Advertisement

ಜಗ ರಾಜಕಾರಣದಲ್ಲಿ ಭಾರತೀಯ ಮೂಲದವರ ಸದ್ದು!

12:02 AM Nov 11, 2020 | mahesh |

ಕೇವಲ ಕಮಲಾ ಹ್ಯಾರಿಸ್‌ ಅಷ್ಟೇ ಅಲ್ಲ, ಜಾಗತಿಕ ರಾಜಕೀಯ ರಂಗದಲ್ಲಿ ಭಾರತೀಯ ಮೂಲದ ಜನರು ಮಿನುಗುತ್ತಲೇ ಇದ್ದಾರೆ. ನಿರ್ಣಾಯಕ ಸ್ಥಾನಗಳಿಗೆ ಆಯ್ಕೆಯಾಗಿ ಆಯಾ ರಾಷ್ಟ್ರಗಳ ಪ್ರಮುಖ ಪಕ್ಷಗಳ ವರ್ಚಸ್ಸು ಹೆಚ್ಚಿಸಿದ್ದಾರೆ. ಈ ಕುರಿತ ಕಿರುನೋಟ ಇಲ್ಲಿದೆ…

Advertisement

ನಿಕ್ಕಿ ಹ್ಯಾಲೆ, ಅಮೆರಿಕ
ಮೂಲ: ಅಮೃತ್‌ಸರ

ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ, ಯುಎಸ್‌ ಕ್ಯಾಬಿನೆಟ್‌ ದರ್ಜೆಗೇರಿದ ಮೊದಲ ಇಂಡೋ- ಅಮೆರಿಕನ್‌. ಸೌತ್‌ ಕೆರೊಲಿನಾದ ಮೊದಲ ಮಹಿಳಾ ಗವರ್ನರ್‌ ಖ್ಯಾತಿ ಪಡೆದಿದ್ದಾರೆ. ಟ್ರಂಪ್‌ ಜತೆಗೆ ಆಡಳಿತ ನಡೆಸಿದ ಅನುಭವಿ. “2024ರ ರಿಪಬ್ಲಿಕನ್‌ ಅಧ್ಯಕ್ಷೀಯ ಅಭ್ಯರ್ಥಿ’ ಅಂತಲೇ ಬಿಂಬಿಸಲಾಗುತ್ತಿದೆ.

ಪ್ರಿಯಾಂಕಾ ರಾಧಾಕೃಷ್ಣನ್‌, ನ್ಯೂಜಿಲೆಂಡ್‌
ಮೂಲ: ತಿರುವನಂತಪುರ
ಎಲ್ಲಿಯ ವೆಲ್ಲಿಂಗ್ಟನ್‌? ಎಲ್ಲಿಯ ಕೇರಳ? ನ್ಯೂಜಿಲೆಂಡ್‌ನ‌ ಪಾರ್ಲಿಮೆಂಟ್‌ನಲ್ಲಿ ಮಲಯಾಳದಲ್ಲಿ ಭಾಷಣ ಮಾಡಿದ್ದ ಪ್ರಿಯಾಂಕಾ, ಲೇಬರ್ಸ್‌ ಪಕ್ಷದಿಂದ 2 ಬಾರಿ ಸಂಸದರಾಗಿ ಆಯ್ಕೆಯಾದವರು. ಪ್ರಸ್ತುತ ಜಸಿಂಡಾ ಆರ್ಡರ್ನ್ ಸರಕಾರದಲ್ಲಿ ಸಚಿವೆ.

ರಿಷಿ ಸುನಾಕ್‌, ಇಂಗ್ಲೆಂಡ್‌
ಮೂಲ: ಚಂಡೀಗಢ
ಕನ್ಸರ್ವೇಟಿವ್‌ ಪಕ್ಷದ ಸಂಸದ. ಪ್ರಸ್ತುತ ಇಂಗ್ಲೆಂಡ್‌ ಸರಕಾರದಲ್ಲಿ ವಿತ್ತ ಸಚಿವರಾಗಿದ್ದಾರೆ. ಇದಕ್ಕೂ ಮೊದಲು ಖಜಾನೆ ಮತ್ತು ಸಂಸದೀಯ ಖಾತೆ ನಿರ್ವಹಿಸಿದ ಅನುಭವಿ. ಉದ್ಯಮ, ಇಂಧನ, ಕೈಗಾರಿಕಾ ಕ್ಷೇತ್ರಗಳ ಬಗ್ಗೆ ಆಳ ಜ್ಞಾನ ಹೊಂದಿದ್ದಾರೆ.

ಹರ್‌ಜಿತ್‌ ಸಜ್ಜನ್‌, ಕೆನಡಾ
ಮೂಲ: ಹೋಶಿಯಾರ್ಪುರ್‌, ಪಂಜಾಬ್‌
ಜಸ್ಟಿನ್‌ ಟ್ರಾಡೊ ಸರಕಾರದಲ್ಲಿ ರಕ್ಷಣಾ ಸಚಿವ. ಡಿಟೆಕ್ಟಿವ್‌, ಲೆಫ್ಟಿನೆಂಟ್‌ ಕರ್ನಲ್‌ ಹಿನ್ನೆಲೆಯ ಇವರು 2015ರಲ್ಲಿ ಲಿಬರಲ್‌ ಪಕ್ಷದ ಮೂಲಕ ಪಾರ್ಲಿಮೆಂಟ್‌ನತ್ತ ಮುಖಮಾಡಿದರು. ವಾಂಕೋವರ್‌ ದಕ್ಷಿಣ ಕ್ಷೇತ್ರದಿಂದ ಸಂಸತ್‌ ಪ್ರವೇಶಿಸಿದ್ದಾರೆ.

Advertisement

ಪ್ರೀತಂ ಸಿಂಗ್‌, ಸಿಂಗಾಪುರ
ಮೂಲ: ಚಂಡೀಗಢ
ಸಿಂಗಾಪುರದ ಸಿಂಗ್‌ ಈಸ್‌ ಕಿಂಗ್‌! ಪ್ರೀತಂ ನೇತೃತ್ವದ “ವರ್ಕರ್ಸ್‌ ಪಾರ್ಟಿ’ ಸಿಂಗಾಪುರದ 93 ಲೋಕಸಭಾ ಕ್ಷೇತ್ರಗಳಲ್ಲಿ 10 ಸೀಟುಗಳನ್ನು ಗೆದ್ದು ಭರವಸೆ ಹುಟ್ಟಿಸಿದೆ. ವಿಪಕ್ಷದ ನಾಯಕರಾಗಿ ಸರಕಾರದ ಪ್ರಮುಖ ಲೋಪಗಳ ವಿರುದ್ಧ ಧ್ವನಿ ಎತ್ತಿ, ಸುದ್ದಿಯಲ್ಲಿದ್ದಾರೆ.

ಲಿಯೊ ವರಾಡ್ಕರ್‌, ಐರ್ಲೆಂಡ್‌
ಮೂಲ: ಮುಂಬಯಿ
ವೈದ್ಯರಾದ ಇವರು ಐರ್ಲೆಂಡ್‌ನ‌ ಮಿಚೆಲ್‌ ಮಾರ್ಟಿನ್‌ ಸರಕಾರದಲ್ಲಿ ಉದ್ಯಮ, ವ್ಯವಹಾರಗಳ ಸಚಿವ. ಕೇವಲ 24ನೇ ವರ್ಷದಲ್ಲಿ ಇವರು ಕೌನ್ಸೆಲರ್‌ ಆಗಿ ರಾಜಕೀಯ ರಂಗಕ್ಕೆ ಕಾಲಿಟ್ಟರು. ಸಲಿಂಗಿ ಎಂದು ಘೋಷಿಸಿಕೊಂಡ ಮೊದಲ ಭಾರತೀಯ ಮೂಲದ ರಾಜಕಾರಣಿ.

ಪ್ರೀತಿ ಪಟೇಲ್‌, ಇಂಗ್ಲೆಂಡ್‌
ಮೂಲ: ಗಾಂಧಿನಗರ, ಗುಜರಾತ್‌
ಕನ್ಸರ್ವೇಟಿವ್‌ ಪಕ್ಷದ ಪ್ರಮುಖ ಧುರೀಣೆ. ಬೋರಿಸ್‌ ಜಾನ್ಸನ್‌ ಸರಕಾರದಲ್ಲಿ ಗೃಹ ಸಚಿವೆ. ಇದಕ್ಕೂ ಮೊದಲು ಡೇವಿಡ್‌ ಕೆಮರೂನ್‌ ಆಡಳಿತದಲ್ಲಿ ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ವಿಥಾಮ್‌ ಸಂಸತ್‌ ಕ್ಷೇತ್ರದ ಪ್ರತಿನಿಧಿ.

ಇಂಡೋ- ಅಮೆರಿಕನ್‌ ಹವಾ
ಈ ಬಾರಿಯ ಅಮೆರಿಕ ಚುನಾವಣೆಯಲ್ಲಿ ಭಾರತೀಯರು ಹಲವೆಡೆ ಅಧಿಕಾರದ ಕಹಳೆ ಮೊಳಗಿಸಿದ್ದಾರೆ. “ಸಮೋಸಾ ಕಾಕಸ್‌’ ಎಂದು ಘೋಷಿಸಿಕೊಂಡು ಮರು ಆಯ್ಕೆಯಾದ ನಾಲ್ವರು ಡೆಮಾಕ್ರಾಟ್‌ ಪಕ್ಷದ ಭಾರತೀಯ ಮೂಲದವರಲ್ಲದೆ, ಮಹಿಳಾ ಮಣಿಗಳೂ ಈ ದಾಖಲೆಯ ಪಾಲುದಾರರು…

ಮತ್ತೆ ಕಾಂಗ್ರೆಸ್‌ಗೆ ಕಾಲಿಟ್ಟವರು…
ಅಮಿ ಬೆರಾ (ಡೆಮಾಕ್ರಾಟ್‌): ಗುಜರಾತ್‌ ಮೂಲದ ಅಮಿ, ಸತತ ಐದು ಬಾರಿ ಕಾಂಗ್ರೆಸ್‌ಗೆ (ಸಂಸತ್‌) ಆಯ್ಕೆಯಾದ ನುರಿತ ರಾಜಕೀಯಪಟು. ಪ್ರಸ್ತುತ ಕ್ಯಾಲಿಫೋರ್ನಿಯಾದ 7ನೇ ಕಾಂಗ್ರೆಷನಲ್‌ ಜಿಲ್ಲೆಯಿಂದ ಮರು ಆಯ್ಕೆಗೊಂಡಿದ್ದಾರೆ. ಗೃಹ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರೂ ಹೌದು.
ರೋ ಖನ್ನಾ (ಡೆಮಾಕ್ರಾಟ್‌): ಪಂಜಾಬ್‌ ಪ್ರಾಂತ್ಯ (ಈಗಿನ ಪಾಕಿಸ್ಥಾನದ ಭಾಗ) ಮೂಲದ ರೋ, ಕ್ಯಾಲಿಫೋರ್ನಿಯಾದ 17ನೇ ಕಾಂಗ್ರೆಷನಲ್‌ ಜಿಲ್ಲೆಯಿಂದ ಮರು ಆಯ್ಕೆಗೊಂಡಿದ್ದಾರೆ. ಡೆಮಾಕ್ರಾಟಿಕ್‌ ಕಾಕಸ್‌ನ ಅಸಿಸ್ಟಂಪ್‌ ವಿಪ್‌ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ.

ರಾಜಾ ಕೃಷ್ಣಮೂರ್ತಿ (ಡೆಮಾಕ್ರಾಟ್‌): ಹೊಸದಿಲ್ಲಿ ಮೂಲದ ತಮಿಳು ಕುಟುಂಬದ ರಾಜಾ ಇಲಿನಾಯ್ಸನ 8ನೇ ಜಿಲ್ಲೆಯಿಂದ 3ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಓವರ್‌ಸೈಟ್‌ ಕಮಿಟಿ, ಹೌಸ್‌ ಇಂಟೆಲೆಜೆನ್ಸ್‌ ಕಮಿಟಿ ನಿರ್ವಹಿಸಿದ ಅನುಭವಿ.
ಪ್ರಮಿಳಾ ಜಯಪಾಲ್‌ (ಡೆಮಾಕ್ರಾಟ್‌): ಚೆನ್ನೈ ಮೂಲದ ವರು ವಾಷಿಂಗ್ಟನ್ನಿನ 7ನೇ ಜಿಲ್ಲೆಯಿಂದ 3ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕಾಶ್ಮೀರಕ್ಕೆ 370ನೇ ವಿಧಿಯ ಸ್ಥಾನಮಾನ ಹಿಂಪಡೆದಾಗ, ಭಾರೀ ವಿರೋಧ ಸೂಚಿಸಿದ್ದರು.

ಪಂಚ ಮಹಿಳೆಯರ ಸಾಮ್ರಾಜ್ಯ
ಜೆನ್ನಿಫ‌ರ್‌ ರಾಜ್‌ಕುಮಾರ್‌ (ಡೆಮಾಕ್ರಾಟ್‌): ಸ್ಟೇಟ್‌ ಅಸೆಂಬ್ಲಿ, ನ್ಯೂಯಾರ್ಕ್‌
ನಿಮಾ ಕುಲಕರ್ಣಿ (ಡೆಮಾಕ್ರಾಟ್‌): ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌, ಕೆಂಟುಕಿ
ಕೇಶಾ ರಾಮ್‌ (ಡೆಮಾಕ್ರಾಟ್‌): ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌, ವೆರ್ಮಾಂಟ್‌
ವಂದನಾ ಸ್ಲಾಟರ್‌ (ಡೆಮಾಕ್ರಾಟ್‌): ಸ್ಟೇಟ್‌ ಹೌಸ್‌, ವಾಷಿಂಗ್ಟನ್‌
ಪದ್ಮಾ ಕುಪ್ಪಾ (ಡೆಮಾಕ್ರಾಟ್‌): ಸ್ಟೇಟ್‌ ಹೌಸ್‌, ಮಿಚಿಗನ್‌

Advertisement

Udayavani is now on Telegram. Click here to join our channel and stay updated with the latest news.

Next