ತಾಷ್ಕೆಂಟ್: ನೋಯ್ಡಾ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯೊಂದು ತಯಾರಿಸಿದ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿದ 68 ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜ್ಬೇಕಿಸ್ಥಾನದ ನ್ಯಾಯಾಲಯವು ಸೋಮವಾರ ಭಾರತೀಯ ಪ್ರಜೆಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಉಜ್ಬೇಕಿಸ್ಥಾನ್ ನ್ಯಾಯಾಲಯವು ಭಾರತೀಯ ಪ್ರಜೆ ಸೇರಿದಂತೆ 23 ಜನರಿಗೆ ಎರಡರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿದೆ.
ಉಜ್ಬೇಕಿಸ್ಥಾನ್‌ನಲ್ಲಿ ಭಾರತದ ಮರಿಯನ್ ಬಯೋಟೆಕ್ ತಯಾರಿಸಿದ ಔಷಧಿಗಳನ್ನು ವಿತರಿಸುವ ಕಂಪನಿಯಾದ ಕ್ಯುರಾಮ್ಯಾಕ್ಸ್ ಮೆಡಿಕಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿಂಗ್ ರಾಘವೇಂದ್ರ ಪ್ರತಾರ್ ಅವರು 20 ವರ್ಷಗಳ ಅವಧಿಯವರೆಗೆ ದೀರ್ಘಾವಧಿಯ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ತೆರಿಗೆ ವಂಚನೆ, ಕಳಪೆ ಗುಣಮಟ್ಟದ, ನಕಲಿ ಔಷಧ ಮಾರಾಟ, ಕಚೇರಿ ದುರ್ಬಳಕೆ, ನಿರ್ಲಕ್ಷ್ಯ, ನಕಲಿ ಮತ್ತು ಲಂಚದ ತಪ್ಪಿತಸ್ಥರೆಂದು ಕಂಡುಬಂದಿದೆ ಎಂದು ತೀರ್ಪು ನೀಡಿರುವುದಾಗಿ ರಾಯಿಟರ್ಸ್ ವರದಿ ತಿಳಿಸಿದೆ.
ಕಲುಷಿತ ಸಿರಪ್ ಸೇವನೆಯಿಂದ ಸಾವನ್ನಪ್ಪಿದ 68 ಮಕ್ಕಳ ಕುಟುಂಬಗಳಿಗೆ ತಲಾ 80,000 ಯುಎಸ್ ಡಾಲರ್ (1 ಬಿಲಿಯನ್ ಉಜ್ಬೆಕ್ ಮೊತ್ತ) ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. 68 ಮಕ್ಕಳ ಸಾವಿನ 7 ತಿಂಗಳ ಸುದೀರ್ಘ ನ್ಯಾಯಾಲಯದ ವಿಚಾರಣೆಯ ನಂತರ ಶಿಕ್ಷೆ ವಿಧಿಸಲಾಗಿದೆ.