Advertisement

ಗಡಿಯತ್ತ ಟ್ಯಾಂಕರ್‌ಗಟ್ಟಲೆ ತೈಲ ರವಾನೆ ; ಸೇನೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಈ ಕ್ರಮ

02:56 AM Jun 22, 2020 | Hari Prasad |

ಹೊಸದಿಲ್ಲಿ: ಭಾರತ – ಚೀನ ಗಡಿಯಲ್ಲಿ ಏರ್ಪಟ್ಟಿರುವ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ, ಭಾರತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾರಂಭಿಸಿದೆ.

Advertisement

ಗಡಿಯಲ್ಲಿ ಚೀನ ಕಡೆಯಿಂದ ಆಗಿರುವ ಹೆಚ್ಚುವರಿ ಸೇನೆ ನಿಯೋಜನೆಗೆ ಪ್ರತಿಯಾಗಿ ಭಾರತವೂ ಹೆಚ್ಚುವರಿ ಸೇನೆ ನಿಯೋಜನೆಗೆ ಮುಂದಾಗಿದೆ.

ಮತ್ತೊಂದೆಡೆ, ವಾಯು­ಪಡೆಯು ಲಡಾಖ್‌ ಹಾಗೂ ಲೇಹ್‌ನಲ್ಲಿ­ರುವ ವಾಯು ನೆಲೆಗಳಿಗೆ ಸುಖೋಯ್‌ ಮುಂತಾದ ಯುದ್ಧ ವಿಮಾನಗಳನ್ನು ರವಾನಿಸಿದೆ. ಇದೆಲ್ಲದರ ಜೊತೆಯಲ್ಲೇ, ದೇಶೀಯ ತೈಲ ಕಂಪನಿಗಳು ಲಡಾಖ್‌ನಲ್ಲಿರುವ ಸೇನಾ ತೈಲ ಭಂಡಾರಕ್ಕೆ ಅಪಾರ ಪ್ರಮಾಣದ ತೈಲವನ್ನು ಸರಬರಾಜು ಮಾಡಲಾರಂಭಿಸಿವೆ.

ಭಾರತೀಯ ವಾಯುಪಡೆ, ಲೇಹ್‌ ಹಾಗೂ ಶ್ರೀನಗರದಲ್ಲಿ­ರುವ ತನ್ನ ವಾಯುನೆಲೆಗಳಿಗೆ ಸುಖೋಯ್‌ 30 ಎಂಕೆಐ, ಜಾಗ್ವಾರ್‌, ಮಿರಾಜ್‌ 2000 ಯುದ್ಧ ವಿಮಾನಗಳನ್ನು ರವಾನಿಸಿದೆ. ಆ ವಿಮಾನಗಳಿಗಾಗಿ ಲಡಾಖ್‌ನಲ್ಲಿರುವ ತೈಲ ಭಂಡಾರಕ್ಕೆ ಅಗತ್ಯ­ವಿ­ರುವ ತೈಲವನ್ನು ರವಾನಿಸಲು ತೈಲ ಕಂಪನಿಗಳು ನಿರತವಾಗಿವೆ. ಜೊತೆಯಲ್ಲೇ, ಜೆಟ್‌ ಯುದ್ಧ ವಿಮಾನಗಳಿಗೆ ಬೇಕಾಗುವ ಇಂಧನ­ವನ್ನು ಅಗಾಧ ಪ್ರಮಾಣದಲ್ಲಿ ಲಡಾಖ್‌ಗೆ ಕಳುಹಿಸಲಾಗುತ್ತಿದೆ.

ದಿನವೊಂದಕ್ಕೆ 100 ಟ್ಯಾಂಕರ್‌ ತೈಲ: ಜಮ್ಮು, ಜಲಂಧರ್‌, ಸಂಗ್ರೂರ್‌ನಲ್ಲಿರುವ ಇಂಡಿಯನ್‌ ಆಯಿಲ್‌ ತೈಲಾಗಾರಗಳಿಂದ ದಿನಕ್ಕೆ ಏನಿಲ್ಲವೆಂದರೂ, 100 ಟ್ಯಾಂಕರ್‌ಗಳಷ್ಟು ತೈಲ ರವಾನೆಯಾ­ಗುತ್ತಿದೆ. ಡೀಸೆಲ್‌, ಜೆಟ್‌ ಇಂಧನ, ಸೀಮೆ ಎಣ್ಣೆ, ಪೆಟ್ರೋಲನ್ನು ಕಾರ್ಗಿಲ್‌, ಲೇಹ್‌ ಹಾಗೂ ಗಡಿ ರೇಖೆಯ ಸನಿಹಕ್ಕೆ ಕೊಂಡೊಯ್ಯಲಾಗುತ್ತಿದೆ. ಪಂಜಾಬ್‌ನ ಭಟಿಂಡಾದಲ್ಲಿರುವ ಹಿಂದೂಸ್ತಾನ್‌ ಪೆಟ್ರೋಲಿಯಂ ತೈಲಾಗಾರದಿಂದಲೂ ತೈಲ ರವಾನೆಯಾಗುತ್ತಿದೆ.

Advertisement

ಆಮದು ತಡೆಗೆ ಕ್ರಮ: ಹೆಚ್ಚುತ್ತಿರುವ ಚೀನ ಸಾಮಗ್ರಿ ಬಹಿಷ್ಕಾರದ ಕೂಗಿಗೆ ಸ್ಪಂದಿಸಿರುವ ಕೇಂದ್ರ ಸರಕಾರ, ಈ ನಿಟ್ಟಿನಲ್ಲಿ ಮತ್ತೂಂದು ಹೆಜ್ಜೆಯನ್ನಿಟ್ಟಿದೆ. ದೇಶೀಯ ಮಾರುಕಟ್ಟೆಯ ವರ್ತಕರ ಸಮೂಹಕ್ಕೆ ಸೂಚನೆ ರವಾನಿಸಿರುವ ಪ್ರಧಾನಿ ಕಚೇರಿ (ಪಿಎಂಒ), ಚೀನದಿಂದ ಭಾರತಕ್ಕೆ ಅಗ್ಗದ ರೂಪದಲ್ಲಿ ಯಾವ ಸಾಮಗ್ರಿಗಳು ಆಮದಾಗುತ್ತಿವೆ, ಅದೇ ಮಾದರಿಯ ಭಾರತೀಯ ಸಾಮಗ್ರಿಗಳಿಗೂ, ಚೀನ ಸಾಮಗ್ರಿಗಳಿಗೆ ಬೆಲೆ ವ್ಯತ್ಯಾಸವೇನಿದೆ, ಭಾರತೀಯ ಸಾಮಗ್ರಿಗಳ ಮೇಲೆ ತೆರಿಗೆಯಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಿದರೆ ಅದೇ ಸಾಮಗ್ರಿಗಳನ್ನು ಇಲ್ಲಿಂದಲೇ ಪಡೆಯಬಹುದೇ ಎಂಬ ಬಗ್ಗೆ ವರದಿಯನ್ನು ನೀಡುವಂತೆ ಸೂಚಿಸಿದೆ.

ಇದಲ್ಲದೆ, ಆತ್ಮನಿರ್ಭರ ಭಾರತವನ್ನು ನಿರ್ಮಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿರುವ ಜೊತೆಯಲ್ಲೇ, ಕಚ್ಚಾ ವಸ್ತುಗಳ ಮೇಲೆ ನಾವು ಚೀನ ಉತ್ಪಾದನಾ ರಂಗವನ್ನು ಅವಲಂಬಿಸುವುದನ್ನೂ ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲು ಇದು ನೆರವಾಗುತ್ತದೆ ಎಂದು ಪ್ರಧಾನಿಯವರ ಕಚೇರಿ ಮೂಲಗಳು ತಿಳಿಸಿವೆ.

ಹೃದಯ ವೈಶಾಲ್ಯ: ಗಾಲ್ವನ್‌ ಘರ್ಷಣೆ ನಡೆದ ಮರುದಿನ ಅಂದರೆ ಜೂ. 16ರಂದು ಹಿಂಸಾಚಾರ ನಡೆದಿದ್ದ ಜಾಗದಲ್ಲಿ ಭಾರತೀಯ ಯೋಧರು ಶತ್ರುಗಳ ಬಗ್ಗೆಯೂ ಹೃದಯ ವೈಶಾಲ್ಯತೆ ಮೆರೆದಿದ್ದರೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಜೂ. 15ರ ತಡರಾತ್ರಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು. 40ಕ್ಕೂ ಹೆಚ್ಚು ಚೀನ ಸೈನಿಕರು ಸಾವನ್ನಪ್ಪಿದ್ದರು.

ಮರುದಿನ ಬೆಳಗ್ಗೆ ಗಮನಿಸಿದಾಗ ಘರ್ಷಣೆ ನಡೆದ ಜಾಗದಲ್ಲಿ ಎಲ್ಲೆಂದರಲ್ಲಿ ಚೀನ ಸೈನಿಕರ ಶವಗಳು ಬಿದ್ದಿದ್ದವು.
ಚೀನ ಸೈನಿಕರ ವರ್ತನೆ ಬಗ್ಗೆ ರಕ್ತ ಕುದಿಯುತ್ತಿದ್ದರೂ, ಆ ಸಂದರ್ಭದಲ್ಲಿ ಮಾನವೀಯ ದೃಷ್ಟಿ ಹರಿಸಿದ ಭಾರತೀಯ ಸೈನಿಕರು, ಆ ಶವಗಳನ್ನು ಚೀನ ಸೇನೆಗೆ ಒಪ್ಪಿಸಿದರು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next