Advertisement

ತಾಲೀಮ್‌ ವೇಳೆ ಫ‌ುಟ್‌ಬಾಲ್‌ ಆಟ

09:21 AM Oct 20, 2018 | Team Udayavani |

ಗುವಾಹಾಟಿ: ಟೆಸ್ಟ್‌ ಸರಣಿಯ ಬಳಿಕ ಕೆಲವು ದಿನ ವಿಶ್ರಾಂತಿ ಪಡೆದ ಭಾರತೀಯ ಕ್ರಿಕೆಟ್‌ ಆಟಗಾರರು ಶುಕ್ರವಾರ ತಾಲೀಮ್‌ ನಡೆಸಿದರು. ಏಕದಿನ ಸರಣಿಯ ಮೊದಲ ಪಂದ್ಯಕ್ಕಾಗಿ ಆಟಗಾರರು ಮುಖ್ಯ ಕೋಚ್‌ ರವಿಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತರಬೇತಿಯಲ್ಲಿ ಪಾಲ್ಗೊಂಡರು. ಅಭ್ಯಾಸದ ನಡುವೆ ನಾಯಕ ವಿರಾಟ್‌ ಕೊಹ್ಲಿ, ಧೋನಿ ಅವರು ಕೆಎಲ್‌ ರಾಹುಲ್‌, ಮೊಹಮ್ಮದ್‌ ಶಮಿ ಮತ್ತು ಉಮೇಶ್‌ ಯಾದವ್‌ ಜತೆಗೆ ಫ‌ುಟ್‌ಬಾಲ್‌ ಆಟ ಆಡಿದರು. ಆಟಗಾರರು ತಾಲೀಮ್‌ ನಡೆಸುತ್ತಿರುವ ಚಿತ್ರ ಮತ್ತು ವೀಡಿಯೊ ತುಣುಕೊಂದನ್ನು ಭಾರತೀಯ ಕ್ರಿಕೆಟ್‌ ಮಂಡಳಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದೆ. 

Advertisement

ಐದು ಪಂದ್ಯಗಳ ಸರಣಿ
ಭಾರತ ಮತ್ತು ವೆಸ್ಟ್‌ಇಂಡೀಸ್‌ ನಡುವೆ ಐದು ಪಂದ್ಯಗಳ ಸರಣಿ ನಡೆಯಲಿದ್ದು ಮೊದಲ ಪಂದ್ಯ ಗುವಾಹಾಟಿಯಲ್ಲಿ ರವಿವಾರ ನಡೆಯಲಿದೆ. ಆಬಳಿಕ ಉಭಯ ತಂಡಗಳು ಮೂರು ಪಂದ್ಯಗಳ ಟ್ವೆಂಟಿ20 ಸರಣಿಯಲ್ಲಿ ಆಡಲಿವೆ.

ದಾಖಲೆಯತ್ತ ಕೊಹ್ಲಿ, ಧೋನಿ
ವಿಂಡೀಸ್‌ ವಿರುದ್ಧದ ಏಕದಿನ ಸರಣಿ ವೇಳೆ ಕೊಹ್ಲಿ ಮತ್ತು ಧೋನಿ ಇನ್ನಷ್ಟು ದಾಖಲೆ ಮುರಿಯುವ ಸಾಧ್ಯತೆಯಿದೆ. ಏಕದಿನದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಗರಿಷ್ಠ ರನ್‌ ಪೇರಿಸಿದ ಸಾಧಕ ಎಂದೆನಿಸಿಕೊಳ್ಳಲು ವಿರಾಟ್‌ ಕೊಹ್ಲಿ ಅವರಿಗೆ ಇನ್ನು 187 ರನ್‌ ಬೇಕಾಗಿದೆ. ಸದ್ಯ ಈ ದಾಖಲೆ 1573 ರನ್‌ ಗಳಿಸಿರುವ ಸಚಿನ್‌ ತೆಂಡುಲ್ಕರ್‌ ಅವರ ಹೆಸರಲ್ಲಿದೆ. ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಲು ಕೊಹ್ಲಿ ಅವರಿಗೆ ಇನ್ನು 221 ರನ್‌ ಬೇಕಾಗಿದೆ. ಒಂದು ವೇಳೆ ಅವರು ಈ ಸಾಧನೆ ಮಾಡಿದರೆ ತೆಂಡುಲ್ಕರ್‌ (18,426), ಸೌರವ್‌ ಗಂಗೂಲಿ (11,363), ರಾಹುಲ್‌ ದ್ರಾವಿಡ್‌ (10,889) ಮತ್ತು ಧೋನಿ (10,123) ಅವರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.

ಏಕದಿನದಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಒಂದು ಸಾವಿರ ರನ್‌ ಪೂರ್ತಿಗೊಳಿಸಲು ಧೋನಿ ಅವರಿಗೆ ಇನ್ನು 101 ರನ್‌ ಬೇಕಾಗಿದೆ. ಅವರು ಈಗಾಗಲೇ ಶ್ರೀಲಂಕಾ, ಇಂಗ್ಲೆಂಡ್‌, ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ವಿರುದ್ಧ ಒಂದು ಸಾವಿರ ರನ್‌ ಪೂರ್ತಿಗೊಳಿಸಿದ್ದಾರೆ. ರೋಹಿತ್‌ ಶರ್ಮ ಅವರಿಗೆ ವಿಂಡೀಸ್‌ ವಿರುದ್ಧ ಒಂದು ಸಾವಿರ ರನ್‌ ಪೂರ್ತಿಗೊಳಿಸಲು 170 ರನ್‌ ಬೇಕಾಗಿದೆ.

ಕೊಹ್ಲಿ ಆಗಮನ
ವಿರಾಟ್‌ ಕೊಹ್ಲಿ ಏಶ್ಯ ಕಪ್‌ ಕೂಟದಿಂದ ಹೊರಕ್ಕೆ ಉಳಿದಿದ್ದರು. ಇದೀಗ ಕೊಹ್ಲಿ ಮರಳಿ ತಂಡ ಸೇರಿಕೊಂಡಿದ್ದಾರೆ. ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಗೆಲುವಿನ ಕನಸು ಹೊತ್ತು ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಕೆ.ಎಲ್‌.ರಾಹುಲ್‌, ಉಮೇಶ್‌ ಯಾದವ್‌ ಹಾಗೂ ಮೊಹಮ್ಮದ್‌ ಶಮಿ ಅವರಂತಹ ತಾರಾ ಆಟಗಾರರನ್ನು ಹೊಂದಿರುವ ಭಾರತ ಗೆಲ್ಲುವ ಫೇವರಿಟ್‌. ಮೊದಲೆರಡು ಏಕದಿನ ಪಂದ್ಯಕ್ಕೆ ಭಾರತ ತಂಡವನ್ನು ಕಳೆದ ವಾರವೇ ಪ್ರಕಟಿಸಲಾಗಿದ್ದು ರಿಷಭ್‌ ಪಂತ್‌ ತಂಡದಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ. ಪಂತ್‌ ಭವಿಷ್ಯದಲ್ಲಿ ವಿಕೆಟ್‌ ಕೀಪರ್‌ ಆಗಿ ಭಾರತ ತಂಡದಲ್ಲಿ ಸ್ಥಾನ ತುಂಬುವ ಸಾಧ್ಯತೆ ಕಾಣಿಸುತ್ತಿದೆ. ಪಂತ್‌ ಇಂಗ್ಲೆಂಡ್‌ ವಿರುದ್ಧ ತಾನಾಡಿದ ಮೊದಲ ಟೆಸ್ಟ್‌ನಲ್ಲಿ 184 ರನ್‌ ಸಿಡಿಸಿ ಸುದ್ದಿಯಾಗಿದ್ದರು. ಆದರೆ ಮಾಜಿ ನಾಯಕ ಎಂ.ಎಸ್‌.ಧೋನಿ ಏಷ್ಯಾ ಕಪ್‌ನಲ್ಲಿ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸಿರುವುದು ತಂಡಕ್ಕೆ ಚಿಂತೆಯಾಗಿದೆ. ಇನ್ನು ಗಾಯದ ಕಾರಣದಿಂದ ಹಾರ್ದಿಕ್‌ ಪಾಂಡ್ಯ ಹೊರಬಿದ್ದಿದ್ದಾರೆ. ರವೀಂದ್ರ ಜಡೇಜ ಏಶ್ಯಕಪ್‌ನಲ್ಲಿ ವಿಕೆಟ್‌ ಕಿತ್ತು ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರಿಗೆ ತಂಡದಲ್ಲಿ ಮತ್ತೂಂದು ಅವಕಾಶ ನೀಡಲಾಗಿದೆ. ರೋಹಿತ್‌, ಧವನ್‌ ಕೂಡ ತಂಡ ಕೂಡಿಕೊಂಡಿದ್ದು ಜಾದೂ ಮಾಡಬಲ್ಲರೆ ಎನ್ನುವುದು ಅಭಿಮಾನಿಗಳ ನಿರೀಕ್ಷೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next