ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಸೇನಾ ಜಮಾವಣೆ ಮಾಡುತ್ತಿರುವ ಬೆನ್ನಲ್ಲೇ ಮತ್ತೊಂದೆಡೆ ಭಾರತೀಯ ಸೇನಾಪಡೆ ಇತ್ತೀಚೆಗೆ ಪಾಕಿಸ್ತಾನದ ಉಗ್ರರ ನೆಲೆ ಮೇಲೆ ಮತ್ತೊಂದು ಸರ್ಜಿಕಲ್ ದಾಳಿ ನಡೆಸಿರುವುದಾಗಿ ಟಿವಿ ಚಾನೆಲ್ ಗಳ ವರದಿ ತಿಳಿಸಿದೆ. ಆದರೆ ಈ ಬಗ್ಗೆ ಭಾರತದ ಸೇನೆಯಾಗಲಿ, ಸರಕಾರವಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಜುಲೈ 30ರಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಫಿರಂಗಿ ದಾಳಿ ನಡೆಸಿ ಧ್ವಂಸಗೊಳಿಸಿರುವುದಾಗಿ ವರದಿ ವಿವರಿಸಿದೆ.
ಕ್ಲಸ್ಟರ್ ಬಾಂಬ್ ಗಳನ್ನು ಉಪಯೋಗಿಸಿ ಭಾರತೀಯ ಸೇನೆ ದಾಳಿ ನಡೆಸಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿದೆ. ಆದರೆ ಭಾರತೀಯ ಸೇನೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿಲ್ಲ.
ಜಮ್ಮು-ಕಾಶ್ಮೀರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರುತ್ತಿದೆ ಎಂಬ ಆತಂಕದ ನಡುವೆಯೇ ಈ ಊಹಾಪೋಹದ ವರದಿ ಬಿತ್ತರಗೊಂಡಿದೆ. ಅಷ್ಟೇ ಅಲ್ಲ ಪಾಕಿಸ್ತಾನದ ಮಾಧ್ಯಮಗಳಲ್ಲಿ ಭಾರತೀಯ ಸೇನಾ ಪಡೆ ಅಂತಾರಾಷ್ಟ್ರೀಯ ಗಡಿ ನಿಯಮ ಉಲ್ಲಂಘಿಸಿ ದಾಳಿ ನಡೆಸಿರುವುದಾಗಿ ಆರೋಪಿಸಿ ವರದಿ ಮಾಡಿವೆ.
ಭದ್ರತೆಯ ದೃಷ್ಟಿಯಿಂದ ಅಮರನಾಥ ಯಾತ್ರೆ ಬಳಿಕ ಮಚೈಲ್ ಮಾತಾ ಯಾತ್ರೆಯನ್ನು ಕೂಡಾ ಜಮ್ಮು ಕಾಶ್ಮೀರ ಸರಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದರಿಂದಾಗಿ ವಿಮಾನ ನಿಲ್ದಾಣಗಳಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, 10 ಸಾವಿರಕ್ಕಿಂತ ಕಡಿಮೆ ದರದ ಟಿಕೆಟ್ ಸಿಗದೇ ಪರದಾಡುವಂತಾಗಿದೆ ಎಂದು ವರದಿ ವಿವರಿಸಿದೆ.