ನವದೆಹಲಿ: 13 ಮಂದಿ ಇದ್ದ ಭಾರತೀಯ ಮೀನುಗಾರಿಕಾ ಹಡಗು(Boat) ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನೌಕೆ(Submarine)ಗೆ ಡಿಕ್ಕಿ ಹೊಡೆದಿರುವ ಘಟನೆ ಗೋವಾ ಕರಾವಳಿ ಪ್ರದೇಶದಲ್ಲಿ ಶುಕ್ರವಾರ(ನ.22) ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಸಂಭವಿಸಿದ ಸ್ಥಳದಲ್ಲಿ ಭಾರತೀಯ ನೌಕಾಪಡೆಯ ಆರು ಹಡಗುಗಳು ಹಾಗೂ ವಿಮಾನಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಈವರೆಗೆ 11 ಮೀನುಗಾರರನ್ನು ರಕ್ಷಿಸಲಾಗಿದೆ. ಇನ್ನು ಇಬ್ಬರು ನಾಪತ್ತೆಯಾಗಿರುವುದಾಗಿ ವರದಿ ವಿವರಿಸಿದೆ.
ನಾಪತ್ತೆಯಾದ ಇಬ್ಬರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದ್ದು, ಮುಂಬೈ ಕರಾವಳಿ ರಕ್ಷಣಾ ಪಡೆಯ ತಂಡದ ಜೊತೆ ನಿರಂತರ ಸಂಪರ್ಕ ಹೊಂದಿದ್ದು, ಮಾರ್ಗದರ್ಶನ ಪಡೆಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರಾವಳಿ ಪಡೆಯ ಮುಳುಗುತಜ್ಞರು ಶೋಧ ಕಾರ್ಯದಲ್ಲಿ ತೊಡಗಿರುವುದಾಗಿ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದೆ.
ಜಲಾಂತರ್ಗಾಮಿ ನೌಕೆ ಮತ್ತು ಮೀನುಗಾರಿಕಾ ಬೋಟ್ ನಡುವಿನ ಡಿಕ್ಕಿ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಅಪಘಾತಕ್ಕೆ ಕಾರಣ ಏನೆಂದು ತಿಳಿದುಕೊಳ್ಳಲಾಗುವುದು ಎಂದು ಪ್ರಕಟನೆ ವಿವರಿಸಿದೆ.