ಕಣ್ಣೂರು : ಪ್ರಥಮ ಬಾರಿಗೆಂಬಂತೆ ಭಾರತೀಯ ನೌಕಾ ಪಡೆ ಮಹಿಳಾ ಪೈಲಟನ್ನು ತನ್ನ ಕಾರ್ಯ ಪಡೆಗೆ ಸೇರಿಸಿಕೊಂಡಿದೆ. ಈ ಹೆಗ್ಗಳಿಕೆ ಪಡೆದಿರುವ ಶುಭಾಂಗಿ ಸ್ವರೂಪ್ ಅವರು ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಶೀಘ್ರವೇ ಆಕೆ ನೌಕಾ ಪಡೆಯ ಸಾಗರಿಕ ಕಣ್ಗಾವಲು ವಿಮಾನವನ್ನು ನಡೆಸಲಿದ್ದಾರೆ.
ಇದೇ ವೇಳೆ ಇನ್ನೂ ಮೂವರು ಮಹಿಳಾ ಕೆಡೆಟ್‌ಗಳಾಗಿರುವ ಆಸ್ಥಾ ಸೇಗಲ್ (ಹೊಸದಿಲ್ಲಿ) ರೂಪಾ ಎ (ಪುದುಚೇರಿ) ಮತ್ತು ಶಕ್ತಿ ಮಾಯಾ ಎಸ್ (ಕೇರಳ) ಅವರು ಮೊದಲ ಮಹಿಳಾ ಆಧಿಕಾರಿಗಳಾಗಿ ನೌಕಾ ಪಡೆಯ ನೇವಲ್ ಆರ್ಮಮೆಂಟ್ ಇನ್‌ಸ್ಪೆಕ್ಟೋರೇಟ್ ಸೇರಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ನೇವಲ್ ಓರಿಯೆಂಟೇಶನ್ ಕೋರ್ಸ್ ಮುಗಿಸಿರುವ ಈ ನಾಲ್ಕೂ ಮಹಿಳೆಯರು ತಮ್ಮ 20ರ ಹರೆಯದ ಆರಂಭದಲ್ಲಿದ್ದು ನಿನ್ನೆ ಎಳಿಮಲ ನೇವಲ್ ಅಕಾಡೆಮಿಯಲ್ಲಿ ನಡೆದ ವರ್ಣರಂಜಿತ ಘಟಿಕೋತ್ಸವದಲ್ಲಿ ಪಾಸಾಗಿದ್ದರು. ನಿನ್ನೆಯ ಈ ಪ್ರಮುಖ ಸಮಾರಂಭದಲ್ಲಿ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾಂಬಾ ಭಾಗವಹಿಸಿದ್ದರು.
ನೌಕಾ ಪಡೆಯ ಮೊದಲ ಮಹಿಳಾ ಪೈಲಟ್ ಆಗಿರುವ ಶುಭಾಂಗಿ ಅವರು ನೇವಲ್ ಕಮಾಂಡರ್ ಓರ್ವರ ಪುತ್ರಿ. ನೌಕಾ ಪಡೆಯಲ್ಲಿ ಪೈಲಟ್ ಆಗುವ ಮೂಲಕ ನನ್ನ ಬಹುಕಾಲದ ಕನಸು ಈಗ ನನಸಾಗಿದೆ ಎಂದು ಶುಭಾಂಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಶುಭಾಂಗಿ ಗಿಂತ ಮೊದಲೇ ನೌಕಾ ಪಡೆಯು ವಾಯು ಯಾನ ವಿಭಾಗವು ವಾಯು ಸಾರಿಗೆ ನಿಯಂತ್ರಣಾಧಿಕಾರಿಗಳಾಗಿ ಮಹಿಳೆಯರನ್ನು ಸೇರಿಸಿಕೊಂಡಿತ್ತು. ನೌಕಾ ಪಡೆ ವಿಮಾನದಲ್ಲಿ ಪರಿವೀಕ್ಷಕರಾಗಿರುವ ಅವರಿಗೆ ನೌಕಾ ಸಂಪರ್ಕ ಮತ್ತು ಶಸ್ತ್ರಾಸ್ತ್ರಗಳ ಹೊಣೆಗಾರಿಕೆ ಇದೆ ಎಂದು ದಕ್ಷಿಣ ನೇವಲ್ ವಕ್ತಾರ ಕಮಾಂಡರ್ ಶ್ರೀಧರ್ ವಾರಿಯರ್ ತಿಳಿಸಿದ್ದಾರೆ.
ಶುಭಾಂಗಿ ಈಗಿನ್ನು ಹೈದರಾಬಾದ್ ನಲ್ಲಿನ ವಾಯು ಪಡೆ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿದ್ದಾರೆ. ಈ ಅಕಾಡೆಮಿಯು ಸೇನೆ, ನೌಕಾಪಡೆ ಮತ್ತು ವಾಯು ಪಡೆಯ ಪೈಲಟ್‌ಗಳಿಗೆ ತರಬೇತಿ ನೀಡುತ್ತದೆ.