ಯಳಂದೂರು: ಸಂವಿಧಾನ ಪೀಠಿಕೆಯಲ್ಲಿರುವ ಅಂಶಗಳೇ ನಮ್ಮೆಲ್ಲರ ಜೀವಾಳವಾಗಿದ್ದು ಇಡೀ ದೇಶದ ಹೆಮ್ಮೆ ನಮ್ಮ ಸಂವಿಧಾನ ಎಂದು ಶಾಸಕ ಎ. ಆರ್.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಸಂವಿಧಾನದ ಪೀಠಿಕೆ ಓದುವ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಇದೊಂದು ಐತಿಹಾಸಿಕ ಕ್ಷಣ. ಇದರ ಪೀಠಿಕೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ರೂಪಿಸಿದ್ದು 2.25 ಕೋಟಿ ಜನ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿರುವುದು ಇದೊಂದು ದಾಖಲೆ ಎಂದರು.
ಸಿಗದ ಉತ್ತರ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಮಕ್ಕಳು ಏಕೆ ಬಂದಿದ್ದೇವೆ ಎಂಬುದರ ಬಗ್ಗೆ ಪ್ರಶ್ನಿಸಿದರೆ, ಅವರಿಂದ ಸಮರ್ಪಕ ಉತ್ತರ ಬರಲಿಲ್ಲ. ಆಗ ತಮ್ಮ ಆಪ್ತ ಕಾರ್ಯದರ್ಶಿ ಹಾಗೂ ಖಾಸಗಿ ಶಾಲಾ ಮುಖ್ಯ ಶಿಕ್ಷಕರೂ ಆಗಿರುವ ಚೇತನ್ ರಿಂದ ಶಾಸಕರು ಮಕ್ಕಳಿಗೆ ಸಂವಿಧಾನ ಪೀಠಿಕೆ, ಇದನ್ನು ಅನುಷ್ಠಾನಕ್ಕೆ ತರಬಯಸಿರುವ ಸರ್ಕಾರದ ಉದ್ದೇಶದ ಬಗ್ಗೆ ಮನವರಿಕೆ ಮಾಡಿಕೊಟ್ಟರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಓದು ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಯಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಪಿಎಸ್‌ಐ ಚಂದ್ರಹಾಸನಾಯಕ್, ಪಶು ಇಲಾಖೆ ಸಹಾಯಕ ನಿರ್ದೇಶಕ ಶಿವರಾಜು, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜು, ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಪ್ರಭಾವತಿ, ಮಂಜು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ನರೇಗಾ ವ್ಯವಸ್ಥಾಪಕ ಗಂಗಾಧರ್, ರೇವಣ್ಣ, ಯರಿಯೂರು ರಾಜಣ್ಣ, ಮಲ್ಲು, ಮುನವ್ವರ್ ಬೇಗ್, ಚಕ್ರವರ್ತಿ ಮತ್ತಿತರರು ಉಪಸ್ಥಿತರಿದ್ದರು.