ನವದೆಹಲಿ: ಭಾರತೀಯ ಕ್ರಿಕೆಟಿಗರ ವೇತನವನ್ನು ದುಪ್ಪಟ್ಟು ಹೆಚ್ಚಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳು ಖಡಕ್ಕಾಗಿ ಹೇಳಿದ್ದು ಹಳೆಯ ಸುದ್ದಿ. ಇದಕ್ಕೆ ಪದಾಧಿಕಾರಿಗಳು ಒಪ್ಪದಿದ್ದರೆ ನ್ಯಾಯಾಲಯದ ಮೆಟ್ಟಿಲೇರಲೂ ಸಿದ್ಧ ಎಂದು ಎಚ್ಚರಿಸಿದ್ದರು. ಇದೆಲ್ಲದರ ಮಧ್ಯೆ ಬಿಸಿಸಿಐ ಕ್ರಿಕೆಟಿಗರ ವೇತನವನ್ನು ಶೇ.100 ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ ಇದಿನ್ನೂ ಅಂತಿಮಗೊಂಡಿಲ್ಲ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಹೇಳಿದ್ದಾರೆ.
ಬಿಸಿಸಿಐ ಪ್ರಸ್ತುತ ತನ್ನ ಆದಾಯದಲ್ಲಿ ಶೇ.26ರಷ್ಟು ಹಣವನ್ನು ಅಂದರೆ 180 ಕೋಟಿ ರೂ.ಗಳನ್ನು ವೇತನವಾಗಿ ನೀಡುತ್ತಿದೆ. ಇದರಲ್ಲಿ ಶೇ.13ರಷ್ಟು ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ, ಶೇ.10.6ರಷ್ಟು ದೇಶೀಯ ಕ್ರಿಕೆಟಿಗರಿಗೆ, ಬಾಕಿ ಹಣವನ್ನು ಕಿರಿಯರು ಮತ್ತು ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮೀಸಲಾಗಿಟ್ಟಿದೆ. ವೇತನ ದುಪ್ಪಟ್ಟುಗೊಳಿಸುವ ತನ್ನ ಪ್ರಸ್ತಾಪವನ್ನು ಅಂತಿಮಗೊಳಿಸಿದಲ್ಲಿ ಇನ್ನೂ ಹೆಚ್ಚುವರಿ 200 ಕೋಟಿ ರೂ.ಗಳನ್ನು ಬಿಸಿಸಿಐ ಎತ್ತಿಡಬೇಕಾಗುತ್ತದೆ.
ಎಲ್ಲ ಅಂದುಕೊಂಡಂತೆ ನಡೆದರೆ ಹಿರಿಯ, ಕಿರಿಯ ರಾಷ್ಟ್ರೀಯ ಕ್ರಿಕೆಟಿಗರು ಅದರಲ್ಲೂ ದೇಶೀಯ ಕ್ರಿಕೆಟಿಗರು ಸಂತಸದ ದಿನಗಳನ್ನು ಕಾಣಲಿದ್ದಾರೆ. ಅವರ ಬಹುದಿನದ ಬೇಡಿಕೆ ಈಡೇರಲಿದೆ. ರಣಜಿ ಕ್ರಿಕೆಟಿಗರಂತೂ ಹಲವಾರು ದಿನಗಳ ಬೇಸರಕ್ಕೆ ಸಾಂತ್ವನ ಪಡೆಯಲಿದ್ದಾರೆ.
ಸದ್ಯ ಭಾರತ ಕ್ರಿಕೆಟ್ ತಂಡದ ಕೊಹ್ಲಿ ಬಿಸಿಸಿಐ ನೀಡುವ ವಾರ್ಷಿಕ ವೇತನ, ಪಂದ್ಯದ ಶುಲ್ಕವೂ ಸೇರಿ 5.51 ಕೋಟಿ ರೂ. ಗಳಿಸುತ್ತಾರೆ. ಬಿಸಿಸಿಐ ವೇತನ ದುಪ್ಪಟ್ಟು ಮಾಡಿದರೆ ಇದು 10 ಕೋಟಿ ರೂ.ಗೂ ಜಾಸ್ತಿಯಾಗಲಿದೆ. ಅದೇ ರೀತಿ ವರ್ಷಕ್ಕೆ ಸದ್ಯ 15 ಲಕ್ಷ ರೂ.ವರೆಗೆ ಗಳಿಸುವ ರಣಜಿ ಕ್ರಿಕೆಟಿಗರೊಬ್ಬರು ಹೊಸ ನೀತಿ ಜಾರಿಯಾದರೆ 30 ಲಕ್ಷ ರೂ. ಗಳಿಸಲಿದ್ದಾರೆ.
ರಣಜಿ ಆಟಗಾರರ ಬೇಡಿಕೆಗೆ ಬಂತು ಬೆಲೆ: ರಣಜಿ ಆಟಗಾರರು ತಮ್ಮ ದುಸ್ಥಿತಿಯನ್ನು ಸರಿಪಡಿಸಿ ಎಂದು ದುಃಖೀಸುತ್ತಿದ್ದರು. ವರ್ಷಕ್ಕೆ ಕೇವಲ 12ರಿಂದ 15 ಲಕ್ಷ ರೂ. ಬರುತ್ತದೆ. ಅದೂ ವರ್ಷಪೂರ್ತಿಯಾದ ಮೇಲೆ ಅಲ್ಲಿಯವರೆಗೆ ಕುಟುಂಬವನ್ನು ಸಾಕುವುದು ಹೇಗೆ? ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಹೇಗೆನ್ನುವುದು ಅವರ ಪ್ರಶ್ನೆ. ಇದೇ ವಿಚಾರವನ್ನು ಬಿಸಿಸಿಐ ಸಭೆಯಲ್ಲಿ ಭಾರತ ಕ್ರಿಕೆಟ್‌ನ ಮಾಜಿ ನಾಯಕ ಸೌರವ್ ಗಂಗೂಲಿ ಪ್ರಸ್ತಾಪಿಸಿ ರಣಜಿ ಆಟಗಾರರ ಪರ ಬೇಡಿಕೆಯಿಟ್ಟಿದ್ದರು. ಅದನ್ನು ಬಿಸಿಸಿಐ ಪರಿಗಣಿಸಿದೆ.
ಪ್ರಸ್ತುತ ವೇತನ ಹೇಗಿದೆ?
ಬಿಸಿಸಿಐ ವೇತನ ನೀಡುವುದಕ್ಕೆ 3 ಕೇಂದ್ರೀಯ ಗುತ್ತಿಗೆ ಪ್ರಕಟಿಸಿದೆ. ಎ ದರ್ಜೆ ಗುತ್ತಿಗೆ ಪಡೆದವರಿಗೆ 2 ಕೋಟಿ ರೂ., ಬಿ ದರ್ಜೆ ಗುತ್ತಿಗೆ ಪಡೆದವರಿಗೆ 1 ಕೋಟಿ ರೂ., ಸಿ ದರ್ಜೆ ಗುತ್ತಿಗೆ ಪಡೆದವರಿಗೆ 50 ಲಕ್ಷ ರೂ. ಸಿಗಲಿದೆ. ಮುಂದೆ ಇದು ದುಪ್ಪಟ್ಟಾಗಲಿದೆ.