Advertisement

ಆಲಾರೇ ಆಲಾ…ಅಜಿಂಕ್ಯ ಆಲಾ… : ತವರಿಗೆ ಮರಳಿದ ಕ್ರಿಕೆಟ್‌ ಹೀರೋಗಳು

01:59 AM Jan 22, 2021 | Team Udayavani |

ಮುಂಬಯಿ/ಹೊಸದಿಲ್ಲಿ: ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಟೆಸ್ಟ್‌ ಸರಣಿಯನ್ನು ಗೆದ್ದ ಯುವ ಭಾರತ ತಂಡ ಗುರುವಾರ ತವರಿಗೆ ಬಂದಿಳಿದಿದೆ. ಈ ಸಂದರ್ಭದಲ್ಲಿ ಟೀಮ್‌ ಇಂಡಿಯಾದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.

Advertisement

ನಾಯಕ ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತು ಕೋಚ್‌ ರವಿ ಶಾಸ್ತ್ರಿ ಬೆಳಗ್ಗೆ ಬ್ರಿಸ್ಬೇನ್‌ನಿಂದ ಮುಂಬಯಿಗೆ ಆಗಮಿಸಿದರು. ಟೀಮ್‌ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಜಿಂಕ್ಯ ರಹಾನೆಗೆ ಭರ್ಜರಿ ಸ್ವಾಗತ ಕೋರಲಾಯಿತು. ಅಪಾರ್ಟ್‌ಮೆಂಟ್‌ನ ನೂರಾರು ನಿವಾಸಿಗಳು ಸೇರಿ ಕಹಳೆ, ವಾದ್ಯ, ತಮಟೆ, ಡೊಳ್ಳು ಹಾಗೂ ತಾಳವಾದ್ಯಗಳೊಂದಿಗೆ ರಹಾನೆ ಅವರನ್ನು ಬರಮಾಡಿಕೊಂಡರು. ಪುತ್ರಿಯನ್ನು ಎತ್ತಿಕೊಂಡ ರಹಾನೆ, ಪತ್ನಿಯೊಂದಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿರುವಂತೆಯೇ ಅಭಿಮಾನಿಗಳು ಪುಷ್ಪವೃಷ್ಟಿಗೈದರು. “ಆಲಾರೇ ಆಲಾ… ಅಜಿಂಕ್ಯ ಆಲಾ…’ (ಬಂದ ಬಂದ… ಅಜಿಂಕ್ಯ ಬಂದ) ಎಂದು ಖುಷಿಯಿಂದ ಕುಣಿದು ಸಂಭ್ರಮಿಸಿದರು.

ಸಾಧನೆಯ ವಿಶೇಷ ಫಲಕ
ಅಜಿಂಕ್ಯ ರಹಾನೆ ಅವರ ಮುಂಬಯಿ ನಿವಾಸದ ಹೊರಗಡೆ ವಿಶೇಷ ಸ್ವಾಗತ ಫಲಕವೊಂದನ್ನು ಇರಿಸಲಾಗಿತ್ತು. ಇದರಲ್ಲಿ “ಡಬ್ಲ್ಯು’ ಎಂದು ಬರೆದು, ಬಳಿಕ ಇಳಿಕೆಯ ಕ್ರಮಾಂಕದಲ್ಲಿ 5 4 3 2 1 0 ಎಂದು ಬರೆಯಲಾಗಿತ್ತು. ಇಲ್ಲಿ “ಡಬ್ಲ್ಯು’ ಎಂಬುದು “ವರ್ಲ್ಡ್ ಕ್ಲಾಸ್‌ ಕ್ಯಾಪ್ಟನ್‌’ ಎಂಬುದನ್ನು ಪ್ರತಿನಿಧಿಸುತ್ತದೆ. ಬಳಿಕ ಒಟ್ಟು ಟೆಸ್ಟ್‌ ನಾಯಕತ್ವ (5), ನಾಯಕನಾಗಿ ಸಾಧಿಸಿದ ಗೆಲುವು (4), ಆಸ್ಟ್ರೇಲಿಯ ವಿರುದ್ಧ ಸಾಧಿಸಿದ ಜಯ (3), ಈ ಸರಣಿಯಲ್ಲಿ ಗೆದ್ದ ಟೆಸ್ಟ್‌ (2), ಡ್ರಾ (1) ಹಾಗೂ ಸೋಲನ್ನು (0) ನಮೂದಿಸುತ್ತದೆ. ಈ ಫಲಕದ ಮುಂದೆ ನಿಂತು ಫೋಟೊ ತೆಗೆಸಿಕೊಂಡ ಬಳಿಕ ರಹಾನೆ ಮನೆಯನ್ನು ಪ್ರವೇಶಿಸಿದರು.
ಮುಂಬಯಿಗೆ ಆಗಮಿಸಿದ ಕ್ರಿಕೆಟಿಗರಿಗೆ 3 ದಿನಗಳ ಹೋಮ್‌ ಕ್ವಾರಂಟೈನ್‌ ಮಾಡುವಂತೆ ಬೃಹನ್ಮುಂಬಯಿ ಪೌರಾಯುಕ್ತ ಇಕ್ಬಾಲ್‌ ಸಿಂಗ್‌ ಚಹಲ್‌ ತಿಳಿಸಿದರು. ಬಳಿಕ ಮಹಾರಾಷ್ಟ್ರ ಸರಕಾರ, ರಾಜ್ಯದ ಕ್ರಿಕೆಟಿಗರಿಗೆ ಹಾಗೂ ಸಿಬಂದಿಗೆ ಈ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿದೆ ಎಂದೂ ವರದಿಯಾಗಿದೆ.

ತಂದೆಯ ಸಮಾಧಿಗೆ ಸಿರಾಜ್‌ ನಮನ
ಇನ್ನೊಂದೆಡೆ ವೇಗಿ ಮೊಹಮ್ಮದ್‌ ಸಿರಾಜ್‌ ಸ್ಮರಣೀಯ ಪ್ರವಾಸ ಮುಗಿಸಿದ ಸಂಭ್ರಮದಲ್ಲಿದ್ದರೂ ಹೈದರಾಬಾದ್‌ಗೆ ಕಾಲಿಟ್ಟೊಡನೆಯೇ ಭಾವುಕರಾದರು. ಮನೆಗೆ ಮರಳದೆ ನೇರವಾಗಿ ತಂದೆಯ ಸಮಾಧಿಯತ್ತ ತೆರಳಿ, ಪುಷ್ಪಗಳನ್ನಿರಿಸಿ ಪ್ರಾರ್ಥನೆ ಸಲ್ಲಿಸಿದರು.

ಸಿರಾಜ್‌ ಆಸ್ಟ್ರೇಲಿಯ ಪ್ರವಾಸದಲ್ಲಿದ್ದಾಗ ತಂದೆ ಮೃತ ರಾಗಿದ್ದರು. ಆದರೆ ದೇಶ ಸೇವೆ ಮುಖ್ಯ ಎಂದು ಅಲ್ಲೇ ಉಳಿದ ಸಿರಾಜ್‌, ಇದೀಗ ತಂದೆ ಇಹಲೋಕ ತ್ಯಜಿಸಿದ 63 ದಿನಗಳ ಬಳಿಕ ತವರಿಗೆ ಬಂದು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಮಗ ದೇಶವನ್ನು ಪ್ರತಿನಿಧಿಸಬೇಕು, ಇದನ್ನು ಕಂಡು ತಾನು ಸಂಭ್ರಮಿಸಬೇಕು ಎಂಬುದು ಬಾಡಿಗೆ ರಿಕ್ಷಾ ಓಡಿಸುತ್ತಿದ್ದ ಸಿರಾಜ್‌ ತಂದೆಯ ದೊಡ್ಡ ಕನಸಾಗಿತ್ತು.

Advertisement

ಬೆಂಗಳೂರಿಗೆ ಬಂದಿಳಿದ ನಟರಾಜನ್‌
ತಮಿಳುನಾಡಿನ ಟಿ. ನಟರಾಜನ್‌ ಆಸ್ಟ್ರೇಲಿಯದಿಂದ ನೇರವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ತಮ್ಮ ತವರಾದ ಸೇಲಂಗೆ ತೆರಳಿದರು. ಈ ವೇಳೆ ನಟರಾಜನ್‌ ಅವರೀಗೆ ತವರಿನ ಅಭಿಮಾನಿಗಳು ಅದ್ಧೂರಿ ಸ್ವಾಗತಗೈದರು. ರಿಷಭ್‌ ಪಂತ್‌ ಬೆಳಗ್ಗೆ ಹೊಸದಿಲ್ಲಿಗೆ ಬಂದಿಳಿದರು.

ವಿರಾಟ್‌-ಅನುಷ್ಕಾ ಪ್ರತ್ಯಕ್ಷ!
ಕಾಕತಾಳೀಯವೆಂಬಂತೆ, ತಂದೆಯಾದ ಬಳಿಕ ಇದೇ ಮೊದಲ ಬಾರಿಗೆ ವಿರಾಟ್‌ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಕೊಹ್ಲಿ ಮರಳಿ ಟೀಮ್‌ ಇಂಡಿಯಾದ ಚುಕ್ಕಾಣಿ ಹಿಡಿಯಲಿದ್ದು, ಪ್ರವಾಸಿ ಇಂಗ್ಲೆಂಡ್‌ ಎದುರಿನ ಸರಣಿಗೆ ಸಜ್ಜಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next