Advertisement

ಭಾರತೀಯ ಸಂವಿಧಾನ ರಾಷ್ಟ್ರೀಯ ಧರ್ಮ: ನ್ಯಾ|ಬಿಲ್ಲಪ್ಪ

10:13 AM Jan 30, 2019 | Team Udayavani |

ಚಿತ್ರದುರ್ಗ: ಸಮಾಜದ ಎಲ್ಲ ಜಾತಿ, ಧರ್ಮದವರಿಗೆ ಭರವಸೆಯ ಬೆಳಕು ನೀಡುತ್ತಿರುವುದು ಭಾರತದ ಸಂವಿಧಾನ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.

Advertisement

ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆದ ‘ಸಂವಿಧಾನ ಮೌಲ್ಯಗಳು ಮತ್ತು ಸಂಚಾರಿ ನಿಯಮಗಳ ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಡೀ ವಿಶ್ವದಲ್ಲೇ ಸರ್ವ ಶ್ರೇಷ್ಠ ಸಂವಿಧಾನ ನಮ್ಮದು. ಸಂವಿಧಾನ ರಾಷ್ಟ್ರೀಯ ಧರ್ಮವೂ ಆಗಿದೆ. ಎಂತಹ ಸಂದರ್ಭದಲ್ಲೂ ಮಾನವರಿಗೆ ಶಕ್ತಿ ತುಂಬುವುದು ನಮ್ಮ ಸಂವಿಧಾನ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಹಾಪ್ರಭುಗಳು. ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ, ಐಎಎಸ್‌, ಕೆಎಎಸ್‌ ಯಾವುದೇ ಹುದ್ದೆ ಇರಲಿ, ಅವರೆಲ್ಲರೂ ಸಾರ್ವಜನಿಕರ ಸೇವಕರು ಎಂಬುದನ್ನು ಮರೆಯಬಾರದು ಎಂದರು.

ನಮ್ಮ ಶಕ್ತಿ ಏನು ಎನ್ನುವುದನ್ನು ಜನತೆ ಮರೆತಿದ್ದಾರೆ. ಸಾರ್ವಜನಿಕರ ಹಣದಿಂದ ಆಡಳಿತ ನಡೆಯುತ್ತಿದೆ. ಆಳುವವರು ತಿಳಿದುಕೊಳ್ಳುವವರೆಗೂ ಸುಧಾರಣೆ ಅಸಾಧ್ಯ. ಪ್ರಜೆಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡಾಗ ಸಮಾಜದಲ್ಲಿನ ವ್ಯವಸ್ಥೆ ಸರಿ ಹೋಗಲಿದೆ ಎಂದು ಅಭಿಪ್ರಾಯಪಟ್ಟರು.

ಯಾವುದೇ ಕೆಲಸ ಕಾರ್ಯಗಳು ವ್ಯಕ್ತಿಯ ಇಚ್ಛೆಯ ಮೇರೆಗೆ ನಡೆಯದೆ ಸಂವಿಧಾನ ಬದ್ಧವಾಗಿ ನಿಯಮಾನುಸಾರವಾಗಿ ನಡೆಯುತ್ತದೆ. ವ್ಯಕ್ತಿ ಅಧಿಕಾರ, ಸ್ವಹಿತಾಸಕ್ತಿ ನಡೆಯುವುದಿಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳ ಅಪೇಕ್ಷತೆಯಂತೆ ಆಡಳಿತ ಮಾಡಬೇಕಾಗುತ್ತದೆ. ರಾಷ್ಟ್ರಕ್ಕೆ ಎಷ್ಟೇ ಕಷ್ಟ ಬಂದರೂ ಸಂವಿಧಾನ ರಕ್ಷಣೆ ಮಾಡಲಿದೆ ಎಂದರು.

ದೇಶದಲ್ಲಿ ಹಲವು ಭಾಷೆ, ಧರ್ಮ, ಜಾತಿ, ಸಮುದಾಯಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಜಾತ್ಯತೀತ ವ್ಯವಸ್ಥೆ ಇದೆ. ಏಕತೆಯದಲ್ಲಿ ವೈವಿಧ್ಯಮಯ ರಾಷ್ಟ್ರವಾಗಿದೆ. ಪ್ರತಿಯೊಂದು ಧರ್ಮವೂ ಶ್ರೇಷ್ಠ. ಆದ್ದರಿಂದ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಬೇಕು. ಸಾಮಾಜಿಕ ನ್ಯಾಯ, ಸಮಾನತೆ, ಐಕ್ಯತೆ, ಏಕತೆ, ಸಹೋದರ ಭಾವನೆ ಮೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Advertisement

ಸಮಾಜದಲ್ಲಿ ಅನ್ಯಾಯ, ಅಧರ್ಮ, ಅಸಮಾನತೆಗಳನ್ನು ಮೆಟ್ಟಿ ನಿಲ್ಲಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವನ್ನು ಕೇಳಿ ಪಡೆಯುವ ಅಧಿಕಾರವಿದೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಸಮಾಜದಲ್ಲಿನ ಅಸಮಾನತೆ ಸಮಾಜಕ್ಕೆ ಅಂಟಿದ ಪಿಡುಗು ಎಂದರು.

ದೊಡ್ಡವರು ಎನ್ನಿಸಿಕೊಂಡವರು ಹೇಳಿದ ಮಾತುಗಳೆಲ್ಲವೂ ನಿಜವಲ್ಲ. ಅದನ್ನು ಪರಿಶೀಲಿಸಿ ವೈಜ್ಞಾನಿಕ ಮನೋಭಾವದಿಂದ ನೋಡಿ ಒಪ್ಪಿಕೊಳ್ಳಬೇಕು. ವಿಮರ್ಶಕ ಗುಣ ಬೆಳೆಸಿಕೊಳ್ಳಬೇಕು. ಸಾಂಸ್ಕೃತಿಕವಾಗಿ ನಾವು ಶ್ರೀಮಂತರಾಗಬೇಕು. ಪರಿಸರ ಪ್ರೀತಿ ಎಲ್ಲರಿಗೂ ಬರಬೇಕು. ಮುಂದಿನ ಪೀಳಿಗೆಗೆ ಪರಿಸರ ಸಂಪತ್ತು ಉಳಿಸಿ ಕೊಡುಗೆಯಾಗಿ ನೀಡಬೇಕು. ಎಂದು ಕರೆ ನೀಡಿದರು.

ವಿದ್ಯಾರ್ಥಿ ಎಸ್‌.ಎಂ. ಗಿರೀಶ್‌ ತೊಣಚೇನಹಳ್ಳಿ ರಚಿಸಿದ ‘ಸ್ವರೂಪ ಸಾಧನೆಗಾಗಿ’ ಕೃತಿ ಬಿಡುಗಡೆಗೊಳಿಸಿದ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌, ಟಿವಿ, ಮೊಬೈಲ್‌ ಹಾವಳಿಯಿಂದಾಗಿ ಸಂವಿಧಾನದ ಮಹತ್ವ ತಿಳಿದುಕೊಳ್ಳುವಲ್ಲಿ ವಿದ್ಯಾರ್ಥಿಗಳು ವಿಫಲರಾಗಿದ್ದಾರೆ. ಯುವಕ-ಯುವತಿಯರಿಗೆ ಮೊಬೈಲ್‌ಗ‌ಳಿದ್ದರೆ ಅದೇ ಪ್ರಪಂಚ ಎನ್ನುವ ಮಟ್ಟಕ್ಕೆ ಸಂಭ್ರಮಿಸುತ್ತಿದ್ದಾರೆ. ಈ ಧೋರಣೆಯಿಂದ ವಿದ್ಯಾರ್ಥಿಗಳು ಹೊರ ಬಂದು ನೈಜ ಪ್ರಪಂಚವನ್ನು ನೋಡಬೇಕು. ಪೋಷಕರು ತಮ್ಮನ್ನು ಓದಿಸಲು ಎಷ್ಟು ಕಷ್ಟ ಪಡುತ್ತಿದ್ದಾರೆಂದು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.

ಭಾರತದ ಸಂವಿಧಾನ ಪವಿತ್ರ ಗ್ರಂಥವಾಗಿದೆ. ಮೀಸಲಾತಿ ಇಲ್ಲದಿದ್ದರೆ ಯಾರಿಗೂ ಅವಕಾಶ ಸಿಗುತ್ತಿರಲಿಲ್ಲ. ಹೆಣ್ಣು ಅಡಿಗೆ ಮತ್ತು ಹೆರಿಗೆ ಮನೆಗೆ ಮಾತ್ರ ಸೀಮಿತವಾಗಿರುತ್ತಿದ್ದಳು. ಮನೆಯಲ್ಲಿ ಹೆಣ್ಣನ್ನು ಸಮಾನವಾಗಿ ನೋಡುತ್ತಾರೆಯೇ ಎಂದು ಪ್ರಶ್ನಿಸಿಕೊಳ್ಳಬೇಕು ಎಂದರು. ಸಂಚಾರಿ ಠಾಣೆ ಪಿಎಸ್‌ಐ ರೇವತಿ, ಪ್ರಾಂಶುಪಾಲ ಬಸವರಾಜಪ್ಪ, ಪ್ರೊ| ಕೆ.ಕೆ. ಕಾಮಾನಿ ಇದ್ದರು.

ಮಹಿಳೆಯರು ಎಲ್ಲ ಹುದ್ದೆಗಳನ್ನು ಅನುಭವಿಸಬಹುದು ಎನ್ನುವ ಸತ್ಯ ತಿಳಿಯಲು ಸಾವಿರಾರು ವರ್ಷಗಳು ಬೇಕಾಯಿತು. ಆ ಹಕ್ಕು ನೀಡಿದ್ದು ನಮ್ಮ ಸಂವಿಧಾನ ಎನ್ನುವುದು ಮುಖ್ಯ. ಲಿಂಗ ಮತ್ತು ಜಾತಿ ತಾರತಮ್ಯದಿಂದ ವ್ಯಕ್ತಿಗಳ ನಡುವೆ ವ್ಯತ್ಯಾಸ ಕಾಣಬಹುದು. ಬಡತನ, ಅನಕ್ಷರತೆ ಕಾರಣದಿಂದಾಗಿ ಸಮಾಜದಲ್ಲಿ ಸಾಕಷ್ಟು ಅವ್ಯವಸ್ಥೆ ಇದೆ. • ಎಚ್. ಬಿಲ್ಲಪ್ಪ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ.

Advertisement

Udayavani is now on Telegram. Click here to join our channel and stay updated with the latest news.

Next