ಶ್ರೀನಗರ: ‘ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತದ ನೆಲದೊಳಗೆ ಭಾರೀ ಪ್ರಮಾಣದಲ್ಲಿ ಉಗ್ರರನ್ನು ನುಗ್ಗಿಸಲು ಪಾಕಿಸ್ಥಾನ ನಿರಂತರ ಯತ್ನ ನಡೆಸುತ್ತಿದೆ. ಇದನ್ನು ತಡೆಯಲು ಭಾರತ ಬೋಫೋರ್ಸ್ ಫಿರಂಗಿಯನ್ನು ಬಳಸಿರುವ ವಿಷಯ ಇದೀಗ ಬಹಿರಂಗವಾಗಿದೆ.
ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಒಳಗಿರುವ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಬೋಫೊರ್ಸ್ ಫಿರಂಗಿಯನ್ನು ಬಳಸಲಾಗಿದೆ. ಪಾಕ್ ನ ಈ ಶಿಬಿರಗಳು ಉಗ್ರರು ಒಳ ನುಸುಳಲು ಬೆಂಬಲ ನೀಡುತ್ತಿದ್ದವು ಎಂದು ಸೇನೆಯ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
ಸಾಮಾನ್ಯವಾಗಿ ಯುದ್ಧ ಸಂದರ್ಭಗಳಲ್ಲಿ ಮಾತ್ರ ಬೋಫೊರ್ಸ್ ಫಿರಂಗಿಗಳನ್ನು ಬಳಸಿಕೊಂಡ ಉದಾಹರಣೆಗಳಿವೆ. ಸುಮಾರು 38 ಕಿ.ಮೀ. ದೂರದವರೆಗೂ ಗುರಿಯಿಟ್ಟು ದಾಳಿ ಮಾಡುವ ಸಾಮರ್ಥ್ಯ ಬೋಫೊರ್ಸ್ ಫಿರಂಗಿಗಳಿಗೆ ಇದೆ.
ಉಗ್ರರಿಗೆ ಬೆಂಬಲ ನೀಡಲು ಪಾಕ್ ಗಡಿ ಭದ್ರತಾ ಪಡೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿರಂತರ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಇದರೊಂದಿಗೆ ಹೆಚ್ಚು ತೀಕ್ಷ್ಣತೆ ಹೊಂದಿರುವ ಅತಿ ಸಾಮರ್ಥ್ಯದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತು ಉಗ್ರರ ಶಿಬಿರ, ಹಾಗೂ ಒಳನುಸುಳುವಿಕೆಗೆ ಸಹಕಾರ ನೀಡುವ ಉಗ್ರ ತಯಾರಿ ಕೇಂದ್ರಗಳನ್ನು ಗುರಿಯಾಗಿಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅಂದಾಜಿಸಲಾಗುತ್ತಿದೆ.
‘ಭಾರತ ಬೋಫೊರ್ಸ್ ಫಿರಂಗಿ ಬಳಸಿದೆ ಎಂಬುದಕ್ಕೆ ಪೂರಕವಾಗಿ ನೀಲಂ ಕಣಿವೆಯಲ್ಲಿ ಭಾರತದ ಕಡೆಯಿಂದ ಫಿರಂಗಿಗಳು ಬಂದು ಅಪ್ಪಳಿಸುತ್ತಿದ್ದುದನ್ನು ಪಾಕ್ ನಾಗರಿಕರು ವೀಡಿಯೋ ಮಾಡಿ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.