ಹೊಸದಿಲ್ಲಿ: ಭಾರತೀಯ ಆ್ಯತ್ಲೆಟಿಕ್ಸ್ ಫೆಡರೇಶನ್ (ಎಎಫ್ಐ)ನ ಉನ್ನತ ನಿರ್ವಹಣೆ ನಿರ್ದೇಶಕ ವೋಲ್ಕರ್ ಹೆರ್ಮಾನ್ ಅವರು ಹಠಾತ್ ತನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಜತೆಗಿನ ಒಪ್ಪಂದವನ್ನು ಕ್ರೀಡಾ ಸಚಿವಾಲಯ 2024ರ ಒಲಿಂಪಿಕ್ಸ್‌ವರೆಗೆ ವಿಸ್ತರಿಸಿತ್ತು. ಆದರೆ ಹುದ್ದೆಯ ಜತೆ ತಾನಾಗಿ ನಿರೀಕ್ಷೆ ಮಾಡಿಕೊಂಡಿದ್ದ ಗುರಿ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆರ್ಮಾನ್ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಹೆರ್ಮಾನ್ ಕೆಲವು ವಾರಗಳ ಹಿಂದೆ ರಾಜೀನಾಮೆ ನೀಡಿರುವುದನ್ನು ಎಎಫ್ಐ ಮೂಲಗಳು ದೃಢಪಡಿಸಿದ್ದು ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲವೆಂದು ತಿಳಿಸಿದೆ. ಜರ್ಮನಿಯ ಹೆರ್ಮಾನ್ ಅವರನ್ನು ಜೂನ್ 2019ರಂದು ಈ ಹುದ್ದೆಗೆ ನೇಮಕ ಮಾಡಲಾಗಿತ್ತು. ಈಗ ಮುಂದೂಡಲ್ಪಟ್ಟ 2021ರ ಟೋಕಿಯೊ ಒಲಿಂಪಿಕ್ಸ್‌ವರೆಗೆ ಅವರ ಒಪ್ಪಂದದ ಅವಧಿ ಇತ್ತು. ಕಳೆದ ಸೆಪ್ಟಂಬರ್‌ನಲ್ಲಿ ಕ್ರೀಡಾ ಸಚಿವಾಲಯ ಅವರ ಒಪ್ಪಂದವನ್ನು 2024ರ ಒಲಿಂಪಿಕ್ಸ್‌ವರೆಗೆ ವಿಸ್ತರಿಸಿತ್ತು. ಆದರೆ ಈ ಹೊಸ ಒಪ್ಪಂದಕ್ಕೆ ಅವರು ಸಹಿ ಹಾಕಿಲ್ಲವೆಂದು ಎಎಫ್ಐ ಮೂಲಗಳು ತಿಳಿಸಿವೆ.
ನಿರ್ದೇಶಕ ಹುದ್ದೆಯ ಜತೆ ಕೆಲವೊಂದು ನಿರೀಕ್ಷೆಗಳನ್ನು ಸ್ವಯಂ ಆಗಿ ಇಟ್ಟುಕೊಂಡಿದ್ದೆ. ಆದರೆ ಈ ನಿರೀಕ್ಷೆ ಸಾಧಿಸಲು ಕಷ್ಟ ಎಂದೆನಿಸಿ ಮೂರು ವಾರಗಳ ಹಿಂದೆ ಹುದ್ದೆಗೆ ರಾಜೀನಾಮೆ ನೀಡಿದೆ ಎಂದು ಹೆರ್ಮಾನ್ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಹೆರ್ಮಾನ್ ಅವರು ಕಳೆದ ಒಂದೂವರೆ ವರ್ಷಗಳ ಕಾಲ ನಿರ್ದೇಶಕ ಹುದ್ದೆಯಲ್ಲಿ ಆ್ಯತ್ಲೀಟ್‌ಗಳಿಗೆ ಮಾರ್ಗದರ್ಶನ ನೀಡಿದ್ದರು.
ಕ್ರೀಡೆಯ ಉನ್ನತ ನಿರ್ವಹಣೆ
ಯಲ್ಲಿ ಕೆಲಸ ಮಾಡಲು ಉನ್ನತ ಮಟ್ಟದ ನಿರೀಕ್ಷೆಗಳು ಬೇಕಾಗುತ್ತವೆೆ. ಒಂದೇ ಗುರಿ ಯೊಂದಿಗೆ ನಾವೆಲ್ಲ ಕೆಲಸ ಮಾಡಬೇಕಾ ಗುತ್ತದೆ. ಕ್ರೀಡೆಗೆ ಸಂಬಂಧಿಸಿದ ಎಲ್ಲರೂ ಒಂದೇ ಚಿತ್ತದಿಂದ ಕೆಲಸ ಮಾಡಿದರೆ ಯಶಸ್ಸು ಸಾಧಿಸಬಹುದು. ಭಾರತೀಯ ಆ್ಯತ್ಲೀಟ್‌ಗಳಿಗೆ ಭವಿಷ್ಯದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದವರು ಹೇಳಿದ್ದಾರೆ.
ಹೆರ್ಮಾನ್ ಅವರು ಉನ್ನತ ನಿರ್ವಹಣೆ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ ಎರಡನೇ ವ್ಯಕ್ತಿಯಾಗಿದ್ದಾರೆ. ಈ ಹಿಂದೆ ರಿಯೋ ಒಲಿಂಪಿಕ್ಸ್ ಮೊದಲು 2015ರ ಅಕ್ಟೋಬರ್‌ನಲ್ಲಿ ಅಮೆರಿಕದ ಡೆರಿಕ್ ಬೂಸೆ ಅವರು ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಆದರೆ ಏಳು ತಿಂಗಳು ಹುದ್ದೆಯಲ್ಲಿದ್ದ ಬಳಿಕ ರಾಜೀನಾಮೆ ಸಲ್ಲಿಸಿದ್ದರು.