Advertisement

ಪಾಕ್ ಉಗ್ರರ ಮೇಲೆ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಮಾಹಿತಿ ಏನು?

06:39 AM Feb 26, 2019 | Team Udayavani |

ಮಂಗಳವಾರ ಬೆಳಗಿನ ಜಾವ ಭಾರತೀಯ ವಾಯುಪಡೆಯ ಮಿರಾಜ್ 2000 ಯುದ್ದವಿಮಾನಗಳು ಎಲ್.ಒ.ಸಿ. ದಾಟಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿದ್ದ ಉಗ್ರ ತರಬೇತಿ ಶಿಬಿರಗಳನ್ನು ನಾಶಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ವಿದೇಶಾಂಗ ಇಲಾಖೆಯು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಮತ್ತು ಪಾಕಿಸ್ಥಾನ ನೆಲದಲ್ಲಿರುವ ಉಗ್ರಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿರುವ ವಾಯುದಾಳಿಯನ್ನು ಅದು ದೃಢಪಡಿಸಿದೆ. ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ವಿವರದ ಸಾರಾಂಶ ಇಲ್ಲಿದೆ:

Advertisement

‘ಪಾಕಿಸ್ಥಾನ ಹಲವು ಕಾಲದಿಂದ ತನ್ನ ನೆಲದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಲೇ ಬಂದಿದೆ. ಈ ಕುರಿತಾಗಿ ಹಲವಾರು ಸಲ ಭಾರತವು ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ನೀಡಿದ್ದರೂ ಪಾಕಿಸ್ಥಾನ ಈ ಕುರಿತಾಗಿ ತಲೆಕೆಡಿಸಿಕೊಂಡಿರಲಿಲ್ಲ. ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಮ್ಮ ಸಿ.ಆರ್.ಪಿ.ಎಫ್. ಯೋಧರ ಮೇಲೆ ಫಿದಾಯಿನ್ ದಾಳಿ ನಡೆದ ಬಳಿಕ ದೇಶದ ಹಲವೆಡೆಗಳಲ್ಲಿ ಇದೇ ರೀತಿಯ ಫಿದಾಯಿನ್ ದಾಳಿಗಳನ್ನು ನಡೆಸಲು ಪಾಕ್ ಮೂಲದ ಉಗ್ರಸಂಘಟನೆ ಜೈಶ್-ಎ- ಮಹಮ್ಮದ್ ಸಂಚು ಮಾಡಿದೆ ಮಾತ್ರವಲ್ಲದೆ ಪಾಕ್ ಗಡಿಭಾಗದಲ್ಲಿ ಫಿದಾಯಿನ್ ದಾಳಿಗೆ ತರಬೇತಿ ನೀಡುವ ಶಿಬಿರಗಳನ್ನು ನಡೆಸುತ್ತಿದೆ ಎಂದು ನಮ್ಮ ಗುಪ್ತಚರ ಇಲಾಖೆಯು ಖಚಿತ ಮಾಹಿತಿಯನ್ನು ನೀಡಿತ್ತು.

ಭಾರತ – ಪಾಕಿಸ್ಥಾನ ಗಡಿಪ್ರದೇಶದ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶ ಮತ್ತು ಬೆಟ್ಟಪ್ರದೇಶಗಳಲ್ಲಿ ಜೈಶ್ ಮುಖ್ಯಸ್ಥ ಉಗ್ರ ಮಸೂದ್ ಅಜ್ಹರ್ ನ ಬಾವಮೈದುನ ಉಗ್ರ ಯೂಸುಫ್ ಅಜ್ಹರ್ ನೇತೃತ್ವದಲ್ಲಿ ಆತ್ಮಾಹುತಿ ಉಗ್ರ ತರಬೇತಿ ಚಟುವಟಿಕೆಗಳು ನಡೆಯುತ್ತಿತ್ತು ಮತ್ತು ಬಾಲ್ಕಟ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿತ್ತು ಎಂಬ ಖಚಿತ ಮಾಹಿತಿಯ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಇಂದು ನಮ್ಮ ವಾಯುಪಡೆಯ ಯುದ್ಧವಿಮಾನಗಳು ನಾವು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಾಲ್ಕಟ್ ಪ್ರದೇಶದಲ್ಲಿ ದಾಳಿ ನಡೆಸಿ ಭಾರೀ ಪ್ರಮಾಣದಲ್ಲಿ ಜೈಶ್- ಎ-ಮಹಮ್ಮದ್ ಸಂಘಟನೆಯ ಉಗ್ರ ಶಿಬಿರಗಳನ್ನು ನಾಶಮಾಡಿ ಸುರಕ್ಷಿತವಾಗಿ ತಮ್ಮ ನೆಲೆಗಳಿಗೆ ವಾಪಾಸಾಗಿವೆ. ಮತ್ತು ದಾಳಿ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ  ನಾಗರಿಕರಿಗೆ ತೊಂದರೆಯಾಗದಂತೆ ಈ ದಾಳಿಯನ್ನು ನಡೆಸಲಾಗಿದೆ ಎಂದವರು ಲಿಖಿತ ಹೇಳಿಕೆಯಲ್ಲಿ ತಿಳಿಸಿದರು. ಈ ಏರ್ ಸ್ಟ್ರೈಕ್ ನಲ್ಲಿ ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂಬ ಮಾಹಿತಿಯನ್ನೂ ಅವರು ಇದೇ ಸಂದರ್ಭದಲ್ಲಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next