ಸಿಂಗಾಪುರ : ಅತ್ಯಂತ ಅಪರೂಪದ ಪ್ರಕರಣದಲ್ಲಿ , ಮಾದಕ ದ್ರವ್ಯ ಹೊಂದಿದ್ದ ಕಾರಣಕ್ಕೆ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿದ್ದ ಭಾರತ ಸಂಜಾತ ಮಲೇಶ್ಯನ್ ಪ್ರಜೆ, ಗೋಪು ಜಯರಾಮನ್ ಎಂಬಾತ ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಖುಲಾಸೆಗೊಂಡು ನೇಣಿನ ಕುಣಿಕೆಯಿಂದ ಪಾರಾಗಿದ್ದಾನೆ.
ಸಿಂಗಾಪುರಕ್ಕೆ ತಾನು ಚಲಾಯಿಸಿಕೊಂಡು ಬಂದ ಬೈಕಿನಲ್ಲಿ ಡ್ರಗ್ಸ್ ಅವಿತಿಡಲಾಗಿತ್ತು ಎಂಬುದು ತನಗೆ ಗೊತ್ತಿರಲಿಲ್ಲ ಎಂದು ಸಾಬೀತುಪಡಿಸುವಲ್ಲಿ ಆರೋಪಿ ಗೋಪು ಜಯರಾಮನ್ ಯಶಸ್ವಿಯಾಗಿದ್ದ; ಅಂತೆಯೇ ಆತನನ್ನು ನೇಣಿನ ಕುಣಿಕೆಯಿಂದ ಪಾರು ಮಾಡುವ ಖುಲಾಸೆಯ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ನಿನ್ನೆ ಸೋಮವಾರ ಪ್ರಕಟಿಸಿತು.
2014ರ ಮಾರ್ಚ್ 24ರಂದು ಉತ್ತರದ ವುಡ್‌ಲ್ಯಾಂಡ್ ಚೆಕ್ ಪಾಯಿಂಟ್ ಮೂಲಕ ಸಿಂಗಾಪುರಕ್ಕೆ ಬೈಕ್ ರೈಡ್ ಮಾಡಿಕೊಂಡು ಬಂದಿದ್ದ ಗೋಪುವನ್ನು ಪೊಲೀಸರು ಬಂಧಿಸಿದ್ದರು. ಆತನ ಬೈಕಿನಲ್ಲಿ ಮೂರು ಪೊಟ್ಟಣಗಳಲ್ಲಿ ಅವಿತಿಡಲಾಗಿದ್ದ ನಿಷೇಧಿತ ಮಾದಕ ದ್ರವ್ಯ ಡಯಾಮಾರ್ಫಿನ್ ಪತ್ತೆಯಾಗಿತ್ತು. ಡಯಾಮಾರ್ಫಿನ್, ಹೆರಾಯಿನ್ ಎಂದೂ ಕರೆಯಲ್ಪಡುತ್ತದೆ.
ವಲಸೆ ಅಧಿಕಾರಿಗಳು ಗೋಪು ಜಯರಾಮನ್‌ನನ್ನು ತಡೆದು ನಿಲ್ಲಿಸಿ ಮಾದಕ ದ್ರವ್ಯವನ್ನು ಪತ್ತೆ ಹಚ್ಚಿದಾಗ, ಮೋಟಾರ್ ಬೈಕಿನಲ್ಲಿ ಅದನ್ನು ಅವಿತಿಡಲಾಗಿದ್ದುದು ತನಗೆ ಗೊತ್ತೇ ಇಲ್ಲ ಎಂದು ಹೇಳಿದ್ದ. ಮೋಟಾರ್ ಬೈಕ್ ಕೂಡ ತನ್ನದಲ್ಲ ಎಂದು ಆತ ಹೇಳಿಕೊಂಡಿದ್ದ.
ಗೋಪು ಜಯರಾಮನ್ ಹೇಳಿಕೆಯನ್ನು ಕೂಲಂಕಷ ತನಿಖೆ ಮಾಡಿದ ಅಧಿಕಾರಿಗಳಿಗೆ ಗೋಪು ಹೇಳಿದ ಮಾತಿನಲ್ಲಿ ಸತ್ಯಾಂಶ ಇರುವುದು ಮನವರಿಕೆಯಾಯಿತು. ಗೋಪು ಬಳಸಿದ್ದ ಬೈಕನ್ನು ಈ ಹಿಂದೆ ಎರಡು ಬಾರಿ ಇನ್ಯಾರೋ ಬಳಸಿಕೊಂಡು ಮಾದಕ ದ್ರವ್ಯ ಕಳ್ಳಸಾಗಣೆ ಮಾಡಿದುದು ದಾಖಲೆಗಳಿಂದ ಪತ್ತೆಯಾಯಿತು.
ಚೀಫ್ ಜಸ್ಟಿಸ್ ಸುಂದರೇಶ್ ಮೆನನ್ ಮತ್ತು ಮೇಲ್ಮನವಿ ನ್ಯಾಯಾಧೀಶರಾದ ಜುಡಿತ್ ಪ್ರಕಾಶ್ ಅವರು ಗೋಪು ಜಯರಾಮನ್ ನನ್ನು ಖುಲಾಸೆಗೊಳಿಸಿ ತೀರ್ಪು ನೀಡಿದರು.