ಕೇರಳ: ಸಾಮಾನ್ಯವಾಗಿ ನಾವು ಮದುವೆಗೆ ನಮ್ಮ ಆತ್ಮೀಯರು, ಸಂಬಂಧಿಕರು ಹಾಗೆ ಕೆಲ ಪರಿಚಯಸ್ಥರನ್ನು ಕರೆಯುತ್ತೇವೆ. ಇನ್ನು ಕೆಲವರಿಗೆ ಆಮಂತ್ರಣ ಕೊಟ್ಟು ಬನ್ನಿಯೆಂದು ಹೇಳುತ್ತೇವೆ. ಇದರಲ್ಲಿ ಕೆಲವರು ಮದುವೆಗೆ ಬಾರದಿದ್ದರೂ ದೂರದಿಂದಲೇ ಶುಭಕೋರುತ್ತಾರೆ.
ಮದುವೆಯಾಗಲು ಹೊರಟ ಕೇರಳದ ಜೋಡಿಯೊಂದು ಗಡಿ ಕಾಯುವ ಯೋಧರನ್ನು ತಮ್ಮ ಮದುವೆಗೆ ಬನ್ನಿಯೆಂದು ಕರೆದಿದ್ದಾರೆ. ಜೋಡಿ ಆರ್ಮಿಗೆ ಬರೆದ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಾಹುಲ್ ಹಾಗೂ ಕಾರ್ತಿಕಾ ಎನ್ನುವ ಜೋಡಿ ಮದುವೆಗೆ ಬನ್ನಿಯೆಂದು ಯೋಧರಿಗೆ ಆಮಂತ್ರಣ ಕಳುಹಿಸಿದ್ದಾರೆ. “ಪ್ರೀತಿಯ ವೀರರೇ, ನಾವು ನವೆಂಬರ್ 10 ರಂದು ಮದುವೆಯಾಗುತ್ತಿದ್ದೇವೆ. ನಮ್ಮ ದೇಶದ ಬಗ್ಗೆ ಪ್ರೀತಿ, ದೃಢತೆ ಮತ್ತು ದೇಶಭಕ್ತಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರುತ್ತೇವೆ. ನಮ್ಮನ್ನು ಸುರಕ್ಷಿತವಾಗಿರಿಸಿದ್ದಕ್ಕಾಗಿ ನಾವು ನಿಮಗೆ ಪ್ರೀತಿಯ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇವೆ. ನಿಮ್ಮಿಂದಾಗಿ ನಾವು ಶಾಂತಿಯುತವಾಗಿ ಮಲಗಿದ್ದೇವೆ. ನಮ್ಮ ಪ್ರೀತಿಪಾತ್ರರ ಜೊತೆ ನಮಗೆ ಸಂತೋಷದ ದಿನಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದಾಗಿ ನಾವು ಸುಖವಾಗಿ ಮದುವೆಯಾಗುತ್ತಿದ್ದೇವೆ. ನಮ್ಮ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ನಾವು ತುಂಬಾ ಸಂತೋಷಪಡುತ್ತೇವೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದವನ್ನು ನಾವು ಬಯಸುತ್ತೇವೆ. ” ಎಂದು ಬರೆದು ಯೋಧರಿಗೆ ಕಳುಹಿಸಿದ್ದಾರೆ.
ಈ ಮದುವೆಯ ಆಮಂತ್ರಣವನ್ನು ಓದಿದ ಬಳಿ ಭಾರತೀಯ ಸೇನೆ ಅದರ ಫೋಟೋವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು “ಇಂಡಿಯನ್ ಆರ್ಮಿ ಮದುವೆಯ ಆಮಂತ್ರಣಕ್ಕಾಗಿ ರಾಹುಲ್ ಮತ್ತು ಕಾರ್ತಿಕಾ ಅವರಿಗೆ ಪ್ರಾಮಾಣಿಕ ಧನ್ಯವಾದಗಳನ್ನು ತಿಳಿಸುತ್ತದೆ ಮತ್ತು ದಂಪತಿಗಳು ತುಂಬಾ ಸಂತೋಷದಾಯಕ ಮತ್ತು ಆನಂದದಾಯಕ ವಿವಾಹಿತ ಜೀವನವನ್ನು ನಡೆಸಲಿ” ಎಂದು ಶುಭಕೋರಿದ್ದಾರೆ.
ಸದ್ಯ ಇಂಡಿಯನ್ ಆರ್ಮಿ ಹಂಚಿಕೊಂಡಿರುವ ಈ ಫೋಸ್ಟ್ ವೈರಲ್ ಆಗಿದೆ. 86 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಮದುವೆಗೆ ಇದೊಂದು ಅದ್ಭುತ ಉಡುಗೊರೆ ಜೈ ಹಿಂದ್ ರಿಯಲ್ ಹೀರೋಸ್ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.