ನವದೆಹಲಿ: 5,000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣದಲ್ಲಿ ದೆಹಲಿ ಪೊಲೀಸರು ಐದನೆ ಆರೋಪಿಯನ್ನು ಬಂಧಿಸಿದ್ದಾರೆ. ಈತ ದೇಶವನ್ನು ತೊರೆದು ಪರಾರಿಯಾಗಲು ಯತ್ನಿಸಿದ್ದ ವೇಳೆ ಅಮೃತ್ ಸರ್ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವುದಾಗಿ ವರದಿ ವಿವರಿಸಿದೆ.
ಜಿತೇಂದ್ರ ಪಾಲ್ ಸಿಂಗ್ ಅಲಿಯಾಸ್ ಜಸ್ಸಿ(40ವರ್ಷ) ಎಂಬಾತ ಡ್ರಗ್ ಜಾಲದ ವಹಿವಾಟಿಗಾಗಿ ಬ್ರಿಟನ್ ನಿಂದ ಭಾರತಕ್ಕೆ ಬಂದಿದ್ದ. ಆದರೆ ಡ್ರಗ್ಸ್ ಜಾಲ ಭೇದಿಸಿದ ದೆಹಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದರು, ಈ ವಿಷಯ ತಿಳಿಯುತ್ತಿದ್ದಂತೆಯೇ ಜಿತೇಂದ್ರ ಪಾಲ್ ಬ್ರಿಟನ್ ಗೆ ಪರಾರಿಯಾಗಲು ಸಿದ್ಧತೆ ನಡೆಸಿದ್ದ ಎಂದು ಮೂಲಗಳು ಹೇಳಿವೆ.
ಜಿತೇಂದ್ರ ಪಾಲ್ ಸಿಂಗ್ ಕಳೆದ 17 ವರ್ಷಗಳಿಂದ ಬ್ರಿಟನ್ ನಲ್ಲಿ ವಾಸವಾಗಿದ್ದು, ಯಕೆ (UK) ಗ್ರೀನ್ ಕಾರ್ಡ್ ಹೊಂದಿದ್ದಾನೆ ಎಂದು ವರದಿ ವಿವರಿಸಿದೆ.
ಅಕ್ಟೋಬರ್ 2ರಂದು ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 560 ಕಿಲೋ ಗ್ರಾಮ್ ಕೊಕೇನ್ ಮತ್ತು 40 ಕಿಲೋ ಗ್ರಾಮ್ ಹೈಡ್ರೋಪೋನಿಕ್. ಮರಿಜುವಾನಾ ವಶಪಡಿಸಿಕೊಂಡಿದ್ದು, ಇದರ ಅಂದಾಜು ಬೆಲೆ 5,620 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಆರೋಪಿ ತುಷಾರ್ ಗೋಯಲ್ ನನ್ನು ಬುಧವಾರ ಬಂಧಿಸಿದ್ದು, ಈತ ಭಾರತದಲ್ಲಿನ ಕೊಕೇನ್ ಮಾರಾಟ ಜಾಲದ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಬಂಧಿತ ಆರೋಪಿ ಕಾಂಗ್ರೆಸ್ ಪಕ್ಷದ ನಂಟು ಹೊಂದಿರುವುದಾಗಿ ಬಿಜೆಪಿ ಆರೋಪಿಸಿದ್ದು, ಈ ವಿಚಾರ ಎರಡು ಪಕ್ಷಗಳ ನಾಯಕರು ಆರೋಪ, ಪ್ರತ್ಯಾರೋಪದಲ್ಲಿ ತೊಡಗುವಂತೆ ಮಾಡಿತ್ತು.