ಜೋಹಾನ್ಸ್ ಬರ್ಗ್: ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಭಾರತೀಯ ಮೂಲದ ಸೂಕ್ಷ್ಮಾಣು ತಜ್ಞೆ ಗೀತಾ ರಾಮ್ ಜೀ ದಕ್ಷಿಣ ಆಫ್ರಿಕಾದಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಡೆಡ್ಲಿ ಕೋವಿಡ್ ವೈರಸ್ ಗೆ ದಕ್ಷಿಣ ಆಫ್ರಿಕಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿದೆ.
ಗೀತಾ ರಾಮ್ ಜೀ ಅವರು ಲಸಿಕೆ ವಿಜ್ಞಾನಿ ಮತ್ತು ಎಚ್ ಐವಿ ತಡೆ ಸಂಶೋಧಕಿಯಾಗಿದ್ದು ವಾರದ ಹಿಂದೆ ಲಂಡನ್ ನಿಂದ ವಾಪಸ್ ಆಗಿದ್ದು, ಇವರಿಗೆ ಕೋವಿಡ್ 19 ಯಾವುದೇ ಲಕ್ಷಣ ಕಾಣಿಸಿಕೊಂಡಿಲ್ಲವಾಗಿತ್ತು ಎಂದು ವರದಿ ವಿವರಿಸಿದೆ.
64 ವರ್ಷದ ಗೀತಾ ರಾಮ್ ಜೀ ಅವರು ದಕ್ಷಿಣ ಆಫ್ರಿಕಾದ ಎಚ್ ಐವಿ ತಡೆ ಸಂಶೋಧನಾ ಘಟಕದ ನಿರ್ದೇಶಕಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರೊ.ಗೀತಾ ರಾಮ್ ಜೀ ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ, ಇದೊಂದು ನೋವಿನ ಸಂಗತಿಯಾಗಿದೆ ಎಂದು ಎಸ್ ಎಎಂ ಆರ್ ಸಿ ಅಧ್ಯಕ್ಷ, ಸಿಇಒ ಗ್ಲೆಂಡಾ ಗ್ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೊ.ರಾಮ್ ಜೀ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿರುವುದಾಗಿ ಹೇಳಿದರು.
ನೂತನವಾಗಿ ಎಚ್ ಐವಿ ತಡೆಗಾಗಿ ಕಂಡುಹಿಡಿದ ಪದ್ಧತಿಗೆ 2018ರಲ್ಲಿ ಪ್ರೊ.ರಾಮ್ ಜೀಗೆ ಲಿಸ್ಬನ್ ನಲ್ಲಿ ವಿಶಿಷ್ಟ ಮಹಿಳಾ ವಿಜ್ಞಾನಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ರಾಮ್ ಜೀ ಅವರು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ಮೂಲದ ಪ್ರವೀಣ್ ರಾಮ್ ಜೀ ಅವರೊಂದಿಗೆ ವಿವಾಹವಾಗಿದ್ದರು.