Advertisement

ಅಪ್ರಾಪ್ತ ಲೈಂಗಿಕ ಕಿರುಕುಳ : ಅಮೆರಿಕದಲ್ಲಿ ಕಾಶ್ಮೀರ ಅಥ್ಲೀಟ್‌ ಬಂಧನ

03:45 AM Mar 04, 2017 | Team Udayavani |

ನ್ಯೂಯಾರ್ಕ್‌: ಹರಸಾಹಸ ಪಟ್ಟು ಅಮೆರಿಕ ತಲುಪಿ ಅಲ್ಲಿನ ವಿಶ್ವ ಸ್ನೋಶೂ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದ ಕಾಶ್ಮೀರದ ತನ್ವೀರ್‌ ಹುಸೇನ್‌ ಭಾರೀ ಆಘಾತಕ್ಕೊಳಗಾಗಿದ್ದಾರೆ. ಅವರನ್ನು ನ್ಯೂಯಾರ್ಕ್‌ನ ಸರನಾಕ್‌ ಲೇಕ್‌ ಎಂಬ ಹಳ್ಳಿಯ ಪೊಲೀಸರು 13 ವರ್ಷದ ಅಪ್ರಾಪೆ¤ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಿದ್ದಾರೆ. ಸೋಮವಾರ ಸಂಜೆಯಷ್ಟೊತ್ತಿಗೆ ಪ್ರಕರಣ ನಡೆದಿದ್ದು, ಬುಧವಾರ ಬಂಧನಕ್ಕೊಳಗಾಗಿದ್ದಾರೆ. ಮುಂದಿನ ಸೋಮವಾರ ಹುಸೇನ್‌ ಪ್ರಕರಣದ ವಿಚಾರಣೆಯಾಗಲಿದೆ.

Advertisement

ಹುಸೇನ್‌ ಜೊತೆಗೆ ತೆರಳಿದ್ದ ಭಾರತ ಸ್ನೋ ಶೂ ಒಕ್ಕೂಟದ ಅಧ್ಯಕ್ಷ ಅಬಿದ್‌ ಖಾನ್‌ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಸರನಾಕ್‌ ಲೇಕ್‌ ಜನರು ನಮ್ಮನ್ನು ಕರೆಸಿಕೊಳ್ಳಲು ಭಾರೀ ಯತ್ನ ನಡೆಸಿ ಯಶಸ್ವಿಯಾಗಿದ್ದರು. ನಮಗೆ ಪ್ರೀತಿಪೂರ್ವಕ ಸ್ವಾಗತ ನೀಡಿದ್ದರು. ಸದ್ಯ ಈ ಆರೋಪ ಬಂದಿರುವುದರಿಂದ ಬಹಳ ಮುಜುಗರವಾಗಿದೆ. ಸರನಾಕ್‌ ಲೇಕ್‌ ಜನರಿಗೆ ಮುಖ ತೋರಿಸಲು ನಾಚಿಕೆಯಾಗಿದೆ ಎಂದಿದ್ದಾರೆ.

ತಮ್ಮ ಬಳಿ ಮಾತನಾಡಿರುವ ಹುಸೇನ್‌ ತಾನು ನಿರಪರಾಧಿ ಎಂದಿದ್ದಾರೆ. ಹುಡುಗಿ ತನ್ನನ್ನು ಹಿಂಬಾಲಿಸಿಕೊಂಡು ಬಂದಿದ್ದಳು. ತಾನೇ ಆಕೆಗೆ ಮನೆಗೆ ಹೋಗುವಂತೆ ಸೂಚಿಸಿದ್ದೆ. ಈಗ ಕಿರುಕುಳ ಆರೋಪ ಮಾಡಲಾಗಿದೆ ಎಂದು ಹುಸೇನ್‌ ತಿಳಿಸಿದ್ದಾರೆ. ಜೊತೆಗೆ ಅವರಿಗೆ ಇಂಗ್ಲಿಷ್‌ ಬರದಿರುವುದರಿಂದ ಇನ್ನಷ್ಟು ಸಮಸ್ಯೆಯಾಗಿದೆ ಎಂದು ಅಬಿದ್‌ ವಿವರಿಸಿದ್ದಾರೆ.

ನ್ಯಾಯಾಧೀಶರ ಬಳಿ ಕೂಡ ಹುಸೇನ್‌ ಮನವಿ ಮಾಡಿ ತಾನು ಮುಗ್ಧ, ನನ್ನನ್ನು ಜೈಲಿಗೆ ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ. ಆದರೆ ನ್ಯಾಯಾಧೀಶರು ಈ ಮನವಿಯನ್ನು ಪುರಸ್ಕರಿಸಲಿಲ್ಲ. ತನ್ನ ಮೇಲಿರುವ ಆರೋಪವೇನು ಎಂಬ ಜ್ಞಾನ ಹುಸೇನ್‌ಗಿದ್ದಂತಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು ಸದ್ಯ ಮಟ್ಟಿಗೆ ಜೈಲಿಗೆ ಕಳುಹಿಸಲು ಆದೇಶಿಸಿದ್ದಾರೆ.

ಅಮೆರಿಕ ವೀಸಾ ನಿರಾಕರಣೆ ಮಾಡಿತ್ತು!
ವಿಶೇಷವೆಂದರೆ ತನ್ವೀರ್‌ ವಿಶ್ವ ಸ್ನೋ ಶೂ ಚಾಂಪಿಯನ್‌ಶಿಪ್‌ಗಾಗಿ ಅಮೆರಿಕಕ್ಕೆ ತೆರಳಲು ದೆಹಲಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆಗ ಅವರ ವೀಸಾ ಅರ್ಜಿ ಅಮೆರಿಕ ರಾಯಭಾರ ಕಚೇರಿ ಮಾನ್ಯ ಮಾಡಿರಲಿಲ್ಲ. ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಟ್ರಂಪ್‌ ಸರ್ಕಾರ ಜಗತ್ತಿನ 7 ಮುಸ್ಲಿಂ ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಿಸುವುದಕ್ಕೆ ಅನುಮತಿ ನಿರಾಕರಿಸಿತ್ತು. ಭಾರತ ಪಟ್ಟಿಯಲ್ಲಿಲ್ಲದಿದ್ದರೂ ಟ್ರಂಪ್‌ ಆದೇಶ ಕಾರಣದಿಂದಲೇ ತನ್ವೀರ್‌ಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನಲಾಗಿತ್ತು. ಆಗ ತನ್ವೀರ್‌ ಪರ ಅಮೆರಿಕದ ಇಬ್ಬರು ಸಂಸದರು ಬ್ಯಾಟ್‌ ಬೀಸಿ ವೀಸಾ ಸಿಗುವಂತೆ ನೋಡಿಕೊಂಡಿದ್ದರು. ಇಷ್ಟೆಲ್ಲ ಒದ್ದಾಡಿ ಹೋದ ತನ್ವೀರ್‌ ಕೂಟದಲ್ಲಿ 114ನೇ ಸ್ಥಾನ ಪಡೆದು ಉತ್ತಮ ಎನ್ನಬಹುದಾದ ಪ್ರದರ್ಶನವನ್ನೇ ನೀಡಿದ್ದರು. ಇದೀಗ ಈ ಹಗರಣಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡ ಪರಿಸ್ಥಿತಿಯಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next