Advertisement

ಲಾಕ್‌ಡೌನ್‌ ಅನಂತರ ಹೇಗಿದೆ ಭಾರತದ ಸ್ಥಿತಿ?

03:16 PM Apr 28, 2020 | sudhir |

ಭಾರತವು ಈಗ ಲಾಕ್‌ಡೌನ್‌ನ 5ನೇ ವಾರದಲ್ಲಿದೆ. ದೇಶದಲ್ಲಿ ಈಗ ಕೋವಿಡ್ ಸೋಂಕಿತರ ಸಂಖ್ಯೆ ಇಪ್ಪತ್ತೇಳು ಸಾವಿರ ಗಡಿದಾಟಿದೆ, ಎಂಟು ನೂರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಆದರೂ ಲಾಕ್‌ಡೌನ್‌ನಿಂದಾಗಿ ವ್ಯಾಪಕವಾಗಿ ರೋಗ ಹರಡುವಿಕೆ ತಗ್ಗಿದೆ ಎನ್ನುವುದು ಸತ್ಯ. ಲಾಕ್‌ಡೌನ್‌ ಇಲ್ಲದೇ ಹೋಗಿದ್ದರೆ, ದೇಶದಲ್ಲೀಗ ಸೋಂಕಿತರ ಸಂಖ್ಯೆ ಲಕ್ಷಗಳಲ್ಲಿ ಇರುತ್ತಿತ್ತು ಎನ್ನಲಾಗುತ್ತಿದೆ. ಆದಾಗ್ಯೂ ಅಪಾಯದ ತೂಗುಗತ್ತಿ ಭಾರತದ ಮೇಲಿಂದ ದೂರ ಸರಿದಿಲ್ಲ, ಮೇ ತಿಂಗಳಾಂತ್ಯದೊಳಗೆ ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ವೃದ್ಧಿಸಲಿದೆ ಎಂಬ ಎಚ್ಚರಿಕೆಯನ್ನೂ ವೈಜ್ಞಾನಿಕ ವಲಯ ಕೊಡುತ್ತಿದೆ. ಈ ನಿಟ್ಟಿನಲ್ಲಿ ಲಾಕ್‌ಡೌನ್‌ ನಂತರದಿಂದ ದೇಶದಲ್ಲಿ ಪರಿಸ್ಥಿತಿ ಹೇಗಿದೆ, ಮುಂದೆ ಹೇಗಿರಲಿದೆ…ಮಾಹಿತಿ ಇಲ್ಲಿದೆ…

Advertisement

ಕಳಂಕದ ಭಯ ಅಪಾಯ ಹೆಚ್ಚಿಸುತ್ತಿದೆ
ಭಾರತದಲ್ಲಿ ಕೋವಿಡ್‌-19 ಸುತ್ತಲೂ ಸಾಮಾಜಿಕ ಕಳಂಕದ ಭಾವನೆಯಿರುವುದರಿಂದಾಗಿ, ಮರಣ ಪ್ರಮಾಣ ಹೆಚ್ಚಾಗುವ ಅಪಾಯವಿದೆ ಎಂದು ಎಚ್ಚರಿಸುತ್ತಾರೆ ಆಲ್‌ ಇಂಡಿಯಾ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸಸ್‌ನ(ಏಮ್ಸ್‌) ನಿರ್ದೇಶಕ ರಂದೀಪ್‌ ಗುಲೇರಿಯಾ. ಕೇಂದ್ರ ಸರಕಾರದ ಆರೋಗ್ಯ ಮಾರ್ಗದರ್ಶಕ ಪರಿಣತರಲ್ಲಿ ಒಬ್ಬರಾಗಿರುವ ಗುಲೇರಿಯಾ ಅವರು “”ಕೊರೊನಾ ಗಂಭೀರ ಕಾಯಿಲೆಯಲ್ಲ. ಚಿಕಿತ್ಸೆ ಪಡೆದು ಚೇತರಿಸಿಕೊಂಡವರೇ ಇದಕ್ಕೆ ಉದಾಹರಣೆ. ಆದರೆ ಸೋಂಕಿತರನ್ನು ಕಳಂಕಿತರಂತೆ ನೋಡಲಾಗುತ್ತಿರುವುದರಿಂದಾಗಿ, ಎಲ್ಲರೂ ಹೆದರುತ್ತಿದ್ದಾರೆ. ರೋಗಲಕ್ಷಣ ಕಾಣಿಸಿಕೊಂಡರೂ ಸಮಾಜಕ್ಕೆ ಹೆದರಿ, ಮುಚ್ಚಿಡುತ್ತಾ ಹೋದರೆ ಅಪಾಯ ಹೆಚ್ಚುತ್ತದೆ. ಅನೇಕರು ತಮಲ್ಲಿ ರೋಗಲಕ್ಷಣಗಳು ಕಾಣಿಸಿಕೊಂಡಾಗ ಚಿಕಿತ್ಸೆಗೆ ಬರುವುದಿಲ್ಲ, ಬದಲಾಗಿ ಇನ್ನೇನು ಉಸಿರಾಡುವುದಕ್ಕೇ ಆಗುವುದಿಲ್ಲ ಎಂಬ ಸ್ಥಿತಿ ತಲುಪಿದಾಗ ವೈದ್ಯರೆಡೆಗೆ ಧಾವಿಸುತ್ತಾರೆ. ಆಗ ಅಪಾಯ ಅಧಿಕವಿರುತ್ತದೆ. ಸೋಂಕಿತರಲ್ಲಿ 80 ಪ್ರತಿಶತ ರೋಗಿಗಳಲ್ಲಿ ಸಾಮಾನ್ಯ ಲಕ್ಷಣಗಳು ಇರುತ್ತವೆ, 15 ಪ್ರತಿಶತ ಜನರನ್ನು ಆಕ್ಸಿಜನ್‌ ಥೆರಪಿಯಿಂದ ಗುಣಪಡಿಸಬಹುದು, ಕೇವಲ 5 ಪ್ರತಿಶತ ಜನರಿಗೆ ವೆಂಟಿಲೇಟರ್‌ ಬೇಕಾಗುತ್ತದೆ.’ ಎನ್ನುವ ಗುಲೇರಿಯಾ, ರೋಗಿಗಳ ಕುಟುಂಬವನ್ನು ಎಲ್ಲರೂ ಬೆಂಬಲಿಸುವ ಅಗತ್ಯವಿದೆ ಎಂದು ಸಲಹೆ ನೀಡುತ್ತಾರೆ.

2 ಲಕ್ಷ ತಲುಪಿರುತ್ತಿತ್ತು!
ಮಾರ್ಚ್‌ 24ರಂದು ಲಾಕ್‌ಡೌನ್‌ ಆರಂಭವಾದಾಗ, ದೇಶದಲ್ಲಿ ಕೋವಿಡ್‌-19 ಸೋಂಕಿತರ ದಿನನಿತ್ಯದ ಬೆಳವಣಿಗೆ ಪ್ರಮಾಣ 21.4 ಪ್ರತಿಶತದಷ್ಟಿತ್ತು. ಅದೇ ವೇಗದಲ್ಲೇ ಈ ಸಾಂಕ್ರಾಮಿಕವೇನಾದರೂ ಹರಡಿದ್ದರೆ, ಒಂದು ತಿಂಗಳಲ್ಲಿ (ಅಂದರೆ ಎಪ್ರಿಲ್‌ 24ರ ವೇಳೆಗೆ) 2 ಲಕ್ಷಕ್ಕೆ ಏರುತ್ತಿತ್ತು. ಆದರೆ ಎಪ್ರಿಲ್‌ 24ಕ್ಕೆ ದೇಶದಲ್ಲಿ 23, 077 ಪ್ರಕರಣಗಳು ದಾಖಲಾದವು. ಅಂದು ದೇಶದಲ್ಲಿ ಸೋಂಕಿತರ ಸರಾಸರಿ ಏರಿಕೆ ಪ್ರಮಾಣ 8.1 ರಷ್ಟಿತ್ತು. ಆದಾಗ್ಯೂ, ಸೋಂಕು ಯಾವ ಪ್ರಮಾಣದಲ್ಲಿ ಹಾಗೂ ಎಷ್ಟು ವೇಗವಾಗಿ ಹರಡುತ್ತದೆ ಎನ್ನುವುದಕ್ಕೆ ಅನೇಕ ಅಂಶಗಳು ಕೆಲಸ ಮಾಡುತ್ತವೆ.

ಬೆಳವಣಿಗೆ ವೇಗ ತಗ್ಗಲೇಬೇಕು
ಎಪ್ರಿಲ್‌ 24ರ ವೇಳೆಗೆ ದೇಶದಲ್ಲಿ ಕೊರೊನಾ ಪ್ರಕರಣಗಳ ಬೆಳವಣಿಗೆ ಪ್ರಮಾಣ ನಿತ್ಯ 8 ಪ್ರತಿಶತ ದಾಖಲಾಗಿದೆ. ಇದೇ ವೇಗವೇ ಸ್ಥಿರವಾಗಿ ಮುಂದುವರಿದರೆ, ಮೇ 1ಕ್ಕೆ ಭಾರತದಲ್ಲಿ 39,550 ಪ್ರಕರಣಗಳು ಹಾಗೂ ಮೇ 24ರ ಒಳಗೆ 2,32,216 ಪ್ರಕರಣಗಳು ದಾಖಲಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next