ಮೈಸೂರು: ಪ್ರಸ್ತುತ ಭಾರತೀಯ ಬರಹಗಾರರು ನಿಜವಾದ ತಾತ್ವಿಕ ಮತ್ತು ಸಾಮಾಜಿಕ ಸಮಸ್ಯೆಗಳ ನಡುವಿನ ವ್ಯತ್ಯಾಸ ಗುರುತಿಸಲು ಸಾಧ್ಯವಾಗದ ಪರಿಣಾಮ, ಆಳವಾದ ಬರವಣಿಗೆ ಹಾಗೂ ತತ್ವಶಾಸ್ತ್ರದ ಮಟ್ಟವನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಬೈರಪ್ಪ ಹೇಳಿದರು. ಮೈಸೂರು ಲಿಟರರಿ ಅಸೋಸಿಯೇಷನ್‌ನಿಂದ ನಗರದ ಮಾನಸಗಂಗೋತ್ರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಲಿಟರರಿ ಫೆಸ್ಟ್ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರೀಕ್‌ನಲ್ಲಿ ತತ್ವಶಾಸ್ತ್ರ ಎಂಬುದು ವಿಶ್ವದ ಅದ್ಭುತಗಳಿಂದ ಹುಟ್ಟಿಕೊಂಡರೆ, ಭಾರತದಲ್ಲಿ ಸಾವಿನ ವಿಷಯದೊಂದಿಗೆ ತತ್ವಶಾಸ್ತ್ರ ಎಂಬುದು ಉಗಮ ವಾಯಿತು. ಅದರಂತೆ ಭಾರತದಲ್ಲಿ ಪ್ರಮುಖವಾಗಿ ವೇದಾಂತ ಮತ್ತು ಬುದ್ಧನ ತತ್ವಶಾಸ್ತ್ರಗಳಿವೆ. ಆದರೆ ಭಾರತೀಯ ಬರಹಗಾರರಿಗೆ ವ್ಯಾಸಮುನಿಯ ಆಳವಾದ ಬರವಣಿಗೆ ಮಾದರಿಯಾಗಿದ್ದು, ವ್ಯಾಸಮುನಿಯು ತಮ್ಮ ಬರವಣಿಗೆಗೆ ಅಗತ್ಯವಿರುವ ವಿಷಯದ ಕುರಿತು ಆಳವಾದ ಅಧ್ಯಯನ ನಡೆಸಿದ ಬಳಿಕವಷ್ಟೇ ಬರವಣಿಗೆ ನಡೆಸುತ್ತಿದ್ದರು. ಹೀಗಾಗಿ ಬರವಣಿಗೆ ಹಾಗೂ ತತ್ವಶಾಸ್ತ್ರ ಎರಡೂ ಜತೆಗೂಡಬೇಕಿದ್ದು, ಬರಹಗಾರರಿಗೆ ತತ್ವಶಾಸ್ತ್ರದ ಉತ್ತಮ ಅಡಿಪಾಯ ಇರಬೇಕಾದ ಅಗತ್ಯವಿದೆ ಎಂದರು.
ವೇದ, ಉಪನಿಷತ್‌ಗಳು ನಮ್ಮ ದೇಶವನ್ನು ಪ್ರತಿನಿಧಿಸಲಿದ್ದು, ಇಲ್ಲಿನ ಚಿಂತನೆ, ಸಂಸ್ಕೃತಿಯಲ್ಲಿ ಅಡಗಿದೆ. ವಾಲ್ಮೀಕಿ ಮತ್ತು ವ್ಯಾಸರು ವೇದ, ಉಪನಿಷತ್‌ಗಳ ದಾಸರಾಗಿದ್ದು, ಹೀಗಾಗಿ ದೇಶದ ಪುರಾತನ ಇತಿಹಾಸವಿರುವ ರಾಮಾಯಣ ಹಾಗೂ ಮಹಾಭಾರತ ತಮ್ಮ ಕಾದಂಬರಿಗಳಿಗೆ ಮಾದರಿಯಾಗಿದೆ. ಇನ್ನೂ ರಾನಡೆ ಪ್ರಕಾರ ಬುದ್ಧ ವೇದ-ಉಪನಿಷತ್‌ಗಳಿಂದ ಪ್ರೇರಿತನಾಗಿದ್ದು, ಆ ಬಗ್ಗೆ ಅರಿತು ಬುದ್ಧಿಸಂ ಸೃಷ್ಟಿಸಿದ. ಆದರೆ ತತ್ವಶಾಸ್ತ್ರ ಎಂದರೆ, ತತ್ವ-ಸಿದ್ಧಾಂತಗಳು ಮಾತ್ರವಲ್ಲ. ಅಲ್ಲಿ ರಾಸಾಯನ, ಭೌತಶಾಸ್ತ್ರ, ಗಣಿತವೂ ಅಡಗಿದ್ದು, ತಾವು ಇದರಲ್ಲ ವ್ಯಾಸಂಗ ಮಾಡಿ, ಪಿಎಚ್‌ಡಿ ಸಹ ಪಡೆದಿರುವುದಾಗಿ ಸ್ಮರಿಸಿಕೊಂಡರು.
ಇದಲ್ಲದೆ ಸಾಹಿತ್ಯ ರಚನೆಗೆ ಸೃಜನಾಶೀಲತೆ ಅಗತ್ಯವಿದ್ದು, ಸೃಜನಾಶೀಲತೆ ಎಂಬುದು ಅನುಕರಣೆಯಾಗದೆ, ಹೊಸದಾಗಿ ಸೃಷ್ಟಿಯಾಗಬೇಕು. ಹೀಗಾಗಿ ನಮ್ಮಲ್ಲಿ ಸೃಷ್ಟಿಯಾಗುವ ಕಟ್ಟುಕಥೆಗಳು, ಕಲ್ಪನೆಗಳ ಮೂಲಕ ಹುಟ್ಟುವ ಸಾಹಿತ್ಯಗಳು ಹೆಚ್ಚು ಸೃಜನಾಶೀಲವಾಗಿರುತ್ತದೆ ಎಂದು ಹೇಳಿದರು. ಇತಿಹಾಸ ತಜ್ಞ ಡಾ.ರಾಮಚಂದ್ರ ಗುಹಾ ಮಾತನಾಡಿ, ಯಾವುದೇ ಇತಿಹಾಸಕಾರರು ಸಿದ್ಧಾಂತ-ತತ್ವಗಳನ್ನು ಹೇಳದೆ, ವಸ್ತುನಿಷ್ಠವಾಗಿ ಹೇಳಬೇಕು. ಆ ಮೂಲಕ ಅಧಿಕಾರಶಾಹಿಗಳ ಪರವಾಗಿರದೇ ಸತ್ಯವನ್ನೇ ಸಂಶೋಧಿಸಿ ದಾಖಲಿಸಬೇಕು ಎಂದರು. ವಿಶ್ರಾಂತ ಕುಲಪತಿ ಕೆ.ಸಿ.ಬೆಳ್ಳಿಯಪ್ಪ, ವಿಮರ್ಶಕ ಪೊ›.ಹರೀಶ್ ತ್ರಿವೇದಿ ಇನ್ನಿತರರು ಹಾಜರಿದ್ದರು.