Advertisement

ಭಾರತ ಆಕ್ರಮಿತ ಕಾಶ್ಮೀರದವನು ಎಂದ ವಿದ್ಯಾರ್ಥಿಗೆ ಸುಷ್ಮಾ ತರಾಟೆ !

10:58 AM May 11, 2018 | Team Udayavani |

ಹೊಸದಿಲ್ಲಿ: ಭಾರತ ಆಕ್ರಮಿತ ಕಾಶ್ಮೀರದವನು ಎಂದು ಹೇಳಿಕೊಂಡು ಪಾಸ್‌ ಪೋರ್ಟ್‌ ಸಮಸ್ಯೆ ಪರಿಹರಿಸುವಂತೆ ವಿನಂತಿಸಿಕೊಂಡ ವಿದ್ಯಾರ್ಥಿಯನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಫಿಲಿಪ್ಪೀನ್ಸ್‌ ನಲ್ಲಿರುವ ಶೇಖ್‌ ಅತೀಖ್‌ ಟ್ವಿಟರ್‌ ಖಾತೆ ಸ್ಥಳ ಸೆಟ್ಟಿಂಗ್ಸ್‌ ನಲ್ಲಿ ತಾನು ‘ಭಾರತ ಆಕ್ರಮಿತ ಕಾಶ್ಮೀರದವನು’ ಎಂದು ಬರೆದುಕೊಂಡಿದ್ದ. ಅಲ್ಲದೆ ಫಿಲಿಪ್ಪೀನ್ಸ್‌ ನಲ್ಲಿ ಹೊಸ ಪಾಸ್‌ ಪೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದ. ಒಂದು ತಿಂಗಳಾದರೂ ಪಾಸ್‌ ಪೋರ್ಟ್‌ ಬಾರದಿದ್ದಾಗ ಸಚಿವೆ ಸುಷ್ಮಾಗೆ ಟ್ವೀಟ್‌ ಮಾಡಿ ಸಹಾಯ ಕೋರಿದ್ದ.

Advertisement

‘ನಾನು ಜಮ್ಮು ಕಾಶ್ಮೀರದವನು. ಫಿಲಿಪ್ಪೀನ್ಸ್‌ ನಲ್ಲಿ ವೈದ್ಯಕೀಯ ಅಭ್ಯಾಸ ಮಾಡುತ್ತಿದ್ದೇನೆ. ಪಾಸ್‌ ಪೋರ್ಟ್‌ ಹಾಳಾಗಿದ್ದರಿಂದ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. 1 ತಿಂಗಳಾದರೂ ಸಿಕ್ಕಿಲ್ಲ. ವೈದ್ಯಕೀಯ ತಪಾಸಣೆಗೆ ಮನೆಗೆ ಹೋಗಬೇಕಿದೆ. ದಯವಿಟ್ಟು ಸಹಾಯ ಮಾಡಿ ಎಂದು ಟ್ವೀಟ್‌ ಮಾಡಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್‌, ‘ನೀವು ಜಮ್ಮು-ಕಾಶ್ಮೀರದವರಾಗಿದ್ದರೆ, ನಾನು ಸಹಾಯ ಮಾಡುತ್ತೇನೆ. ಆದರೆ ನಿಮ್ಮ ಪ್ರೊಫೈಲ್‌ನಲ್ಲಿ ನೀವು ಭಾರತ ಆಕ್ರಮಿತ ಕಾಶ್ಮೀರದವರು ಎಂದಿದೆ. ಅಂತಹ ಸ್ಥಳವೇ ಇಲ್ಲ’ ಎಂದಿದ್ದಾರೆ.

ಕೆಲವೇ ಗಂಟೆಗಳಲ್ಲಿ ಅತೀಖ್‌ ತನ್ನ ಟ್ವಿಟರ್‌ನಲ್ಲಿ ಸ್ಥಳದ ಮಾಹಿತಿ ಬದಲಿಸಿ, ಜಮ್ಮು – ಕಾಶ್ಮೀರ/ಮನಿಲಾ ಎಂದು ಬರೆದುಕೊಂಡಿದ್ದಾನೆ. ಅದನ್ನು ಗಮನಿಸಿದ ಸುಷ್ಮಾ, ನೀವು ಪ್ರೊಫೈಲ್‌ ವಿವರ ಸರಿಪಡಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್‌ ಮಾಡಿದ್ದಲ್ಲದೆ, ಅತೀಖ್‌ ಗೆ ಸಹಾಯ ಮಾಡುವಂತೆ ಫಿಲಿಪ್ಪೀನ್ಸ್‌ನ ರಾಯಭಾರಿಗೆ ಸೂಚಿಸಿದ್ದಾರೆ. ಈ ಟ್ವೀಟ್‌ ಭಾರೀ ಜನಪ್ರಿಯವಾಗಿದ್ದು, 5 ಸಾವಿರ ಜನರು ಶೇರ್‌ ಮಾಡಿದ್ದಾರೆ ಹಾಗೂ 10 ಸಾವಿರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next