧನೆಯಲ್ಲೊಂದು ಅಗಾಧ ನೋವಿನ ಕಥೆಯಿದೆ. 39 ವರ್ಷದ ಅದಾನಾ ಈ ವರ್ಷ ಮೇಯಲ್ಲಿ ಕೊರೊನಾಕ್ಕೆ ಸಿಲುಕಿ, ಬದುಕುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದರು. ಆಸ್ಪತ್ರೆಗಳಲ್ಲಿ ಒಂದು ಹಾಸಿಗೆ ಪಡೆಯಲು ಪರದಾಡಿದ್ದಾರೆ. ಜತೆಜತೆಗೇ ಮಧುಮೇಹ ರೋಗದ ಕಾಟ. ಅವನ್ನೆಲ್ಲ ಮೀರಿ ಸಿಂಹರಾಜ್ ಎರಡು ಪದಕಗಳನ್ನು ಗೆದ್ದಿದ್ದಾರೆ. ಇವನ್ನೆಲ್ಲ ಬಿಟ್ಟೂ ಹೇಳಲು ಬೇಕಾದಷ್ಟು ಕಥೆಗಳಿವೆ. ಸಿಂಹರಾಜ್ ಹರಿಯಾಣದ ಫರೀದಾಬಾದ್‌ನವರು. ಕೇವಲ 1 ವರ್ಷದವರಿದ್ದಾಗ ಪೋಲಿಯೋಗೆ ತುತ್ತಾದರು. ಅವರಿಗೆ 15 ವರ್ಷವಾಗುವವರೆಗೆ ಸಹಾಯಕ ಸಾಧನವನ್ನು ಹಿಡಿದೇ ನಡೆದರು. ಮುಂದೆ ನಿಧಾನಕ್ಕೆ ಸಹಜವಾಗಿ ನಡೆಯಲು ಕಲಿತರು. ಈಗಲೂ ಅವರ ಕಾಲುಗಳು ಹೇಳಿಕೊಳ್ಳುವಷ್ಟು ಬಲಿಷ್ಠವಿಲ್ಲ.