ಹೊಸದಿಲ್ಲಿ: ಕೋವಿಡ್ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ಕೆಲವು ವಾರಗಳ ಅವಧಿಯಲ್ಲಿ 90ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವೈದ್ಯಕೀಯ ನೆರವು ನೀಡಲು ಭಾರತ ಮುಂದಾಗಿದೆ.
ಈಗಾಗಲೇ ಭಾರತ ಹಲವು ರಾಷ್ಟ್ರಗಳಿಗೆ ವಾಣಿಜ್ಯಾತ್ಮಕ ದೃಷ್ಟಿಯಿಂದ ಔಷಧ, ಪರೀಕ್ಷಾ ಕಿಟ್‌ಗಳನ್ನು ಪೂರೈಸುತ್ತಿದ್ದು, ಇದಕ್ಕೆ ಹೊರತಾದ ವೈದ್ಯಕೀಯ ನೆರವು ಇದಾಗಿದೆ.
ಈಗ ವಿದೇಶಾಂಗ ಇಲಾಖೆ ಸುಮಾರು 60 ಕೋಟಿ ರೂ.ಗಳ ಮೌಲ್ಯದ ಔಷಧ, ಪರೀಕ್ಷಾ ಕಿಟ್ ಹಾಗೂ ಇನ್ನಿತರ ವೈದ್ಯಕೀಯ ನೆರವನ್ನು ಸುಮಾರು 67 ದೇಶಗಳಿಗೆ ಪೂರೈಸುವ ವಾಗ್ಧಾನ ಮಾಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ವೈದ್ಯಕೀಯ ನೆರವು ಕೋರಿ ಹಲವು ದೇಶಗಳಿಂದ ಮನವಿಗಳು ಬರುತ್ತಿವೆ. ಮೋದಿಯವರ ನಿರ್ದೇಶನದಂತೆ ಇವುಗಳನ್ನು ಪೂರೈಸಲು ಸರಕಾರ ಬದ್ಧವಾಗಿದೆ.
ಕುವೈಟ್, ಮಧ್ಯ ಏಷ್ಯಾದ ರಾಷ್ಟ್ರಗಳು, ಈಕ್ವೆಡಾರ್, ಡೊಮಿನಿಕನ್ ರಿಪಬ್ಲಿಕ್ ಸೇರಿದಂತೆ 29 ರಾಷ್ಟ್ರಗಳಿಗೆ ಈಗಾಗಲೇ ವೈದ್ಯಕೀಯ ಸಲಕರಣೆಗಳನ್ನು ಪೂರೈಸಲಾಗಿದೆ. ಆಫ್ರಿಕಾದ 6 ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಹಾಗೂ ಪ್ಯಾರಾಸಿಟಮಲ್‌ಗಳನ್ನು ಪೂರೈಸಲಾಗಿದೆ.
ಸುಮಾರು 67 ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದರು. ವೈದ್ಯಕೀಯ ಸಲಕರಣೆಗಳಲ್ಲದೆ, ಕ್ಷಿಪ್ರ ಸ್ಪಂದನಾ ಪಡೆಯನ್ನು ಕುವೈಟ್ ಹಾಗೂ ಮಾಲ್ಡೀವ್ಸ್‌ಗಳಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ.
ಲ್ಯಾಟಿನ್ ಅಮೆರಿಕ, ಕೆರಿಬಿಯನ್ ವಲಯ ಹಾಗೂ ಇನ್ನಿತರ ವಲಯಗಳ ದೇಶಗಳಿಗೂ ವೈದ್ಯಕೀಯ ನೆರವು ನೀಡಲು ಭಾರತ ಮುಂದಾಗಿದೆ ಎಂದವರು ಹೇಳಿದರು.