– ಎರಡು ಗಂಟೆಗಳ ಸತತ ಶಸ್ತ್ರಚಿಕಿತ್ಸೆಯಿಂದ ದೈತ್ಯಗಾತ್ರದ ಕಿಡ್ನಿಯ ಯಶಸ್ವಿ ನಿವಾರಣೆ
– 2017ರ ದೈತ್ಯ ಕಿಡ್ನಿ ಗಿನ್ನೆಸ್ ದಾಖಲೆ ಮುರಿಯಬಹುದಾದ ಪ್ರಕರಣ
Advertisement
ನವದೆಹಲಿ: ದೆಹಲಿಯ ವ್ಯಕ್ತಿಯೊಬ್ಬರ ದೇಹದಲ್ಲಿದ್ದ 7.4 ಕೆ.ಜಿ. ತೂಕದ ಮೂತ್ರಕೋಶವನ್ನು ಇಲ್ಲಿನ ಗಂಗಾರಾಮ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತಗೆಯಲಾಗಿದೆ. ರೋಗಿಯು ಈಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಅವರಿಗೆ ಬದಲಿ ಕಿಡ್ನಿ ಅಳವಡಿಸಲಾಗುತ್ತದೆ ಎಂದು ಆಸ್ಪತ್ರೆಯ ಯೂರೋಲಜಿ ವಿಭಾಗದ ಡಾ. ಸಚಿನ್ ಕಥೌರಿಯಾ ತಿಳಿಸಿದ್ದಾರೆ.
ಅತೀವ ಬೆನ್ನುನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯು ಅನುವಂಶೀಯವಾಗಿ ಬರುವ “ಆಟೋಸೋಮಲ್ ಡಾಮಿನಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸಾರ್ಡರ್’ ಎಂಬ ಕಾಯಿಲೆಗೆ ತುತ್ತಾಗಿದ್ದರು. ಅವರ ಒಂದು ಕಿಡ್ನಿ 32 ಗಿ 21.8 ಸೆಂ.ಮೀ.ನಷ್ಟು ಬೆಳೆದು ಹೊಟ್ಟೆಯ ಬಹುಪಾಲು ಸ್ಥಳವನ್ನು ಆಕ್ರಮಿಸಿಕೊಂಡಿತ್ತು. ಸಾಮಾನ್ಯವಾಗಿ ಕಿಡ್ನಿ 120-150 ಗ್ರಾಂ ನಷ್ಟಿದ್ದರೆ, ಇವರ ಕಿಡ್ನಿ 7.4 ಕೆ.ಜಿ. ತೂಕವಿದ್ದು, ವಿಶ್ವದಲ್ಲೇ ಅತಿದೊಡ್ಡ ಕಿಡ್ನಿ ಎಂದು ಕರೆಸಿಕೊಂಡಿದೆ. 2 ಗಂಟೆ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆದುಹಾಕಲಾಯಿತು. ಗಿನ್ನೆಸ್ ದಾಖಲೆ?
2017ರಲ್ಲಿ ಪಾಲಿಸಿಸ್ಟಿಕ್ ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಂದ 4.25 ಕೆ.ಜಿ. ಗಾತ್ರದ ಕಿಡ್ನಿಯನ್ನು ಹೊರತೆಗೆಯಲಾಗಿತ್ತು. ಅದು ಈವರೆಗಿನ ಗಿನ್ನೆಸ್ ದಾಖಲೆಯಾಗಿದ್ದು, ಈಗ ದೆಹಲಿ ಮೂಲದ ವ್ಯಕ್ತಿಯ ಕಿಡ್ನಿ ಹೊಸ ದಾಖಲೆ ನಿರ್ಮಿಸುವ ವಿಶ್ವಾಸವನ್ನು ವೈದ್ಯರು ಹೊಂದಿದ್ದಾರೆ. ಹಾಗಾಗಿ, ಗಿನ್ನೆಸ್ ಸಂಸ್ಥೆಯನ್ನು ಸಂಪರ್ಕಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.